ಡಿಕೆಶಿಗೆ ಜಾಮೀನು: ಅಕ್ಷರಶಃ ಆತಂಕದಲ್ಲಿ ಐವರು ಅನರ್ಹ ಶಾಸಕರು
ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ತಿಹಾರ್ ಬಂಧನದಿಂದ ಬಿಡುಗಡೆಗೊಂಡು, ಅದ್ದೂರಿಯಾಗಿ ಬೆಂಗಳೂರಿಗೆ ಪುರಪ್ರವೇಶ ಮಾಡಿದ್ದಾರೆ. "ಇದು ಅಂತ್ಯ ಅಲ್ಲ ಆರಂಭ" ಎಂದು ತೊಡೆತಟ್ಟಿದ್ದಾರೆ.
ಡಿಕೆಶಿ ಬಂಧನದಿಂದ ಬಿಡುಗಡೆಗೊಂಡ ನಂತರ, ರಾಜ್ಯ ರಾಜಕೀಯದ ಸಮೀಕರಣ ಬದಲಾಗುವ ಸಾಧ್ಯತೆಯಿದೆ ಎನ್ನುವ ಮಾತಿನ ನಡುವೆ, ಉಪಚುನಾವಣೆಗೆ ಕಾಂಗ್ರೆಸ್ಸಿಗೆ ಬಲ ಬಂದಂತಾಗಿದೆ.
ಮುಂಬರುವ ಡಿಸೆಂಬರ್ ತಿಂಗಳಲ್ಲಿ ಎದುರಾಗಬಹುದಾದ ಉಪಚುನಾವಣೆಯಲ್ಲಿ, ಡಿಕೆಶಿ, ಹೇಗೆ ತನ್ನ ಖದರ್ ಅನ್ನು ತೋರಿಸಲಿದ್ದಾರೆ ಎನ್ನುವ ಚರ್ಚೆ ಸದ್ಯ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿದೆ.
ಹದಿನೈದು ಅಸೆಂಬ್ಲಿ ಕ್ಷೇತ್ರಗಳ ಪೈಕಿ, ಐದು ಕ್ಷೇತ್ರಗಳಲ್ಲಿನ ಅನರ್ಹ ಶಾಸಕರಿಗೆ ಡಿಕೆಶಿ ಬಿಡುಗಡೆಗೊಂಡ ನಂತರ, ನಡುಕ ಉಂಟಾಗಿದೆ. ಕಾರಣ, ಒಕ್ಕಲಿಗ ವೋಟ್ ಬ್ಯಾಂಕ್:

ಯಶವಂತಪುರದ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉಳಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಇವರ ಒತ್ತಡ, ಮನವಿಗೆ ಜಗ್ಗದೇ, ಸರಕಾರವನ್ನು ಉರುಳಿಸಿಯೇ ಬಿಟ್ಟಿದ್ದರು. ಡಿಕೆಶಿ ಬಿಡುಗಡೆಯಿಂದ ಕಂಗಾಲಾದವರಲ್ಲಿ ಯಶವಂತಪುರದ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಕೂಡಾ ಒಬ್ಬರು.

ಹುಣಸೂರು, ಎಚ್.ವಿಶ್ವನಾಥ್
ಇನ್ನು, ಒಕ್ಕಲಿಗ ಸಮುದಾಯ ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರವೆಂದರೆ ಅದು ಹುಣಸೂರು. ಇಲ್ಲಿ, ಜೆಡಿಎಸ್-ಕಾಂಗ್ರೆಸ್-ಬಿಜೆಪಿ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದ್ದರೂ, ಕ್ಷೇತ್ರದಿಂದ ಕಳೆದ ಬಾರಿ ಗೆಲುವು ಸಾಧಿಸಿದ್ದ ಎಚ್.ವಿಶ್ವನಾಥ್ ಅವರಿಗೆ, ಡಿ.ಕೆ.ಶಿವಕುಮಾರ್, ಬಿಡುಗಡೆಯಿಂದ ನಡುಕ ಉಂಟಾಗಿದೆ.

ಕೆ.ಆರ್.ಪೇಟೆ, ನಾರಾಯಣ ಗೌಡ
ಮತ್ತೊಂದು ಒಕ್ಕಲಿಗ ವೋಟ್ ಬ್ಯಾಂಕ್ ಹೆಚ್ಚಿರುವ ಕ್ಷೇತ್ರವೆಂದರೆ ಅದು ಕೆ.ಆರ್.ಪೇಟೆ. ಅಲ್ಲಿಂದ ಕ್ಷೇತ್ರದ ಅನರ್ಹ ಶಾಸಕ ನಾರಾಯಣ ಗೌಡ ಮತ್ತೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಲ್ಲಿ ಬಿಜೆಪಿ ಅಷ್ಟು ಬಲಿಷ್ಠವಾಗಿಲ್ಲ. ಇವರಿಗೆ ನಿರ್ಣಾಯಕವಾಗಿರುವುದು ಒಕ್ಕಲಿಗ ವೋಟ್. ಹಾಗಾಗಿ, ಡಿಕೆಶಿ ಯಾವ ರೀತಿ ಇಲ್ಲಿ ಪ್ರಭಾವ ಬೀರಲಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್
ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ ಅವರನ್ನು ಮನವೊಲಿಸಲು ಡಿಕೆಶಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೂ, ಎಂಟಿಬಿ ಇವರ ಮಾತಿಗೆ ಬೆಲೆಕೊಡಲಿಲ್ಲ. ನನ್ನ ನಿನ್ನ ರಾಜಕೀಯ ರಣರಂಗ ಏನಿದ್ದರೂ ಹೊಸಕೋಟೆಯಲ್ಲಿ ಎಂದು ಡಿಕೆಶಿ ಅಸೆಂಬ್ಲಿಯಲ್ಲಿ ಹೇಳಿದ್ದರು. ಹಾಗಾಗಿ, ಡಿಕೆಶಿ ಬಿಡುಗಡೆಯಾಗಿದ್ದು, ಎಂಟಿಬಿಗೆ ಆತಂಕ ತಂದಿದೆ.

ಬೆಂಗಳೂರು ನಗರ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್
ಒಕ್ಕಲಿಗರ ಪ್ರಭಾವ ಜಾಸ್ತಿಯಿರುವ ಇನ್ನೊಂದು ಕ್ಷೇತ್ರವೆಂದರೆ ಬೆಂಗಳೂರು ನಗರ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್. ಇಲ್ಲಿನ ಅನರ್ಹ ಶಾಸಕ ಗೋಪಾಲಯ್ಯ, ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ. ಇಲ್ಲಿ ಕೂಡಾ ತ್ರಿಕೋಣ ಸ್ಪರ್ಧೆ ಏರ್ಪಡಬಹುದು. ಡಿಕೆಶಿ ಉಪಸ್ಥಿತಿ ಇವರನ್ನು ಕಾಡುತ್ತಿರುವುದಂತು ಹೌದು.












Click it and Unblock the Notifications