ಪವನ ವಿದ್ಯುತ್ ಯೋಜನೆ, ವಿಜಯಪುರ- ಬಳ್ಳಾರಿಯಲ್ಲಿ ₹10,500 ಕೋಟಿ ಹೂಡಿಕೆ
ಬೆಂಗಳೂರು: ಕರ್ನಾಟಕ ಸೇರಿದಂತೆ ಭಾರತದಲ್ಲಿ ಇಂಧನ ವಲಯದಲ್ಲಿ ಹೆಚ್ಚಿನ ಹೂಡಿಕೆ ಆಗುತ್ತಿದೆ. ಈ ಮಾತಿಗೆ ಪೂರಕೆ ಎಂಬಂತೆ ಮರುಬಳಕೆ ಇಂಧನ ವಲಯದಲ್ಲಿ ಹೆಸರು ಮಾಡಿರುವ ಆರ್.ಪಿ-ಸಂಜೀವ್ ಗೊಯೆಂಕಾ ಉದ್ಯಮ ಸಮೂಹವು ಕರ್ನಾಟಕದ ಎರಡು ಪ್ರಮುಖ ಜಿಲ್ಲೆಗಳಲ್ಲಿ ಪವನ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ಬರೋಬ್ಬರಿ 10,500 ಕೋಟಿ ರೂ. ಬಂಡವಾಳ ಹೂಡಿಕೆಗೆ ಮುಂದಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೇಳಿದರು.
ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು ಈ ಹೂಡಿಕೆ ಕುರಿತು ಮಾಹಿತಿ ನೀಡಿದರು. ಗೊಯೆಂಕಾ ಕಂಪನಿಯು ರಾಜ್ಯದ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ 10,500 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿವೆ. ಪವನ ವಿದ್ಯುತ್ ಘಟಕ ಸ್ಥಾಪನೆ, ಕಂಪನಿಯ ಕೈಗಾರಕಾ ಉದ್ದೇಗಳಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಪವನ ವಿದ್ಯುತ್ ಟವರ್ ಅಭಿವೃದ್ಧಿ ಘಟಕ
ಈಗಾಗಲೇ ಕುಷ್ಟಗಿಯಲ್ಲಿ ಪವನ ವಿದ್ಯುತ್ ಕ್ಷೇತ್ರದಲ್ಲಿ ಅಗತ್ಯವಾಗಿರುವ ಟರ್ಬೈನ್ ಬ್ಲೇಡ್ ಉತ್ಪಾದನೆ ಆರಂಭಿಸಿರುವ ಐನಾಕ್ಸ್ ಜಿಎಫ್ಎಲ್ ಕಂಪನಿಯು ಮುಂಬರುವ ದಿನಗಳಲ್ಲಿ ಇದಕ್ಕೆ ಹತ್ತಿರದ ಪ್ರದೇಶದಲ್ಲೇ ಪವನ ವಿದ್ಯುತ್ತಿಗೆ ಬೇಕಾದ ದೈತ್ಯ ಗೋಪುರಗಳ (ಟವರ್) ಅಭಿವೃದ್ಧಿ ಘಟಕವನ್ನೂ ಆರಂಭಿಸಲು ಮುಂದಾಗಿದೆ. ಈ ಕಂಪನಿಯು ರಾಜ್ಯದಲ್ಲಿ ಈಗಾಗಲೇ 10,000 ಕೋಟಿ ರೂ. ಹೂಡಿಕೆ ಮಾಡಿದೆ ಎಂದು ಹೇಳಿದರು.
ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿರುವ ರಾಮ್ಕಿ ಗ್ರೂಪ್, ರಾಜ್ಯದ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು (ಸಿಇಪಿಟಿ) ಸ್ಥಾಪಿಸಲು ಆಸಕ್ತಿ ತೋರಿಸಿದೆ. ಜತೆಗೆ, ಈ ಕಂಪನಿಯೊಂದಿಗೆ ರಾಜ್ಯದಲ್ಲಿ 'ಫಾರ್ಮಾ ಪಾರ್ಕ್' ಸ್ಥಾಪನೆ ಸಂಬಂಧ ಚರ್ಚಿಸಲಾಗಿದೆ. ಟೆಕ್ ಮಹೀಂದ್ರ ಕಂಪನಿ ಕೂಡ ರಾಜ್ಯದ 2ನೇ ಹಂತದ ನಗರಗಳಲ್ಲಿ ಕೈಗಾರಿಕಾ ಹೂಡಿಕೆ ಮಾಡಲು ಬಯಸಿದೆ ಎಂದು ವಿವರಿಸಿದರು.
'ಸಿಂಗಾಪುರ್ ಪಾರ್ಕ್' ಸ್ಥಾಪನೆ ಪ್ರಸ್ತಾವನೆ
ಸಿಂಗಾಪುರ ಮೂಲದ ಕಂಪನಿಗಳಿಂದ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಬೇಕೆಂಬ ಆಲೋಚನೆ ನಮಗೆ ಗಟ್ಟಿಯಾಗಿದೆ. ಈ ನಿಟ್ಟಿನಲ್ಲಿ ಗುರಿ ಸಾಧಿಸಲು 'ಸಿಂಗಾಪುರ್ ಪಾರ್ಕ್' ಸ್ಥಾಪಿಸುವ ಬಗ್ಗೆ ಆ ದೇಶದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ 'ಸಿಂಗಪುರ್ ಆರ್ಥಿಕ ಅಭಿವೃದ್ಧಿ ಮಂಡಲಿ'ಯ ಪ್ರತಿನಿಧಿಗಳ ಜತೆ ಪ್ರಸ್ತಾಪಿಸಲಾಗಿದೆ. ಸಿಂಗಪುರ್ ಜತೆ ನಮಗೆ ಸೆಮಿಕಂಡಕ್ಟರ್ಸ್, ಜೈವಿಕ ತಂತ್ರಜ್ಞಾನ ಮತ್ತು ವೈಮಾಂತರಿಕ್ಷ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ಹೆಚ್ಚಿನ ಅವಕಾಶಗಳಿವೆ.
ಪರ್ಸನಲ್ ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ತಯಾರಿಕೆಗೆ ಹೆಸರಾಗಿರುವ ಲೆನೋವೋ ಕಂಪನಿಯು ಸ್ಥಳೀಯ ಪೂರೈಕೆದಾರರು ಮತ್ತು ಉದ್ಯಮಿಗಳೊಂದಿಗೆ ಸಹಭಾಗಿತ್ವ ಹೊಂದುವ ಕುರಿತು ವಿಚಾರ ವಿನಿಮಯ ನಡೆಸಿದೆ. ರಕ್ಷಣಾ ಕ್ಷೇತ್ರದಲ್ಲಿರುವ ಎಕ್ಸಾನ್ ಕೇಬಲ್ಸ್, ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ. ಇದನ್ನು ಮನಗಂಡು, ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಅವರಿಗೆ ಕೋರಿದ್ದೇವೆ ಎಂದರು.
ಜಾಗತಿಕ ವ್ಯಾಪಾರ ಹಾಗೂ ಕೈಗಾರಿಕಾ ಪರಿವರ್ತನೆಯ ಮುಂದಿನ ಹಂತದಲ್ಲಿ ಕರ್ನಾಟಕವು ಹಿಂದೆ ಬೀಳದಂತೆ, ಸ್ಪರ್ಧಾತ್ಮಕವಾಗಿ ತನ್ನ ಸ್ಥಾನ ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಸುಂಕ, ಕೃತಕ ಬುದ್ಧಿಮತ್ತೆ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿನ ಭವಿಷ್ಯದ ಕಾರ್ಯತಂತ್ರಗಳ ಕುರಿತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ಯ (ಬಿಸಿಜಿ) ವ್ಯವಸ್ಥಾಪಕ ನಿರ್ದೇಶಕ ನಿಕೊಲಾಸ್ ಲ್ಯಾಂಗ್ ಅವರ ಜೊತೆ ರಾಜ್ಯದ ನಿಯೋಗವು ವಿಸ್ತೃತವಾಗಿ ಚರ್ಚಿಸಿದೆ.
ಸರ್ಕಾರದ ಬೆಂಬಲಕ್ಕೆ ಮೆಚ್ಚುಗೆ
ಕಾಲಮಿತಿ ಒಳಗೆ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ನೀಡುತ್ತಿರುವ ಬೆಂಬಲವನ್ನು ವಿವಿಧ ಉದ್ಯಮ ಸಮೂಹಗಳು ಮುಕ್ತಕಂಠದಿಂದ ಪ್ರಶಂಸಿಸಿವೆ. ಬೆಂಗಳೂರು ಆಚೆಗಿನ ನಗರಗಳು ಸ್ವಯಂ ಸುಸ್ಥಿರ ನಗರಗಳಾಗಿ ಬೆಳೆಯುವುದಕ್ಕೆ ರಾಜ್ಯ ಸರ್ಕಾರದ ನೀಡುತ್ತಿರುವ ಆದ್ಯತೆಗೆ ಪೂರಕವಾಗಿ, ರಾಜ್ಯದಲ್ಲಿನ 2ನೆ ಸ್ಥರದ ನಗರಗಳಲ್ಲಿ ವಿಸ್ತರಣೆಗೆ ಟೆಕ್ ಮಹೀಂದ್ರಾ ಒಲವು ವ್ಯಕ್ತಪಡಿಸಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಇನ್ನೂ 20 ಹೆಚ್ಚುವರಿ ತರಬೇತಿ ಮೂಲಸೌಕರ್ಯ ಸೌಲಭ್ಯಗಳನ್ನು ಸ್ಥಾಪಿಸುವ ಯೋಜನೆ ಹೊಂದಿರುವುದಾಗಿ ಸ್ನೈಡರ್ ಎಲೆಕ್ಟ್ರಿಕ್ ತಿಳಿಸಿದೆ. ಕ್ರಮೇಣ 100 ಕೌಶಲ ಅಭಿವೃದ್ಧಿ ಕೇಂದ್ರಗಳವರೆಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಉಳಿದಂತೆ ಜ್ಯುಬಿಲೆಯೆಂಟ್ ಭಾರ್ತಿಯಾ ಸೇರಿದಂತೆ ಇತರ ಕಂಪನಿಗಳ ಜತೆಯೂ ಹೆಚ್ಚಿನ ಬಂಡವಾಳ ಹೂಡಿಕೆ ಕುರಿತು ಮಾತುಕತೆ ನಡೆದಿದೆ.
ಸ್ವಿಸ್ ಚೇಂಬರ್ಸ್ ಇಂಡಿಯಾ ಜತೆ ಒಪ್ಪಂದ: ಸ್ವಿಟ್ಜರ್ಲೆಂಡಿನ ಕಂಪನಿಗಳೊಂದಿಗೆ ರಾಜ್ಯದ ಕೈಗಾರಿಕಾ ಸಂಬಂಧವನ್ನು ಉತ್ತೇಜಿಸುವ ಉದ್ದೇಶದಿಂದ ಸ್ವಿಸ್ ಚೇಂಬರ್ಸ್ ಇಂಡಿಯಾದೊಂದಿಗೆ ದಾವೋಸ್ ಸಮಾವೇಶದಲ್ಲಿ ರಾಜ್ಯ ಸರ್ಕಾರ ಒಡಂಬಡಿಕೆಗೆ ಸಹಿ ಹಾಕಿದೆ ಎಂದು ಸಚಿವರು ಹೇಳಿದರು.












Click it and Unblock the Notifications