Get Updates
Get notified of breaking news, exclusive insights, and must-see stories!

ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆಯ ನಂತರ ರಾಜಕೀಯ ಸಮೀಕರಣ ಬದಲಾಗಲಿದೆಯಾ?

ಬೆಂಗಳೂರು, ಡಿಸೆಂಬರ್‌ 26: ಬಳ್ಳಾರಿ ಗಣಿ ಧಣಿ ಗಾಲಿ ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಹಾಗೂ ಬೀದರ್‌ಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಎಂಬ ಪಕ್ಷವನ್ನು ಆರಂಭಿಸಿದ್ದಾರೆ. ಒಂದು ಕಾಲದಲ್ಲಿ ಕರ್ನಾಟಕದ ಪ್ರಬಲ ನಾಯಕರಲ್ಲಿ ಒಬ್ಬರಾಗಿದ್ದ ಜನಾರ್ಧನ ರೆಡ್ಡಿ ಅವರು ಪ್ರಸ್ತುತ ರಾಜಕೀಯದ ಮೇಲೆ ಎಷ್ಟು ಪ್ರಭಾವ ಬೀರಬಲ್ಲರು ಎಂಬುದೀಗ ಪ್ರಶ್ನೆಯಾಗಿ ಉಳಿದಿದೆ. ಅವರು ಸ್ಥಾಪಿಸಿದ ಹೊಸ ಪಕ್ಷದಿಂದ ರಾಜಕೀಯ ಸಮೀಕರಣ ಬದಲಾಗಲಿದೆಯಾ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

 ರೆಡ್ಡಿ ಸಹೋದರರ 'ರಿಪಬ್ಲಿಕ್‌ ಆಫ್‌ ಬಳ್ಳಾರಿ'

ರೆಡ್ಡಿ ಸಹೋದರರ 'ರಿಪಬ್ಲಿಕ್‌ ಆಫ್‌ ಬಳ್ಳಾರಿ'

ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದ ತಂದ ಪ್ರಮುಖರಲ್ಲಿ ಜನಾರ್ಧನ ರೆಡ್ಡಿ ಸಹ ಒಬ್ಬರು. ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್‌ ಅವರ ಶಿಷ್ಯರೆಂದೇ ಹೆಸರಾಗಿದ್ದವರು ರೆಡ್ಡಿ ಸಹೋದರರು. ಗಣಿ ವ್ಯವಹಾರದ ಮೂಲಕ ಅಪಾರ ಪ್ರಮಾಣದ ಹಣವನ್ನು ಮಾಡಿದವರು. 2008 ರಲ್ಲಿ ಯೂಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದವರು. ಆ ಸರ್ಕಾರದಲ್ಲಿ ಜನಾರ್ಧನ ರೆಡ್ಡಿ ಹಾಗೂ ಅವರ ಸಹೋದರ ಕರುಣಾಕರ ರೆಡ್ಡಿ ಸಚಿವರಾಗಿದ್ದರು. ಇನ್ನೊಬ್ಬ ಸಹೋದರ ಸೋಮಶೇಖರ ರೆಡ್ಡಿ ಶಾಸಕರಾಗಿದ್ದರು. ರೆಡ್ಡಿ ಆಪ್ತ ಸ್ನೇಹಿತ ಶ್ರೀರಾಮುಲು ಸಹ ಸಚಿವರಾಗಿದ್ದರು. ಶ್ರೀರಾಮುಲು ಅವರ ಸಹೋದರಿ ಶಾಂತಾ ಸಂಸದರಾಗಿದ್ದರು. ಅವರ ಅಳಿಯ ಸುರೇಶ್‌ ಬಾಬು ಶಾಸಕರಾಗಿದ್ದರು. ಇವರಿಗೆಲ್ಲ ಗಾಲಿ ಜನಾರ್ಧನ ರೆಡ್ಡಿಯೇ ಮಾಸ್ಟರ್‌ ಆಗಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ರೆಡ್ಡಿ ಕಟ್ಟಿ ಬೆಳೆಸಿದ ಸಾಮ್ರಾಜ್ಯವನ್ನು 'ರಿಪಬ್ಲಿಕ್‌ ಆಫ್‌ ಬಳ್ಳಾರಿ' ಎಂದೇ ಕರೆಯಲಾಗುತ್ತಿತ್ತು. ಜನಾರ್ಧನ ರೆಡ್ಡಿಯ ದಿಢೀರ್‌ ಬೆಳವಣಿಗೆ ರಾಷ್ಟ್ರ ರಾಜಕಾರಣದಲ್ಲಿಯೂ ಸದ್ದು ಮಾಡಿದ್ದೂ ನಿಜ.

 ಗಣಿ ಧೂಳಿನಲ್ಲಿ ಮಸುಕಾದ ವ್ಯಕ್ತಿತ್ವ

ಗಣಿ ಧೂಳಿನಲ್ಲಿ ಮಸುಕಾದ ವ್ಯಕ್ತಿತ್ವ

ಪ್ರಬಲ ನಾಯಕ ಗಾಲಿ ಜನಾರ್ಧನ ರೆಡ್ಡಿ ಅವರ ಮೇಲೆ ಅಕ್ರಮ ಗಣಿಗಾರಿಕೆ ಆರೋಪಗಳು ಕೇಳಿಬಂದವು. 2011ರ ಜುಲೈನಲ್ಲಿ ಅಂದಿನ ಲೋಕಾಯಕ್ತರಾಗಿದ್ದ ಸಂತೋಷ ಹೆಗ್ಡೆ ಅವರು ಬಳ್ಳಾರಿಯ ಅಕ್ರಮ ಗಣಿಗರಿಕೆ ಕುರಿತು ವರದಿ ನೀಡಿದರು. ತೆರಿಗೆ ಇಲಾಖೆ ಅಧಿಕಾರಿಗಳು ರೆಡ್ಡಿ ಹಾಗೂ ಆಪ್ತರಿಗೆ ಸೇರಿದ್ದ ಎಲ್ಲಾ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸಿದರು. ರೆಡ್ಡಿ ಜೈಲು ಪಾಲಾದರು. ಜಾಮೀನಿಗಾಗಿ ಅಂದಿನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಲಂಚ ನೀಡುವ ಪ್ರಯತ್ನಗಳನ್ನೂ ರೆಡ್ಡಿ ಆಪ್ತರು ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದವು.

 ಆರಂಭವಾದ ಮಹಾಪತನ

ಆರಂಭವಾದ ಮಹಾಪತನ

ಜನಾರ್ಧನ ರೆಡ್ಡಿ 2011 ರಿಂದ 2015ರ ವರೆಗೂ ಜೈಲಿನಲ್ಲೇ ಉಳಿದರು. ಇತ್ತ ರಾಜ್ಯ ರಾಜಕಾರಣ ಹಾಗೂ ರೆಡ್ಡಿ ಅವರ ಕುಟುಂಬದಲ್ಲಿ ಹಲವಾರು ಬೆಳವಣಿಗೆಗಳು ನಡೆದವು. ಆಪ್ತ ಶ್ರೀರಾಮುಲು ಬಿಜೆಪಿಯಿಂದ ಹೊರಬಂದು ಬಿಎಸ್‌ಆರ್ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿದರು. 2013 ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ ಗೆದ್ದಿತು. ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ಇದೆಲ್ಲದರಿಂದ ದೂರ ಉಳಿದರು. ರೆಡ್ಡಿ ಕಟ್ಟಿದ ಸಾಮ್ರಾಜ್ಯದ ಪತನ ಆರಂಭವಾಗಿತ್ತು. ಶ್ರೀರಾಮುಲು ಮತ್ತೆ ಬಿಜೆಪಿಗೆ ಬಂದು ಸೇರಿದರು. ಗಾಲಿ ಜನಾರ್ಧನ ರೆಡ್ಡಿ ಹೆಸರು ಕರ್ನಾಟಕದ ರಾಜಕಾರಣದಲ್ಲಿ ಹೆಚ್ಚು ಕಮ್ಮಿ ಅಳಿಸಿಹೋಯಿತು.

 ಅಳಿದ ಮೇಲೆಯೂ ಉಳಿಯುವ ಯತ್ನ

ಅಳಿದ ಮೇಲೆಯೂ ಉಳಿಯುವ ಯತ್ನ

ಪ್ರಸ್ತುತ ಕರ್ನಾಟಕದ ರಾಜಕಾರಣದಲ್ಲಿ ಜನಾರ್ಧನ ರೆಡ್ಡಿ ಅಷ್ಟೇನೂ ಪ್ರಭಾವ ಬೀರುವ ಹೆಸರಾಗಿ ಉಳಿದಿಲ್ಲ. ಮುಂಬರುವ ಚುನಾವಣೆಗೆ ಕೇವಲ ನಾಲ್ಕೈದು ತಿಂಗಳು ಬಾಕಿ ಇರುವಾಗಿ ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ. ಆಪ್ತ ಗೆಳೆಯ ಶ್ರೀರಾಮುಲು ಬಿಜೆಪಿಯಲ್ಲಿಯೇ ಉಳಿಯುತ್ತೇನೆ ಎಂದು ಹೇಳಿದ್ದಾರೆ. ಸಹೋದರ ಕರುಣಾಕರ ರೆಡ್ಡಿ ಮೌನಕ್ಕೆ ಶರಣಾಗಿದ್ದಾರೆ. ಇನ್ನೊಬ್ಬ ಸಹೋದರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೊಸ ಪಕ್ಷದೊಂದಿಗೆ ಕೈಜೋಡಿಸಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಜನಾರ್ಧನ ರೆಡ್ಡಿ ಈಗ ಒಬ್ಬಂಟಿಯಾಗಿದ್ದಾರೆ. ಅವರಿಗೆ ಪ್ರಬಲ ಜಾತಿಯ ಬೆಂಬಲವೂ ಇಲ್ಲ. ಹೊಸ ಪಕ್ಷಕ್ಕೆ ಜನರು ಬೇಕು. ಸಂಪನ್ಮೂಲಗಳು ಬೇಕು. ಈ ಹಿಂದೆ ಹೊಸ ಪಕ್ಷಗಳನ್ನು ಕಟ್ಟಿದ್ದ ದೇವರಾಜ ಅರಸು, ಬಂಗಾರಪ್ಪ, ಯಡಿಯೂರಪ್ಪನಂತಹ ಬಲಿಷ್ಠ ನಾಯಕರೇ ಯಶಸ್ವಿಯಾಗಿಲ್ಲ. ಇನ್ನು ಜನಾರ್ಧನ ರೆಡ್ಡಿ ಯಶಸ್ವಿಯಾಗುವುದು ಸುಲಭದ ಮಾತಲ್ಲ. ಜನಾರ್ಧನ ರೆಡ್ಡಿಯ ಹೊಸ ಪಕ್ಷದ ಸ್ಥಾಪನೆಯಿಂದ ಬಿಜೆಪಿಗೆ ನಷ್ಟವಾಗಬಹುದೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಬಲಿಷ್ಠವಾಗಿ ಬೆಳೆದಿರುವ ಬಿಜೆಪಿಗೆ ಜನಾರ್ಧನ ರೆಡ್ಡಿಯಿಂದ ಅಪಾಯವಿದೆ ಎಂಬುದು ಸಮಂಜಸವಾಗಿರದು. ಇದು ಕಾಂಗ್ರೆಸ್‌ ಮೇಲೆಯೂ ಅಷ್ಟೇನು ಪ್ರಭಾವ ಬೀರದು ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ವ್ಯಕ್ತವಾಗಿವೆ. ಒಟ್ಟಿನಲ್ಲಿ ಗಾಲಿ ಜನಾರ್ಧನ ರೆಡ್ಡಿ 'ಅಳಿದ ಮೇಲೆಯೂ ಉಳಿಯುವ ಯತ್ನ'ಕ್ಕೆ ಕೈಹಾಕಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+