• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರಕಿಹೊಳಿ ಸಿಡಿ ಪ್ರಕರಣ: 2 ದಿನದೊಳಗೆ ಅಂತಿಮ ವರದಿ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಫೆ. 03: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ಗುರುವಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಎಸ್‌ಐಟಿ ನೀಡುವ ವರದಿ ರಮೇಶ್ ಜರಕಿಹೊಳಿ ಅವರಿಗೆ ವರ ಆಗಿ ಮತ್ತೆ ಸಚಿವರಾಗುವರೇ? ಎಂಬ ವಿಚಾರ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ.

ಇಂದೇ ಅಂತಿಮ ವರದಿ ಸಲ್ಲಿಕೆ:

ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಆರೋಪ ಸಂಬಂಧ ವಿಶೇಷ ತನಿಖಾ ತಂಡ ಅಂತಿಮ ತನಿಖಾ ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಲು ಎಸ್ಐಟಿ ಸಿದ್ಧತೆ ಮಾಡಿಕೊಂಡಿದೆ. ಹೈಕೋರ್ಟ್ ಅದೇಶದ ಪ್ರತಿ ಪಡೆದು ಇಂದು ಅಥವಾ ಇನ್ನೆರಡು ದಿನದಲ್ಲಿ ಅಂತಿಮ ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಎಸ್ಐಟಿ ಸಲ್ಲಿಕೆ ಮಾಡಲಿದೆ ಎಂದು ಉನ್ನತ ಪೊಲೀಸ್ ಮೂಲಗಳು ಖಚಿತಪಡಿಸಿವೆ.

ತನಿಖಾ ವರದಿಯಲ್ಲಿ ಏನಿದೆ?:

ರಮೇಶ್ ಜಾರಕಿಹೊಳಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ಇದೊಂದು ಹನಿಟ್ರ್ಯಾಪ್ ಪ್ರಕರಣ. ಉದ್ಯೋಗ ಕೇಳಿಕೊಂಡು ಯುವತಿ ಹೋಗಿಲ್ಲ. ಆಕೆ ಇಂಜಿನಿಯರಿಂಗ್ ಪದವಿಯನ್ನೂ ಪೂರ್ಣಗೊಳಿಸಿಲ್ಲ. ಇನ್ನು ರಹಸ್ಯ ಕ್ಯಾಮರಾ ಬಳಕೆ ಮಾಡಿ ರೆಕಾರ್ಡ್ ಮಾಡಿರುವ ಸಂಬಂಧ ಸಿಕ್ಕಿರುವ ಸಾಕ್ಷಾಧಾರಗಳನ್ನು ಪರಿಗಣಿಸಿ ನೋಡುವುದಾದರೆ ಇದು ಅತ್ಯಾಚಾರವಲ್ಲ ಎಂಬ ಸಂಗತಿ ಎಸ್ಐಟಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಕುರಿತು ಸಮಗ್ರ ಸಾಕ್ಷಾಧಾರಗಳ ಸಮೇತ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿ ವರದಿಯನ್ನು ಸಲ್ಲಿಸಲು ಎಸ್ಐಟಿ ಸಿದ್ಧತೆ ಮಡಿಕೊಂಡಿದೆ ಎಂದು ತಿಳಿದು ಬಂದಿದೆ.

ಅತ್ಯಾಚಾರ ಆರೋಪ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಸಿಕ್ಕ ಬಳಿಕ ಮತ್ತೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡಬಹುದು. ಆದರೆ ರಾಜ್ಯ ಬಿಜೆಪಿಯಲ್ಲಿನ ರಾಜಕೀಯ ಬದಲಾವಣೆ ನೋಡಿದರೆ, ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಅಶ್ಲೀಲ ಸಿಡಿ ಸ್ಫೋಟ ಪ್ರಕರಣದಲ್ಲಿ ಸಿಲುಕಿದ್ದ ವ್ಯಕ್ತಿಗೆ ಸಚಿವ ಸ್ಥಾನ ಕೊಟ್ಟರೆ ಚುನಾವಣೆ ಹೊಸ್ತಿಲಲ್ಲಿ ಪಕ್ಷದ ಘನತೆಗೆ ಧಕ್ಕೆ ಬರಬಹುದು. ಪಕ್ಷದ ನಿಲುವಿಗೆ ವಿರೋಧವಾಗುತ್ತದೆ. ಇದರ ಜತೆಗೆ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ರಮೇಶ್ ಜಾರಕಿಹೊಳಿ ಅವರು ಹೂಡಿದ್ದ ತಂತ್ರವೇ ಕಾರಣ. ತಮ್ಮ ಸಹೋದರ ಲಕನ್ ಜಾರಕಿಹೊಳಿಯನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿ ಗೆಲ್ಲಿಸಿದ್ದರು. ಇದರಿಂದ ಬಿಜೆಪಿ ಅಭ್ಯರ್ಥಿ ಹೀನಾಯ ಸೋಲು ಕಂಡಿದ್ದರು. ಬೆಳಗವಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ರಮೇಶ್ ಜಾರಕಿಹೊಳಿ ಕಾರಣ ಎಂದು ಈಗಾಗಲೇ ಪಕ್ಷದ ವರಿಷ್ಠರಿಗೆ ಜಾರಕಿಹೊಳಿ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ವರದಿ ಸಲ್ಲಿಸಲಾಗಿದೆ. ಈ ಎರಡೂ ಆಯಾಮ ನೋಡಿ ಹೇಳುವುದಾರೆ ಸದ್ಯಕ್ಕೆ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂದೇ ಬಿಜೆಪಿ ಮೂಲಗಳು ಹೇಳುತ್ತಿವೆ.

ಆಪರೇಷನ್ ಹಸ್ತದ ಮೂಲಕ ತಮ್ಮ ಆಪ್ತ ಬಳಗವನ್ನು ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆ ಮಾಡುವಲ್ಲಿ ರಮೇಶ್ ಜಾರಕಿಹೊಳಿ ಮುಂದಾಳತ್ವ ವಹಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದವರಲ್ಲಿ ಜಾರಕಿಹೊಳಿ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಇದನ್ನು ಪರಿಗಣಿಸಿ ಮುಂದಿನ ಸಚಿವ ಸಂಪುಟ ಪುನಾರಚನೆ ವೇಳೆ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿದರೂ ಅಚ್ಚರಿ ಪಡಬೇಕಿಲ್ಲ.

ಅಂತೂ ಕಬ್ಬನ್ ಪಾರ್ಕ್ ನಲ್ಲಿ ದಾಖಲಾಗಿರುವ ಸಿಡಿ ಕೇಸಿನ ಅತ್ಯಾಚಾರ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಕೆ ಬಳಿಕ ಬಿಜೆಪಿಯ ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬರಲಿದೆ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಡುತ್ತಾರಾ? ಇಲ್ಲವೇ ನಿರಾಕರಿಸುವ ಮೂಲಕ ಪಕ್ಷ ತ್ಯಜಿಸುವ ತಂತ್ರವನ್ನು ಬಿಜೆಪಿ ಮಾಡುತ್ತಾ? ಎಂಬುದನ್ನು ಕಾಲವೇ ಉತ್ತರಿಸಲಿದೆ.

English summary
Will Ramesh Jarkiholi get Minister Post after SIT submit final report to magistrate court in CD Case. Karnataka High Court permits SIT to submit final report to magistrate court. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X