ಇನ್ನೆರೆಡು ತಿಂಗಳಲ್ಲಿ ಅಂಜನಾದ್ರಿ ಅಭಿವೃದ್ದಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ಕೊಡ್ತಾರೆ: ಜನಾರ್ದನ ರೆಡ್ಡಿ
ಕೊಪ್ಪಳ, ಆಗಸ್ಟ್ 03: ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಂಜನಾದ್ರಿ ಅಭಿವೃದ್ಧಿ ಸೇರಿ ಗಂಗಾವತಿ ಅಭಿವೃದ್ದಿಗೆ ಅನುದಾನ ನೀಡಲಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಕುರಿತು ಗುರುವಾರ ಗಂಗಾವತಿಯಲ್ಲಿ ಮಾಧ್ಯಮಗಳ ಮಾತನಾಡಿ ಗಂಗಾವತಿ ಅಭಿವೃದ್ದಿಗಾಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೇನೆ. ಭೇಟಿ ವೇಳೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಗಂಗಾವತಿ ಕ್ಷೇತ್ರ ಹಾಗು ಅಂಜನಾದ್ರಿ ಅಭಿವೃದ್ದಿಗೆ ನಾನು ಮಾಡಿರುವ ಪ್ರಸ್ತಾಪಕ್ಕೆ ಸಿದ್ದರಾಮಯ್ಯ ಅನುದಾನ ನೀಡಿ ಅಭಿವೃದ್ದಿಗೆ ಸಹಕರಿಸುವ ಭರವಸೆ ನೀಡಿದ್ದಾರೆ. ಇನ್ನೆರೆಡು ತಿಂಗಳಲ್ಲಿ ಅಂಜನಾದ್ರಿ ಅಭಿವೃದ್ದಿಗೆ ಚಾಲನೆ ನೀಡಲಿದ್ದಾರೆ ಎಂದರು.

ಸಿದ್ದರಾಮಯ್ಯ 14 ಬಾರಿ ಬಜೆಟ್ ಮಂಡಿಸಿದ್ದಾರೆ. ಅವರಿಗೆ ಅನುಭವವಿದೆ. ಗ್ಯಾರಂಟಿ ಯೋಜನೆಗೆ ಹಣ ಕ್ರೋಢೀಕರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಯ ನಂತರವು ಅಭಿವೃದ್ದಿಗೆ ಅನುದಾನ ನೀಡಲಿದ್ದಾರೆ ಎಂದರು.
ಇನ್ನೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 7-8 ಕ್ಷೇತ್ರಗಳಿಗೆ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತೇವೆ. ಮತ್ತೆ ಬಿಜೆಪಿಗೆ ಮರಳುವುದಿಲ್ಲ. ಎನ್‌ಡಿಎ ಒಕ್ಕೂಟದಲ್ಲಿ ಪಾಲ್ಗೊಳ್ಳಲ್ಲ. ನಮ್ಮದೇ ಕೆಆರ್‌ಪಿಪಿಯಿಂದ ರಾಜಕೀಯವಾಗಿ ಬೆಳೆಸುತ್ತೇನೆ ಎಂದರು. ಕೆಎಂಎಫ್ ನಿಂದ ತಿರುಪತಿ ತಿಮ್ಮಪ್ಪನಿಗೆ ತುಪ್ಪ ನೀಡಬೇಕು. ಕೆಎಂಎಫ್ ಗೆ ದುಡಿಯುವ ಶಕ್ತಿ ಇರಬಹುದು. ಆದರೆ, ಇಲ್ಲಿಂದ ಪೂರೈಕೆಯಾಗುವುದನ್ನು ನಿಲ್ಲಿಸಬಾರದಿತ್ತು ಎಂದರು.












Click it and Unblock the Notifications