ಪತಿ ರಾಜೀನಾಮೆ ಪತ್ನಿ ವಾಪಸ್ ಪಡೆಯಲಾಗದು; ಹೈಕೋರ್ಟ್
ಬೆಂಗಳೂರು, ನವೆಂಬರ್ 07; ಉದ್ಯೋಗಿಯು ಉದ್ಯೋಗದಾತರಿಗೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ಆತನ ಪತ್ನಿ ಅಥವಾ ಮಕ್ಕಳು ಹಿಂಪಡೆಯಲು ಸಾಧ್ಯವಿಲ್ಲ, ಕಾನೂನಿನಲ್ಲಿ ಅದಕ್ಕೆ ಅವಕಾಶವೂ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಪತ್ನಿಯ ಮನವಿ ಮೇರೆಗೆ ತನ್ನ ರಾಜೀನಾಮೆ ಪತ್ರವನ್ನು ಅಂಗೀಕರಿಸದಿರಲು ಉದ್ಯೋಗದಾತ ಸಂಸ್ಥೆ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಮದ್ದೂರಿನ ಡಿ. ವೆಂಕಟೇಶ್ ಎಂಬಾತ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ನ್ಯಾಯಾಲಯದ ಆದೇಶವೇನು?; ಇದೀಗ ಮೇಲ್ಮನವಿಯನ್ನು ವಜಾಗೊಳಿಸಿರುವ ವಿಭಾಗೀಯ ಪೀಠ, ಉದ್ಯೋಗಿಯೇ ರಾಜೀನಾಮೆ ಪತ್ರ ಹಿಂಪಡೆಯಬೇಕು. ಹಿಂಪಡೆಯುವ ಮನವಿಯು ಉದ್ಯೋಗಿಯಿಂದಲೇ ಸಲ್ಲಿಕೆಯಾಗಬೇಕು. ಈ ಪ್ರಕರಣದಲ್ಲಿ ನೌಕರನ ರಾಜೀನಾಮೆಯನ್ನು ಹಿಂತೆಗೆದುಕೊಳ್ಳಲು ಆತನ ಪತ್ನಿ ಕೋರಿದ್ದಾರೆ ಎಂದು ನ್ಯಾಯಾಲಯ ಆದೇಶಿಸಿದೆ.
ಉದ್ಯೋಗಿಯ ಪತ್ನಿಯ ಅಂತಹ ಹಕ್ಕು ಹೊಂದಿರುವುದನ್ನು ದೃಢಿಕರಿಸುವ ಯಾವುದೇ ನಿಯಮವನ್ನು ನ್ಯಾಯಾಲಯದ ಗಮನಕ್ಕೆ ತಂದಿಲ್ಲ. ಇಂತಹ ಪರಿಕಲ್ಪನೆಯು ಸೇವಾ ಕಾನೂನಿಗೆ ವಿರುದ್ಧವಾಗಿದೆ ಎಂದು ಆದೇಶಿಸಿ, ಏಕಸದಸ್ಯ ಪೀಠದ ತೀರ್ಪನ್ನು ಪುರಸ್ಕರಿಸಿದೆ.
ಸ್ವತಃ ನೌಕರನೇ ಉದ್ಯೋಗದಲ್ಲಿ ಇರಲು ಸಿದ್ಧರಿಲ್ಲದೆ ರಾಜೀನಾಮೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಆತನ ಪತ್ನಿ ಅಥವಾ ಮಕ್ಕಳು ಉದ್ಯೋಗಿ ಸೇವೆಯಲ್ಲಿ ಮುಂದುವರಿಯಲು ಹೇಗೆ ಕಾರಣವಾಗುತ್ತಾರೆ. ಇದು ಬಾಯಾರಿಕೆಯಿಲ್ಲದಿದ್ದರೂ ಇಷ್ಟವಿಲ್ಲದ ಕುದುರೆಯನ್ನು ನೀರು ಕುಡಿಯಲು ನದಿಗೆ ಎಳೆದಂತಾಗುತ್ತದೆ ಎಂದು ಕೋರ್ಟ್ ಹೇಳಿದೆ.
ರಾಜೀನಾಮೆಯು ಉದ್ಯೋಗಿಯ ಸ್ವಯಂಪ್ರೇರಿತ ಕ್ರಿಯೆಯಾಗಿದೆ. ಅದನ್ನು ಸಲ್ಲಿಸುವ ಮೂಲಕ ಆತ ಸೇವೆಯನ್ನು ತೊರೆಯಲು ಪ್ರಯತ್ನಿಸುತ್ತಾನೆ. ಹೀಗಾಗಿ, ಉದ್ಯೋಗದಾತ ಸಂಸ್ಥೆಯು ಅಂಗೀಕರಿಸುವ ಮೊದಲೇ ರಾಜೀನಾಮೆಯನ್ನು ಸ್ವತಃ ಉದ್ಯೋಗಿ ಹಿಂಪಡೆಯಬೇಕು. ಅದು ಹೊರತುಪಡಿಸಿ ಪತ್ನಿ ಮತ್ತು ಮಕ್ಕಳು ಉದ್ಯೋಗಿಯ ಪರವಾಗಿ ರಾಜೀನಾಮೆ ಹಿಂಪಡೆಯಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ?; ಮಂಡ್ಯದ ಮದ್ದೂರಿನ ಡಿ. ವೆಂಕಟೇಶ್ ಎಂಬುವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ ಉದ್ಯೋಗಿಯಾಗಿದ್ದರು. ಅವರು 2021ರ ನ.11ರಂದು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕರಿಸುವ ನಿರ್ಣಯವನ್ನು ಸಂಘವು ಕೈಗೊಂಡಿತ್ತು. ಬಳಿಕ ಉದ್ಯೋಗಿಯ ಪತ್ನಿ ರಾಜೀನಾಮೆ ಪತ್ರ ಹಿಂಪಡೆಯಲು ಅನುಮತಿ ಕೋರಿ ಉದ್ಯೋಗ ಸಂಸ್ಥೆಗೆ ಪತ್ರ ಸಲ್ಲಿಸಿದ್ದರು. ಅದನ್ನು ಆಧರಿಸಿ ರಾಜೀನಾಮೆ ಅಂಗೀಕರಿಸದಿರಲು ಸಂಘವು ನಿರ್ಣಯ ತೆಗೆದುಕೊಂಡಿತ್ತು.
ಅದನ್ನು ಪ್ರಶ್ನಿಸಿ ಸಂಘದ ಮತ್ತೋರ್ವ ಉದ್ಯೋಗಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯಪೀಠ, ವೆಂಕಟೇಶ್ ಅವರ ರಾಜೀನಾಮೆ ಅಂಗೀಕರಿಸದಿರಲು ಸಂಘ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸಿ 2022ರ ಅ.13ರಂದು ಆದೇಶಿಸಿತ್ತು. ಆ ಆದೇಶ ರದ್ದು ಕೋರಿ ವೆಂಕಟೇಶ್ ವಿಭಾಗೀಯ ಪೀಠದ ಮೊರೆ ಹೋಗಿದ್ದರು.












Click it and Unblock the Notifications