ಪಠ್ಯ ಪುಸ್ತಕ ಪರಿಷ್ಕರಣೆಯ ಹಠವೇಕೆ?; ಸರ್ಕಾರಕ್ಕೆ ಪ್ರಶ್ನೆ
ಬೆಂಗಳೂರು, ಜೂನ್ 07; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಶಾಲೆಗಳು ತೆರೆದಿವೆ. ಈಗ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಮಾತನಾಡುತ್ತಿದೆ.
ಮಾಜಿ ಸಚಿವ, ಬಿಜೆಪಿ ನಾಯಕ ವಿ. ಸುನಿಲ್ ಕುಮಾರ್ ಟ್ವೀಟ್ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಈ ವಿಚಾರದಲ್ಲಿ ಟೀಕಿಸಿದ್ದಾರೆ. 'ಶಾಲೆಗಳಿಗೆ ಪಠ್ಯ-ಪುಸ್ತಕ ಪೂರೈಕೆಯಾದ ನಂತರ ಪರಿಷ್ಕರಣೆಯ ಹಠವೇಕೆ?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಮೊದಲ ಟ್ವೀಟ್‌ನಲ್ಲಿ. 'ಅಧಿಕಾರಕ್ಕೆ ಬಂದು ತಿಂಗಳು ಕಳೆಯುವಷ್ಟರಲ್ಲೇ ಸಿದ್ದರಾಮಯ್ಯ ಸರ್ಕಾರ ಪಠ್ಯ-ಪುಸ್ತಕ ಪರಿಷ್ಕರಣೆಗೆ ಕೈ ಹಾಕಿದೆ. ಪಠ್ಯದಲ್ಲಿ ಭಾರತೀಯತೆ, ಸಂಸ್ಕೃತಿ ಹಾಗೂ ಇತಿಹಾಸದ ನೈಜ್ಯ ಸತ್ಯಗಳೇನು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯದಂತೆ ಮುಚ್ಚಿಡುವುದು ಸರ್ಕಾರದ ಉದ್ದೇಶವೇ?' ಎಂದು ಕೇಳಿದ್ದಾರೆ.
ಋಣ ತೀರಿಸಿಕೊಳ್ಳುವುದಕ್ಕೆಯೇ?; ಮತ್ತೊಂದು ಟ್ವೀಟ್‌ನಲ್ಲಿ, 'ಸಿದ್ದರಾಮಯ್ಯನವರೇ ನಿಮಗೆ ಶ್ರೇಷ್ಠ ಭಾರತೀಯ ಚಿಂತನೆಗಳು, ನಿಜವಾದ ಆದರ್ಶ ಪುರುಷ ಯಾರಾಗಬೇಕು? ತಾಯಿ ಭಾರತೀಯ ಅಮರಪುತ್ರರು ಎಂಬ ವಿಚಾರಗಳು ಹೇಗೆ ಇಷ್ಟವಾಗುತ್ತದೆ ಹೇಳಿ? ನಿಮ್ಮ ದೃಷ್ಟಿಯಲ್ಲಿ ಶಾಲಾ ಪಠ್ಯದಲ್ಲಿ ನಕಲಿ ಗಾಂಧಿ ಕುಟುಂಬದ ಚರಿತ್ರೆ, ವಿದೇಶಿ ದಾಳಿಯ ವಿಕೃತಿಗಳು ಮಾತ್ರ ತುಂಬಿರಬೇಕಲ್ಲವೇ?' ಎಂದು ಟೀಕಿಸಿದ್ದಾರೆ.

ಟ್ವೀಟ್‌ನಲ್ಲಿ ಸುನಿಲ್ ಕುಮಾರ್, 'ನಿಮ್ಮನ್ನು ಎರಡನೇ ಬಾರಿಗೆ ಮುಖ್ಯಮಂತ್ರಿ ಮಾಡಿದ್ದಾರೆಂಬ ಋಣ ತೀರಿಸಿಕೊಳ್ಳುವುದಕ್ಕಾಗಿ ಗುಲಾಮಿ ಚಿಂತನೆಯನ್ನು ಶಿಕ್ಷಣದಲ್ಲಿ ತುರುಕುತ್ತೀರಾ?' ಎಂದು ಪ್ರಶ್ನೆ ಮಾಡಿದ್ದಾರೆ.
ಪಠ್ಯ-ಪುಸ್ತಕ ಪರಿಷ್ಕರಣೆ; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪಠ್ಯ-ಪುಸ್ತಕ ಪರಿಷ್ಕರಣೆ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಹಲವಾರು ಸಚಿವರು ಈ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಸಮಾನ ಮನಸ್ಕರ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬೇಕು ಎಂದು ಲಿಖಿತ ಮನವಿ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ನಾವು ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಮಾಡಿಯೇ ತೀರುತ್ತೇವೆ" ಎಂದು ಹೇಳುವ ಮೂಲಕ ಪರಿಷ್ಕರಣೆ ಖಂಡಿತ ಎಂಬ ಸುಳಿವು ನೀಡಿದ್ದರು.
ಸೊರಬದ ಶಾಸಕ ಮಧು ಬಂಗಾರಪ್ಪ ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು. ಅವರು ಮಾತನಾಡಿ, "ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವುದು ಖಂಡಿತ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಪರಿಷ್ಕರಣೆಗೆ ಸ್ಪಲ್ಪ ಸಮಯಬೇಕು. ಹಂತ-ಹಂತವಾಗಿ ಎಲ್ಲವನ್ನು ನಿರ್ವಹಿಸುತ್ತೇವೆ. ಯಾವ-ಯಾವ ಭಾಗವನನ್ನು ಪರಿಷ್ಕರಣೆಗೆ ಒಳಪಡಿಸಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ" ಎಂದು ಹೇಳಿದ್ದರು.
ಸಚಿವರು ಮಾತನಾಡಿ, "ನಾನು ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಪಠ್ಯಪುಸ್ತಕ ಮುದ್ರಣಗೊಂಡು ಶಾಲೆಗಳಿಗೆ ಕಳಿಸಲಾಗಿತ್ತು. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಪಠ್ಯ ಪರಿಷ್ಕರಣೆ ಮಾಡಲಾಗುತ್ತದೆ. ಪುಸ್ತಕ ವಿತರಣೆಯಾಗಿದ್ದರೂ ಪರಿಷ್ಕರಣೆಗೆ ಅವಕಾಶವಿದೆ. ಕಾನೂನು ಬದ್ಧವಾಗಿಯೇ ಅದನ್ನು ಮಾಡುತ್ತೇವೆ" ಎಂದರು.
ಮಧು ಬಂಗಾರಪ್ಪ, "ಮಕ್ಕಳ, ಚಿಂತನೆ, ಅವಶ್ಯಕತೆ ಇರುವ ವಿದ್ಯಾಭ್ಯಾಸ ಬಿಟ್ಟು ಬೇರೆ ಏನಾದರೂ ಪಠ್ಯದಲ್ಲಿ ಇದ್ದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಈಗಾಗಲೇ ಮುಖ್ಯಮಂತ್ರಿಗಳ ನಿರ್ದೇಶನದಂತೆ ತಂಡವೊಂದನ್ನು ರಚನೆ ಮಾಡಲಾಗುತ್ತಿದೆ" ಎಂದು ಹೇಳಿದ್ದರು.












Click it and Unblock the Notifications