Siddaramaiah: ಸ್ವಾಭಿಮಾನಿ ಸಮಾವೇಶ ಜನಕಲ್ಯಾಣ ಸಮಾವೇಶ ಆದ ರಹಸ್ಯ ಬಯಲು!
ಬೆಂಗಳೂರು, ಡಿಸೆಂಬರ್ 03: ಹಾಸನದಲ್ಲಿ ಡಿಸೆಂಬರ್ 5ರಂದು ನಡೆಯುವ ಕಾಂಗ್ರೆಸ್ ಪಕ್ಷದ ಸಮಾವೇಶ ರಾಜ್ಯ ರಾಜಕೀಯದಲ್ಲಿ ಈಗ ಚರ್ಚೆಯ ವಿಚಾರ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಸಮಾವೇಶ ಎಂದು ಬಿಂಬಿಸಲಾಗುತ್ತಿದೆ. ಆದರೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಮಾವೇಶದ ದಿಕ್ಕನ್ನು ಬದಲಾವಣೆ ಮಾಡಿದ್ದಾರೆ. ಸಿದ್ದರಾಮಯ್ಯ ಅಭಿಮಾನಿ ಬಳಗದ 'ಸ್ವಾಭಿಮಾನಿ ಸಮಾವೇಶ'ವನ್ನು ಈಗ 'ಜನಕಲ್ಯಾಣ ಸಮಾವೇಶ' ಎಂದು ಬದಲಾಯಿಸಲಾಗಿದೆ. ಇದರ ಹಿಂದಿರುವುದು ಡಿ. ಕೆ. ಶಿವಕುಮಾರ್.
ಸೋಮವಾರ ಸಂಜೆ ಹಾಸನಕ್ಕೆ ಭೇಟಿ ನೀಡಿದ ಡಿ. ಕೆ. ಶಿವಕುಮಾರ್ ಸಮಾವೇಶದ ಸಿದ್ಧತೆಗಳನ್ನು ವೀಕ್ಷಣೆ ಮಾಡಿದರು. ಇದು ಪಕ್ಷದ ಕಾರ್ಯಕ್ರಮ ಎಂದು ಘೋಷಣೆ ಮಾಡಿದರು ಮತ್ತು 'ಸ್ವಾಭಿಮಾನಿ ಸಮಾವೇಶ'ದ ಹೆಸರನ್ನು 'ಜನಕಲ್ಯಾಣ ಸಮಾವೇಶ' ಎಂದು ಬದಲಾಯಿಸಿ ಹೊಸ ಹೆಸರು ನೀಡಿದರು. ಸಮಾವೇಶಕ್ಕೆ ಯಾವ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ? ಎಂದು ಕಾದು ನೋಡಬೇಕಿದೆ.

'ಸ್ವಾಭಿಮಾನಿ ಸಮಾವೇಶ' ಇದ್ದಕ್ಕಿದ್ದಂತೆ 'ಜನಕಲ್ಯಾಣ ಸಮಾವೇಶ' ಆಗಿದ್ದು ಏಕೆ?. ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ನಡುವೆ ಈ ಕುರಿತು ಇರುವ ಲೆಕ್ಕಾಚಾರಗಳು ಏನು? ಎಂಬುದು ಚರ್ಚೆಯ ವಿಚಾರ. ಈ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ರಾಜ್ಯದ ಜನರ ಪರವಾಗಿ ಉಭಯ ನಾಯಕರಿಗೆ ಮನವಿಯೊಂದನ್ನು ಮಾಡಿದ್ದಾರೆ.
ಆರ್. ಅಶೋಕ ಪೋಸ್ಟ್: ಆರ್. ಅಶೋಕ ತಮ್ಮ ಪೋಸ್ಟ್‌ನಲ್ಲಿ, 'ಸಿಎಂ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶ ಈಗ ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಜನಕಲ್ಯಾಣ ಸಮಾವೇಶ ಆಯ್ತು!' ಎಂದು ಹೇಳಿದ್ದಾರೆ.
'ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ನಡುವೆ ಅದೇನು 'ಒಪ್ಪಂದ' ಆಗಿದೆಯೋ, ಆ 'ಒಪ್ಪಂದ' ಕಾರ್ಯಗತ ಆಗೋಲ್ಲ ಅನ್ನೋ ಅನುಮಾನ ಡಿ. ಕೆ. ಶಿವಕುಮಾರ್ ಅವರಿಗೆ ಯಾಕೆ ಕಾಡುತ್ತಿದೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಶೀಘ್ರದಲ್ಲೇ ದೊಡ್ಡ ರಾಜಕೀಯ ಸ್ಫೋಟವಾಗುವ ಎಲ್ಲ ಲಕ್ಷಣಗಳಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ' ಎಂದು ಅಂದಾಜಿಸಿದ್ದಾರೆ.
ಆರ್. ಅಶೋಕ, 'ಸ್ವಾಮಿ ಡಿ. ಕೆ. ಶಿವಕುಮಾರ್ ಅವರೇ, ತಾವು ಚೆಸ್ ಆದರೂ ಆಡಿ, ಫುಟ್ಬಾಲ್ ಆದರೂ ಆಡಿ, ಆದರೆ ನಿಮ್ಮ ರಾಜಕೀಯ ಮೇಲಾಟದಲ್ಲಿ ಕನ್ನಡಿಗರ ಬದುಕಿನ ಜೊತೆ ಮಾತ್ರ ಚೆಲ್ಲಾಟವಾಡಬೇಡಿ. ತಮ್ಮ loyalty ಗೆ ತಮ್ಮ ಹೈಕಮಾಂಡ್ rotalty ಕೊಡುತ್ತೋ ಬಿಡುತ್ತೋ ಅದು ನಿಮ್ಮ ಪಕ್ಷದ ಆಂತರಿಕ ವಿಚಾರ, ಆದರೆ ಕಾಂಗ್ರೆಸ್ ಪಕ್ಷಕ್ಕೆ loyal ಆಗಿ ಮತ ನೀಡಿ ಅಧಿಕಾರ ಕೊಟ್ಟಿರುವ ಕರ್ನಾಟಕದ ಮಾತಾದರರಿಗೆ ಅಭಿವೃದ್ಧಿಯ royalty ಕೊಟ್ಟು ಕನ್ನಡಿಗರ ಋಣ ತೀರಿಸಿ' ಎಂದು ಸಲಹೆ ನೀಡಿದ್ದಾರೆ.
'ನೀವು ವ್ಯಕ್ತಿ ಪೂಜೆ ಆದರೂ ಮಾಡಿ, ಪಕ್ಷ ಪೂಜೆ ಆದರೂ ಮಾಡಿ, ಆದರೆ ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ನಂಬಿ ಅಧಿಕಾರ ಕೊಟ್ಟಿರುವ ಮತದಾರ ಪ್ರಭುಗಳಿಗೆ ದ್ರೋಹ ಬಗೆಯಬೇಡಿ' ಎಂದು ಅಶೋಕ ಹೇಳಿದ್ದಾರೆ.
ಡಿ. ಕೆ. ಶಿವಕುಮಾರ್ ಹೇಳಿಕೆ: ಹಾಸನದಲ್ಲಿ ಸೋಮವಾರ ಸಂಜೆ ಮಾತನಾಡಿದ ಡಿ. ಕೆ. ಶಿವಕುಮಾರ್, "ಬಿಜೆಪಿ-ಜೆಡಿಎಸ್ ಸ್ನೇಹಿತರು ಟೀಕೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈಗ ಟೀಕೆಯೆಲ್ಲ ಸತ್ತು ಹೋಗಿ ನಮ್ಮ ಮತದಾರರು ಮೂರು ಉಪ ಚುನಾವಣೆಗಳಲ್ಲೂ ಏನೂ ತೀರ್ಪು ಕೊಡಬೇಕು ಕೊಟ್ಟಿದ್ದಾರೆ. ಮತದಾರರೇ ದೇವರುಗಳು ಅವರ ಕೊಟ್ಟ ತೀರ್ಪಿಗೆ ತಲೆಗೆ ಬಾಗುತ್ತೇವೆ" ಎಂದರು.
"ಕರ್ನಾಟಕ ಕಾಂಗ್ರೆಸ್ ಪಕ್ಷದ ಮುಖಂಡತ್ವದಲ್ಲಿ ಈ ಸಮಾವೇಶ ನಡೆಯುತ್ತಿದೆ. ನಮ್ಮ ಹಿತೈಷಿಗಳು ಸ್ವಾಭಿಮಾನಿಗಳ ಒಕ್ಕೂಟಗಳು ಸಿಎಂ ಕೆಲಸ ಮೆಚ್ಚಿ ಸಿಎಂ ಜೊತೆ ಇದ್ದೇವೆ ಎಂದು ಗುರುತಿಸಿಕೊಂಡಿದ್ದಾರೆ, ಬೆಂಬಲ ನೀಡಿದ್ದಾರೆ. ಒಬ್ಬ ಇರಲಿ ಒಂದು ಲಕ್ಷ ಜನ ಇರಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದು ಜನಕಲ್ಯಾಣ ಸಮಾವೇಶ, ಜನತೆಗೋಸ್ಕರ, ಜನರ ಕಲ್ಯಾಣಕ್ಕಾಗಿ ಸಮಾವೇಶ ಮಾಡುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದರು.
"25 ವರ್ಷಗಳಿಂದ ಹಾಸನದಲ್ಲಿ ಕಾಂಗ್ರೆಸ್ ಸಂಸದ ಇರಲಿಲ್ಲ. ಈಗ ಲೋಕಸಭಾ ಸದಸ್ಯರನ್ನು ಕೊಟ್ಟಿದ್ದಾರೆ. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. 2028ಕ್ಕೆ ವಿಧಾನ ಸಭೆ ಚುನಾವಣೆ ಬರುತ್ತದೆ. ಲೋಕಸಭಾ ಚುನಾವಣೆ ವೇಳೆ ಹಾಸನದ ಬಹಳ ಕುಟುಂಬಗಳು ನೋವು ಕಂಡಿದ್ದಾರೆ. ಇಡೀ ದೇಶದಾದ್ಯಂತ ಚರ್ಚೆ ನಡೆದಿದೆ. ಅವರಿಗೆ ಧೈರ್ಯ ಹೇಳಲು ಸಮಾವೇಶ ಹಮ್ಮಿಕೊಂಡಿದ್ದೇವೆ" ಎಂದರು.
"ನನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಯಾವ ಉದ್ದೇಶಕ್ಕೆ ಸಮಾವೇಶ ಎಂದು ಪಾಪ ಅಶೋಕ ಪ್ರಶ್ನೆ ಮಾಡುತ್ತಾರೆ. ನೀವು ಭಾವನೆ ಮೇಲೆ ರಾಜಕಾರಣ ಮಾಡುತ್ತೀರಿ, ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ನೀವ್ಯಾಕೆ ಪ್ರಧಾನಮಂತ್ರಿ ಕರೆಸಿ ಸಮಾರಂಭ ಮಾಡಿದಿರಿ?, ನೀವು ಚುನಾವಣೆ ಮುಂಚೆ ಬೇಕಾದಷ್ಟು ಕಾರ್ಯಕ್ರಮ ಮಾಡಿದಿರಿ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.












Click it and Unblock the Notifications