ಆಂಧ್ರದಲ್ಲಿ ಕರ್ನಾಟಕದ ಮಾವು ನಿಷೇಧ: ಮಹತ್ವದ ಸಲಹೆ ಕೊಟ್ಟ ಶಾಸಕ ಯತ್ನಾಳ್
ನಮ್ಮ ರಾಜ್ಯದಲ್ಲಿ ಬೆಳೆದಿರುವ ಮಾವನ್ನು ಆಂಧ್ರ ಪ್ರದೇಶ ಸರ್ಕಾರ ನಿಷೇಧ ಮಾಡಿರುವುದರಿಂದ ಬೇಡಿಕೆ ಕುಸಿದು ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಕೂಡಲೇ ಆಂಧ್ರ ಸರ್ಕಾರ ಕೈಗೊಂಡಿರುವ ಈ ನಿಷೇಧವನ್ನು ತೆರವುಗೊಳಿಸಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತನಾಡಿ ಬಗೆಹರಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ಇದರೊಂದಿಗೆ ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ದೇಶದಲ್ಲಿ ಅತಿ ಹೆಚ್ಚು ಮಾವಿನ ಹಣ್ಣುಗಳನ್ನು ಬೆಳೆಯುವ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ಕೂಡ ಒಂದು. ಸುಮಾರು 11 ಲಕ್ಷ ಟನ್‌ಗಳಷ್ಟು ಮಾವಿನ ಹಣ್ಣನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ. ಇದರಲ್ಲಿ 4 ಲಕ್ಷ ಟನ್ ಮಾವಿನ ಹಣ್ಣು ಗ್ರಾಹಕರಿಗೆ ನೇರವಾಗಿ ಮಾರಾಟವಾದರೆ, ಮಿಕ್ಕಿದ್ದು ಕೈಗಾರಿಕೆಗಳು ಮಾವಿನ ಉಪ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಉಪಯೋಗಿಸುತ್ತದೆ ಎಂದಿದ್ದಾರೆ.

ಮಾವು ಋತುಕಾಲಿಕ ಹಣ್ಣಾಗಿರುವುದರಿಂದ ಮಾವಿನ ಹಣ್ಣಿನ ತಿರುಳಿನಿಂದ (Pulp) ಹಣ್ಣಿನ ರಸ, ಜಾಮ್, ಉಪ್ಪಿನಕಾಯಿ ಇತ್ಯಾದಿ ಅನೇಕ ಉಪ ಉತ್ಪನ್ನಗಳನ್ನು ಮಾಡಲಾಗುತ್ತದೆ. ಒಂದು ಕೆ.ಜಿ ಮಾವಿನ ಹಣ್ಣಿನಿಂದ ಸುಮಾರು ಅರ್ಧ ಕೆ.ಜಿ ಯಷ್ಟು ಪಲ್ಪ್ ಸಿಗುತ್ತದೆ. ಆದರೆ, ಕರ್ನಾಟದಲ್ಲಿ ಕೇವಲ ಮೂರು ಪಲ್ಪ್ ಕೈಗಾರಿಕೆಗಳು ಇರುವುದರಿಂದ ರೈತರು ಬೆಳೆದಿರುವ ಮಾವನ್ನು ಗರಿಷ್ಟ ಬಳಕೆ ಆಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಪಲ್ಪ್ ಕೈಗಾರಿಕೆಗಳನ್ನು ಪ್ರಾರಂಭಿಸಲಿ. ಇಲ್ಲದಿದ್ದರೆ ಆಸಕ್ತ ನವೋದ್ಯಮಗಳಿಗೆ ಕೈಗಾರಿಕೆಗಳಿಗೆ ಅವಕಾಶ ನೀಡಲಿ. ಇದರಿಂದ ಉದ್ಯೋಗ ಸೃಜನೆ ಆಗುವುದಲ್ಲದೆ, ರೈತರ ಮಾವನ್ನು ಬಳಕೆ ಮಾಡಿಕೊಂಡು ಅವರಿಗೆ ಉತ್ತಮ ಬೆಲೆಯನ್ನು ನೀಡಬಹುದು. ನಮ್ಮ ರಾಜ್ಯದಲ್ಲಿ ಬೆಳೆಯುವ ಮಾವಿನ ಉಪ ಉತ್ಪನ್ನವನ್ನು ಉತ್ತಮ ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಮಾಡುವ ಮೂಲಕ ದೇಶವ್ಯಾಪಿ ಬೇಡಿಕೆ ಸೃಷ್ಟಿಸುವ ಸುವರ್ಣವಾಕಾಶವನ್ನು ಸರ್ಕಾರ ಕೈಬಿಡಬಾರದು ಎಂದು ಯತ್ನಾಳ್ ಸಲಹೆ ನೀಡಿದ್ದಾರೆ.

ನಮ್ಮ ರಾಜ್ಯದಲ್ಲಿ ಬೆಳೆದಿರುವ ಮಾವನ್ನು ಆಂಧ್ರ ಸರ್ಕಾರ ನಿಷೇದ ಮಾಡಿರುವುದರಿಂದ ಬೇಡಿಕೆ ಕುಸಿದು ರೈತರು ಕಂಗಾಲಾಗಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಯೋಚಿಸಿ, ಪಲ್ಪ್ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿ ಹಾಗೂ ಕೂಡಲೇ ಆಂಧ್ರಪ್ರದೇಶ ಸರ್ಕಾರ ಕೈಗೊಂಡಿರುವ ನಿಷೇಧವನ್ನು ತೆರವುಗೊಳಿಸಲು ಖುದ್ದು ಮುಖ್ಯಮಂತ್ರಿಗಳೇ ಆಂಧ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಬಗೆಹರಿಸಲಿ ಎಂದು ಆಗ್ರಹಿಸಿದ್ದಾರೆ.
ನಿರ್ಬಂಧ ತೆರವಿಗೆ ಸಿಎಂ ಪತ್ರ
ಚಿತ್ತೂರು ಜಿಲ್ಲಾಡಳಿತವು ಕರ್ನಾಟಕದ ಮಾವು ಸಾಗಾಣಿಕೆಗೆ ನಿರ್ಬಂಧ ವಿಧಿಸಿತ್ತು. ಹೀಗಾಗಿ ರಾಜ್ಯದಲ್ಲಿ ಬೆಳೆದಿದ್ದ ತೋತಾಪುರಿ ಮಾವಿನ ಬೆಲೆ ಕುಸಿದಿತ್ತು. ಆಂಧ್ರದ ಚಿತ್ತೂರು ಜಿಲ್ಲೆಯ ಮಾರುಕಟ್ಟೆಗೆ ರಾಜ್ಯದ ಮಾವು ಸಾಗಾಣಿಕೆಗೆ ನಿರ್ಬಂಧ ತೆರವು ಮಾಡುವಂತೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಆಂಧ್ರಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಚಿತ್ತೂರು ಜಿಲ್ಲಾಡಳಿತ ಈ ನಿರ್ಬಂಧವನ್ನು ಕೂಡಲೇ ವಾಪಸ್ ಪಡೆಯಬೇಕು. ಯಾವುದೇ ಪೂರ್ವ ಸಮಾಲೋಚನೆಯಿಲ್ಲದೆ ನಿರ್ಬಂಧ ಹೇರಿರುವುದು ಸರಿಯಲ್ಲ, ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಖಂಡಿಸಿದ್ದಾರೆ.












Click it and Unblock the Notifications