• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪ ಸಮರದಲ್ಲಿ ಗೆಲ್ಲುವ ಅಭ್ಯರ್ಥಿಗಳು ಇವರೇನಾ? ನ.2ರ ಫಲಿತಾಂಶದಲ್ಲಿ ಬಹಿರಂಗ

|
Google Oneindia Kannada News

ಬೆಂಗಳೂರು, ನ. 01: ಇತಿಹಾಸದಲ್ಲಿಯೇ ಮೊದಲ ಬಾರಿ ಉಪ ಚುನಾವಣೆ ಎದುರಿಸಿರುವ ಹಾನಗಲ್ ಉಪ ಚುನಾವಣೆಯಲ್ಲಿ ಗೆಲ್ಲುವವರು ಯಾರು? ಎಂಬ ಚರ್ಚೆಗಳು ತೀವ್ರವಾಗಿವೆ. ಜೊತೆಗೆ ತೀವ್ರ ಕುತೂಹಲ ಮೂಡಿಸಿರುವ ಸಿಂದಗಿ ಉಪ ಚುನಾವಣೆ ಫಲಿತಾಂಶವೂ ನಾಳೆ ಮಂಗಳವಾರ ಬೆಳಗ್ಗೆ ಪ್ರಕಟವಾಗಲಿದೆ. ಜೊತೆಗೆ ಎರಡೂ ಕ್ಷೇತ್ರಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ಜೆಡಿಎಸ್ ತನ್ನ ಅಸ್ತಿತ್ವಕ್ಕಾಗಿ ನಡೆಸಿರುವ ಹೋರಾಟದ ಚಿತ್ರಣವೂ ನಾಳೆ ಸಿಗಲಿದೆ. ಅದರೊಂದಿಗೆ ಉಪ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿ ನಾಯಕತ್ವದ ಮೇಲೂ ಆಗಲಿದೆ ಎಂಬ ಚರ್ಚೆಗಳು ಬಿಜೆಪಿ ವಲಯದಲ್ಲಿ ನಡೆದಿರುವುದೂ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಉಪ ಚುನಾವಣೆ ಫಲಿತಾಂಶ ರಾಜಕೀಯ ಪಕ್ಷಗಳ ಮೇಲೆ ಮಾತ್ರವಲ್ಲ, ರಾಜ್ಯ ಬಿಜೆಪಿ ಸರ್ಕಾರದ ಮೇಲೂ ಆಗಲಿದೆ ಎನ್ನಲಾಗುತ್ತಿದೆ.

ಬಿಜೆಪಿ ಶಾಸಕರಾಗಿದ್ದ ಸಿ.ಎಂ. ಉದಾಸಿ ಅವರ ನಿಧನದಿಂದ ತೆರವಾಗಿದ್ದ ಹಾನಗಲ್ ಹಾಗೂ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ನಿಧನದಿಂದ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್ ನಾಯಕರು ತೀವ್ರ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ನೇರ ಹಣಾಹಣಿ ಕಂಡು ಬಂದಿದೆ.

ಆದರೆ ಸಿಂದಗಿಗಿಂತ ಹಾನಗಲ್ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಅದಕ್ಕೆ ಕಾರಣ ಹಾನಗಲ್ ವಿಧಾನಾಸಭಾ ಕ್ಷೇತ್ರವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದ ಪಕ್ಕದಲ್ಲಿರುವುದು. ಹೀಗಾಗಿ ಹಾನಗಲ್‌ನಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಸಿಎಂ ಬೊಮ್ಮಾಯಿ ಅವರಿಗಿದೆ. ಆದರೆ ಹಾನಗಲ್ ಹಾಗೂ ಸಿಂದಗಿಯಲ್ಲಿ ಗೆಲ್ಲುವ ಅಭ್ಯರ್ಥಿ ಯಾರು? ಮುಂದಿದೆ ಸಂಪೂರ್ಣ ಮಾಹಿತಿ!

ಹಾನಗಲ್ ಉಪ ಚುನಾವಣೆಯಲ್ಲಿ ಮತಗಳ ವಿಭಜನೆ?

ಹಾನಗಲ್ ಉಪ ಚುನಾವಣೆಯಲ್ಲಿ ಮತಗಳ ವಿಭಜನೆ?

ಈ ಉಪ ಚುನಾವಣೆಗೆ ಮೊದಲು ಹಾನಗಲ್ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿತ್ತು. ಹೀಗಾಗಿ ಬಿಜೆಪಿ ತೊರೆದು ಕೆಜೆಪಿ ಸೇರಿ ಸ್ಪರ್ಧೆ ಮಾಡಿದ್ದಾಗ, ಲಿಂಗಾಯತ ಸಮುದಾಯದ ಸ್ಥಳೀಯ ನಾಯಕರಾಗಿದ್ದರೂ ದಿ. ಸಿ.ಎಂ. ಉದಾಸಿ ಸೋತಿದ್ದರು. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗಲೂ ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮತಗಳು ವಿಭಜನೆ ಆಗಿರಲಿಲ್ಲ. ಆದರೆ ಈ ಉಪ ಚುನಾವಣೆಯಲ್ಲಿ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿದೆ ಎಂಬ ಮಾಹಿತಿಯಿದೆ. ಅದಕ್ಕೆ ಹಲವು ಕಾರಣಗಳೂ ಇವೆ.

ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಥಳೀಯರಲ್ಲ!

ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಥಳೀಯರಲ್ಲ!

ಅ. 30 ರಂದು ನಡೆದ ಹಾನಗಲ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಥಳೀಯರಲ್ಲ ಎಂಬುದು ಪ್ರಮುಖವಾಗಿ ಗಮನಿಸಬೇಕಾದ ಅಂಶ. ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ. ಈ ಮೂವರು ಬೇರೆ ಕ್ಷೇತ್ರಗಳಿಂದ ಬಂದು ಹಾನಗಲ್ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರಲ್ಲಿ ಶ್ರೀನಿವಾಸ ಮಾನೆ ಅವರು ಮಾತ್ರ ಕಳೆದ 2018ರಲ್ಲಿ ನಡೆದಿದ್ದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಎಂ. ಉದಾಸಿ ಅವರ ಎದುರು ಕೇವಲ 6 ಸಾವಿರ ಮತಗಳಿಂದ ಸೋತಿದ್ದರು.

ಹೀಗಾಗಿ ಮಾನೆ ಅವರು ಸದ್ಯ ಸ್ಥಳಿಯರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆದರೆ ಮೂಲತಃ ಹಾವೇರಿ ಶಾಸಕರಾಗಿದ್ದ ಶಿವರಾಜ ಸಜ್ಜನರ್ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುಬುದಕ್ಕಾಗಿಯೇ ಕ್ಷೇತ್ರಕ್ಕೆ ಬಂದಿದ್ದಾರೆ ಎಂಬುದು ಮತದಾರರ ಮನೋಭಾವನೆಯಾಗಿದೆ. ಅದು ಕೂಡ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯವಾಗಿದೆ ಎನ್ನಲಾಗುತ್ತಿದೆ.

ಸಂಗೂರು ಸಕ್ಕರೆ ಕಾರ್ಖಾನೆ ದಿವಾಳಿ ವಿಚಾರ!

ಸಂಗೂರು ಸಕ್ಕರೆ ಕಾರ್ಖಾನೆ ದಿವಾಳಿ ವಿಚಾರ!

ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ದಿವಾಳಿ ಮಾಡಿರುವ ಆರೋಪವನ್ನು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಎದುರಿಸುತ್ತಿದ್ದಾರೆ. ಸುಮಾರು 40 ಕೋಟಿ ರೂಪಾಯಿಗಳೊಂದಿಗೆ ಲಾಭದಲ್ಲಿದ್ದ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಹಾಳುಮಾಡಿ ಅದು ದಿವಾಳಿಯಾಗುವಂತೆ ಮಾಡಿದ್ದು ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷರಾಗಿದ್ದ ಶಿವರಾಜ ಸಜ್ಜನರ್ ಎಂಬ ಆರೋಪಗಳಿವೆ. ಅದೇ ಆರೋಪಗಳನ್ನು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಉಪ ಚುನಾವಣೆ ಸಂದರ್ಭದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರ ರೈತರೆ ಹೆಚ್ಚಾಗಿರುವ ಹಾನಗಲ್ ಕ್ಷೇತ್ರದ ಮತದಾರರ ಮೇಲಾಗಿದೆ ಎಂಬ ಮಾಹಿತಿಯಿದೆ. ಸಣ್ಣ, ದೊಡ್ಡ ಹಾಗೂ ಅತಿದೊಡ್ಡ ಮತದಾರರು ಕಬ್ಬು ಬೆಳೆದು ಸಾಕಷ್ಟು ನಷ್ಠ ಹೊಂದಿದ್ದರು. ಇದೇ ಕಾರಣದಿಂದ ಆಗ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಗಳು ಇವೆ. ಇದು ಕೂಡ ಕಾಂಗ್ರೆಸ್ ಅಭ್ಯರ್ಥಿ ಮಾನೆ ಅವರಿಗೆ ಉಪ ಚುನಾವಣೆಯಲ್ಲಿ ಮತದಾರರ ಒಲವುಗಳಿಸಲು ಕಾರಣ ಎನ್ನಲಾಗುತ್ತಿದೆ.

ಹಾನಗಲ್ ಉಪಚುನಾಚಣೆಯಲ್ಲಿ ಬಿಜೆಪಿಗೆ ಕೊರೊನಾ ವೈರಸ್ ಕಾಟ!

ಹಾನಗಲ್ ಉಪಚುನಾಚಣೆಯಲ್ಲಿ ಬಿಜೆಪಿಗೆ ಕೊರೊನಾ ವೈರಸ್ ಕಾಟ!

ಜೊತೆಗೆ ಕೊರೊನಾ ಮೊದಲ ಹಾಗೂ ಎರಡನೇ ಅಲೆಗಳ ಸಂಕಷ್ಟದ ಸಂದರ್ಭದಲ್ಲಿ ಶಾಸಕರಾಗಿದ್ದ ದಿ. ಸಿ.ಎಂ. ಉದಾಸಿ ಅವರಿಗೆ ಆರೋಗ್ಯದ ಸಮಸ್ಯೆ ತೀವ್ರವಾಗಿತ್ತು. ಹೀಗಾಗಿ ಕೊರೊನಾ ಅಲೆಗಳ ಸಂದರ್ಭದಲ್ಲಿ ಕ್ಷೇತ್ರದ ಜನತೆ ಅಕ್ಷರಶಃ ಸಂಕಷ್ಟದ ದಿನಗಳನ್ನು ಎದುರಿಸಿದ್ದರು. ಸಿ.ಎಂ. ಉದಾಸಿ ಅವರ ಆರೋಗ್ಯದ ಸಮಸ್ಯೆಯಿಂದಾಗಿ ಅವರ ಪುತ್ರ, ಸಂಸದ ಶಿವಕುಮಾರ್ ಉದಾಸಿ ಅವರೂ ಕ್ಷೇತ್ರದ ಕಡೆಗೆ ಗಮನ ಕೊಡಲು ಆಗಿರಲಿಲ್ಲ. ಅದು ಮತದಾರರ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಅದನ್ನು ಮತದಾರರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಶ್ರೀನಿವಾಸ ಮಾನೆ ಅವರು ಕೋವಿಡ್ ಎರಡೂ ಅಲೆಗಳಲ್ಲಿ ಹಾನಗಲ್‌ನಲ್ಲಿಯೇ ಬೀಡು ಬಿಟ್ಟಿದ್ದರು. ಮತದಾರರ ಕಷ್ಟಕ್ಕೆ, ಆರೋಗ್ಯದ ಸಮಸ್ಯೆಗೆ, ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಬಹಳಷ್ಟು ಸ್ಪಂಧಿಸಿದ್ದರು.ಇದು ಮತದಾರರ ಮೇಲೆ ಪ್ರಭಾವ ಬೀರಿದೆ ಎಂಬ ಮಾಹಿತಿಯಿದೆ. ಹಾಗಾದಲ್ಲಿ ಅದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರಿಗೆ ಮತಗಳನ್ನು ಪಡೆಯಲು ಸಹಾಯಕವಾಗಲಿದೆ.

ಮೊದಲ ಬಾರಿಗೆ ಲಿಂಗಾಯತ ಮತಗಳ ವಿಭಜನೆ?

ಮೊದಲ ಬಾರಿಗೆ ಲಿಂಗಾಯತ ಮತಗಳ ವಿಭಜನೆ?

ಜೊತೆಗೆ ಹಾನಗಲ್ ವಿಧಾನಸಭಾ ಚುನಾವಣೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಲಿಂಗಾಯತ ಉಪ ಪಂಗಡಗಳಲ್ಲಿ ಮತ ವಿಭಜನೆಯಾಗಿವೆ ಎಂಬ ಮಾತುಗಳು ಕೇಳಿ ಬಂದಿವೆ. ಲಿಂಗಾಯತ ಪಂಚಮಸಾಲಿ ಮತಗಳು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯತ್ತ ವಾಲಿವೆ ಎನ್ನಲಾಗುತ್ತಿದೆ. ಹಾಗಾದಲ್ಲಿ ಅದು ಕಾಂಗ್ರೆಸ್ ಅಭ್ಯರ್ಥಿಯ ನಿರಾಯಾಸ ಗೆಲವಿಗೆ ಕಾರಣ ಆಗುತ್ತದೆ. ಜೊತೆಗೆ ಲಿಂಗಾಯತ ಇತರ ಉಪ ಪಂಗಡಗಳ ಮತಗಳು ವಿಭಜನೆಯಾಗಿರುವುದು ಕಂಡು ಬಂದಿದೆ ಎಂದು ಸ್ಥಳೀಯ ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಮುಖಂಡರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದರೆ ಖಂಡಿತವಾಗಿಯೂ ಬಿಜೆಪಿ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲುತ್ತಿದ್ದರು. ಆದರೆ ರೈತ ಮತದಾರರಿಗೆ ಬೇಡವಾಗಿದ್ದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಸ್ಥಳೀಯ ಬಿಜೆಪಿಯವರೇ ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ಪರಿಸ್ಥಿತಿ ಸಿಂದಗಿಯಲ್ಲಿಯೂ ಇದೆ.

ಸಿಂದಗಿ ಉಪ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ!

ಸಿಂದಗಿ ಉಪ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ!

ಸಿಂದಗಿಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮಧ್ಯೆ ಭಾರಿ ಪೈಪೋಟಿಯಿದೆ ಎಂಬ ಮಾಹಿತಿಯಿದೆ. ಜೆಡಿಎಸ್‌ನಿಂದ ಕಾಂಗ್ರೆಸ್‌ ಪಕ್ಷಕ್ಕೆ ವಲಸೆ ಹೋಗಿರುವ ಮಾಜಿ ಸಚಿವ ದಿ. ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ, ಬಿಜೆಪಯಿಂದ ಮಾಜಿ ಶಾಸಕ ರಮೇಶ್ ಭೂಸನೂರ ಹಾಗೂ ಜೆಡಿಎಸ್ ಪಕ್ಷದಿಂದ ನಾಜಿಯಾ ಅಂಗಡಿ ಸ್ಪರ್ಧಿಸಿದ್ದಾರೆ. ಬಿಜೆಪಿ ಶಾಸಕ ರಮೇಶ್ ಭೂಸನೂರ ಮತದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಬಿಜೆಪಿಗೆ ಅನುಕೂಲವಾಗಿದೆ. ಆದರೆ ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗ ತಮ್ಮ ತಂದೆಯ ಎಲ್ಲ ಚುನಾವಣೆಗಳನ್ನು ನಿಭಾಯಿಸುತ್ತಿದ್ದ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರೂ ಕ್ಷೇತ್ರದ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಜೊತೆಗೆ ಜೆಡಿಎಸ್ ಪಕ್ಷಕ್ಕೆ ಸಿಂದಗಿಯಲ್ಲಿ ಸಾಂಪ್ರದಾಯಿಕ ಮತಗಳಿವೆ ಎಂಬ ಮಾಹಿತಿಯಿದೆ. ಹೀಗಾಗಿ ಸಿಂದಗಿಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ಮಧ್ಯೆ ತುರಿಸಿನ ಸ್ಪರ್ಧೆಯಿದೆ. ಆದರೂ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿ ಯಾರು? ಮುಂದಿದೆ ಮಾಹಿತಿ!

ಹಾನಗಲ್ ಹಾಗೂ ಸಿಂದಗಿಯಲ್ಲಿ ಗೆಲ್ಲುವ ಅಭ್ಯರ್ಥಿಗಳಿವರು?

ಹಾನಗಲ್ ಹಾಗೂ ಸಿಂದಗಿಯಲ್ಲಿ ಗೆಲ್ಲುವ ಅಭ್ಯರ್ಥಿಗಳಿವರು?

ಬಿ.ಎಸ್. ಯಡಿಯೂರಪ್ಪ ಅಧಿಕಾರ ತ್ಯಜಿಸಿದ ಬಳಿಕ ನಡೆಯುತ್ತಿರುವ ಮೊದಲು ಉಪಸಮರ ಇದಾಗಿದೆ. ಇದು ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳು ಆಯಾ ಪಕ್ಷಗಳ ನಾಯಕರ ಹಣೆಬರಹ ಬರೆಯಲಿದ್ದಾರೆ ಎಂಬ ಮಾತಿದೆ.

ಈ ಮಧ್ಯೆ ಹಾನಗಲ್‌ನಲ್ಲಿ ಚುನಾವಣೆಗೆ ಸಂಬಂಧಿಸಿದ ವಿಚಾರಗಳನ್ನು ನೋಡಿದಾಗ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಗೆಲ್ಲುವ ಸಾಧ್ಯತೆಗಳು ತೀರಾ ಹೆಚ್ಚಾಗಿವೆ. ಅದೇ ರೀತಿ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಗೆಲ್ಲುತ್ತಾರೆ ಎಂಬುದು ಖಚಿತವಾಗಿದೆ. ಜೊತೆಗೆ ಹಾನಗಲ್ ಕ್ಷೇತ್ರದಲ್ಲಿ ಇತಿಹಾಸದಲ್ಲಿಯೇ ಅತಿಹೆಚ್ಚು ಅಂದರೆ ಶೇಕಡಾ 83.76ರಷ್ಟು ಹಾಗೂ ಸಿಂದಗಿಯಲ್ಲಿ ಶೇ. 69.47ರಷ್ಟು ಮತದಾನವಾಗಿದೆ. ಇದು ಕೂಡ ಹಾನಗಲ್‌ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸಿಂದಗಿಯಲ್ಲಿ ಬಿಜೆಪಿಗೆ ಅನುಕೂಲವಾಗಿದೆ ಎಂದು ರಾಜಕೀಯ ವಿಶ್ಲೇಷಣೆಗಳು ನಡೆದಿದೆ. ಹೀಗಾಗಿ ಹಾನಗಲ್‌ನಲ್ಲಿ 'ಕೈ' ಮೇಲಾಗಲಿದ್ದು ಸಿಂದಗಿಯಲ್ಲಿ 'ಕಮಲ' ಅರಳುವುದು ಖಚಿತ ಎನ್ನಲಾಗುತ್ತಿದೆ. ಆದರೂ ಮತದಾರರ ಮನಸ್ಸಿನಲ್ಲಿರುವುದು ನಾಳೆ ಮಂಗಳವಾರ ಬೆಳಗ್ಗೆ 10ಗಂಟೆಗೆ ಬಹಿರಂಗವಾಗಲಿದೆ!

English summary
Who are the winnning candidate in hangal and sindgi by election?. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X