ಮಂಗಳಾ ಅಂಗಡಿ ನಿವಾಸಕ್ಕೆ ಜೆಪಿ ನಡ್ಡಾ ಭೇಟಿ: ಬೆಳಗಾವಿ ಟಿಕೆಟ್ ಕುರಿತು ಚರ್ಚೆ- ಯಾರಿಗೆ ಸಿಗಲಿದೆ ಟಿಕೆಟ್?
ಬೆಳಗಾವಿ, ಮಾರ್ಚ್ 07: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಮಂಗಳವಾರ ಮಂಗಳ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಬೆಳಗಾವಿ ಬಿಜೆಪಿ ಕಾರ್ಯಕರ್ತರ ನಡುವೆ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ ಪಕ್ಷದ ಟಿಕೆಟ್‌ಗಾಗಿ ಹಲವು ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ಅವರು ಹಾಲಿ ಬಿಜೆಪಿ ಸಂಸದ ಮಂಗಲ್ ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿರುವುದು ತೀವ್ರ ಊಹಾಪೋಹಗಳಿಗೆ ಕಾರಣವಾಗಿದೆ.

ಈಗಾಗಲೇ ಬಿಜೆಪಿ ಹೈಕಮಾಂಡ್ 195 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿಯನ್ನ ಘೋಷಣೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಎರಡನೇ ಪಟ್ಟಿ ಪ್ರಕಟಿಸುವ ಮುಂಚಿತವಾಗಿ ಜೆ ಪಿ ನಡ್ಡಾ ಅವರು ಭೇಟಿಯೂ ಅಂಗಡಿ-ಶೆಟ್ಟರ್ ಕುಟುಂಬಕ್ಕೆ ಟಿಕೆಟ್ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅವರ ಪುತ್ರಿ ಶ್ರದ್ಧಾ ಶೆಟ್ಟರ್, ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬೆಳಗಾವಿ ವಿಭಾಗದ ಮಾಜಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಸಂಸದೆ ಮಂಗಳಾ ಅಂಗಡಿ, ಮಗಳು ಸ್ಪೂರ್ತಿ ಪಾಟೀಲ ಸೇರಿದಂತೆ ಹಲವು ಗಣ್ಯರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಈ ನಡುವೆ ಜೆ ಪಿ ನಡ್ಡಾ ಅವರು ಮಂಗಳ ಅಂಗಡಿ ಅವರನ್ನ ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕುಂದನಗರ ಬೆಳಗಾವಿ ಟಿಕೆಟ್ ಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಹಲವು ನಾಯಕರ ಮೂಲಕ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಇನ್ನೂ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಷ್ಟವಾಗಿರುವುದರಿಂದ ಬೂತ್ ಮಟ್ಟದ ಕಾರ್ಯಕರ್ತರು ಮನಸ್ಥಿತಿಯನ್ನು ಅರಿಯಲು ನಡ್ಡಾ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದರು. ಪಕ್ಷದ ಹೈಕಮಾಂಡ್ ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೂ ಅವರ ಪರ ಕೆಲಸ ಮಾಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ನಡ್ಡಾ ಕೆಲಕಾಲ ಬಿಡುವು ಮಾಡಿಕೊಂಡು ಮಂಗಳಾ ಅಂಗಡಿಯವರ ಮನೆಗೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಕಳೆದರು. ಬೆಳಗಾವಿಯ ಅಂಗಡಿ ಕುಟುಂಬ ಮತ್ತು ಹುಬ್ಬಳ್ಳಿಯ ಶೆಟ್ಟರ್ ಕುಟುಂಬಗಳು ಬೆಳಗಾವಿ ಅಥವಾ ಹುಬ್ಬಳ್ಳಿಯಿಂದ ಟಿಕೆಟ್‌ಗಾಗಿ ಪಕ್ಷದ ಹೈಕಮಾಂಡ್‌ನೊಂದಿಗೆ ತೀವ್ರ ಲಾಬಿ ನಡೆಸಿದ್ದಾರೆ. ಬೆಳಗಾವಿ ಟಿಕೆಟ್‌ಗೆ ಸ್ಪೂರ್ತಿ ಪಾಟೀಲ್ ಮತ್ತು ಶ್ರದ್ಧಾ ಶೆಟ್ಟರ್ ಪ್ರಬಲ ಅಭ್ಯರ್ಥಿಗಳು ಎನ್ನಲಾಗಿದೆ. ನಡ್ಡಾ ಅವರ ಭೇಟಿ ಅವರಲ್ಲಿ ಒಬ್ಬರಿಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಮೂಡಿಸಿದೆ.












Click it and Unblock the Notifications