ಕರ್ನಾಟಕದಲ್ಲಿ ವಿಪಕ್ಷ ನಾಯಕ ಯಾರು? ಬದಲಾಗಲಿದ್ದಾರೆಯೇ ಬಿಜೆಪಿ ರಾಜ್ಯಾಧ್ಯಕ್ಷರು? ಇನ್ನು ಮೂರು ದಿನಗಳಲ್ಲಿ ಉತ್ತರ
ನವದೆಹಲಿ, ಜೂನ್ 06: ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿ 24 ದಿನಗಳು ಕಳೆದಿವೆ. ಆದರೆ ಬಿಜೆಪಿಯು ರಾಜ್ಯದಲ್ಲಿ ಹೊಸ ಶಾಸಕಾಂಗ ಪಕ್ಷದ ನಾಯಕನನ್ನು ಇನ್ನೂ ನೇಮಕ ಮಾಡಿಲ್ಲ. ಇದರ ಹಿನ್ನೆಲೆಯಲ್ಲಿ ಹಲವಾರು ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಎದ್ದಿವೆ.
ಈ ವಿಚಾರವಾಗಿ ದೆಹಲಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮುಂದಿನ ಮೂರು ದಿನಗಳಲ್ಲಿ ಪಕ್ಷವು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ತುಂಬಲಿದೆ ಎಂದು ಹೇಳಿದರು.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಮುಂದಿನ ಮೂರು ದಿನಗಳಲ್ಲಿ ಪ್ರತಿಪಕ್ಷ ನಾಯಕ ಸ್ಥಾನದ ಬಗ್ಗೆ ಪಕ್ಷವು ನಿರ್ಧರಿಸಲಿದೆ ಎಂದು ಹೇಳಿದರು.
'ಈಗಾಗಲೇ ವಿರೋಧ ಪಕ್ಷದ ನಾಯಕನನ್ನು ನೇಮಿಸಿರಬೇಕಿತ್ತು. ಆದರೆ ನಮ್ಮ ನಾಯಕರು ಒಡಿಶಾ ರೈಲು ಅಪಘಾತದ ಮೇಲೆ ಕೇಂದ್ರೀಕರಿಸಿದ್ದಾರೆ. ಇನ್ನು ಮೂರು ದಿನಗಳಲ್ಲಿ ಪ್ರತಿಪಕ್ಷ ನಾಯಕರ ನೇಮಕ ಮಾಡಲಾಗುವುದು' ಎಂದು ಧಾರವಾಡ ಕ್ಷೇತ್ರದ ಸಂಸದರಾಗಿರುವ ಪಹ್ಲಾದ್ ಜೋಶಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಪ್ರತಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸುವ ಕುರಿತು ಕೇಳಿದಾಗ, ಪಕ್ಷವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಜೋಶಿ ಹೇಳಿದರು.
'ರಾಜ್ಯ ಅಧ್ಯಕ್ಷರ ಅಧಿಕಾರಾವಧಿ ಈಗಾಗಲೇ ಮುಗಿದಿದೆ. ಪಕ್ಷವು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದು ಜೋಶಿ ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಕಳೆದ ವರ್ಷ ಆಗಸ್ಟ್‌ನಲ್ಲಿ ಕೊನೆಗೊಂಡಿತು. ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಕಾರಣದಿಂದ ಅವಧಿಯನ್ನು ವಿಸ್ತರಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬಜೆಟ್ ಅಧಿವೇಶನ ನಡೆಸುವ ಸಾಧ್ಯತೆ ಇದ್ದು ಅದಕ್ಕೂ ಮುನ್ನ ತೆರವಾಗಿರುವ ಸ್ಥಾನವನ್ನು ಬಿಜೆಪಿ ತುಂಬುವ ನಿರೀಕ್ಷೆ ಇದೆ.












Click it and Unblock the Notifications