ಒಂದಂಕಿ ಲಾಟರಿ ದಂಧೆ: ಪಾರಿ 'ಕಿಂಗ್ ಪಿನ್' ಅಲ್ಲರೀ!
ಬೆಂಗಳೂರು, ಮೇ.24: ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರ ಅಮಾನತಿಗೆ ಕಾರಣವಾದ ನಿಷೇಧಿತ ಒಂದಂಕಿ ಲಾಟರಿ ದಂಧೆಕೋರ ಪಾರಿ ರಾಜನ್ ಈ ದಂಧೆಯ 'ಕಿಂಗ್ ಪಿನ್' ಅಲ್ಲ ಎಂಬ ಸತ್ಯ ಹೊರ ಬಿದ್ದಿದೆ. ಸಿಐಡಿ ತನಿಖೆಯಲ್ಲಿ ಬೇರೆಯದ್ದೇ ಹೆಸರು ಕಾಣಿಸಿಕೊಂಡಿದ್ದು, ರಿಯಲ್ ಕಿಂಗ್ ಪಿನ್ ಗಾಗಿ ಹುಡುಕಾಟ ಜಾರಿಯಲ್ಲಿದೆ.
ಸುಮಾರು 6ಕ್ಕೂ ಅಧಿಕ ಹಿರಿಯ ಪೊಲೀಸ್ ಅಧಿಕಾರಿಗಳು, 39ಕ್ಕೂ ಅಧಿಕ ಐಪಿಎಸ್ ಗಳ ವೃತ್ತಿಗೆ ಕಟಂಕವಾಗಿರುವ ಪಾರಿ ರಾಜನ್ ಈ ದಂಧೆಯಲ್ಲಿ ಕೆಳ ಹಂತದ ದಂಧಾಕೋರ ಅಷ್ಟೇ ಎಂಬ ಸತ್ಯವನ್ನು ಸಿಐಡಿ ಮಧ್ಯಂತರ ವರದಿ ಬಹಿರಂಗಗೊಳಿಸಿದೆ.[ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತು]
ಒಂದಂಕಿ ಲಾಟರಿ ಹಗರಣದ ಮುಖ್ಯ ರುವಾರಿಯ ಹೆಸರು 'ಮೈಕಲ್' ಎಂದು ತಿಳಿದು ಬಂದಿದೆ. ಕನ್ನಡದ ಖಾಸಗಿ ಟಿವಿ ಸುದ್ದಿವಾಹಿನಿ ನಡೆಸಿದ್ದ ಸ್ಟಿಂಗ್ ಆಪರೇಷನ್ ನಲ್ಲಿ ಮೊದಲ ಬಾರಿಗೆ ಪಾರಿ ರಾಜನ್ ಸಿಕ್ಕಿಬಿದ್ದಿದ್ದ. ಸಾವಿರಾರು ಕೋಟಿ ಲಾಟರಿ ದಂಧೆಗೆ ಈತನೇ ಕಿಂಗ್ ಪಿನ್ ಎನ್ನಲಾಗಿತ್ತು.

ಅದರೆ, ಇತ್ತೀಚಿನ ಸಿಐಡಿ ತನಿಖೆಯಿಂದ ಪಾರಿ ಕೇವಲ ಈ ದಂಧೆಯ ಲಾಜಿಸ್ಟಿಕ್ಸ್ ನೋಡಿಕೊಳ್ಳುತ್ತಿದ್ದ. ಸರಕು ಸಾಗಣೆ, ಸಂಪರ್ಕ ಸಾಧಿಸುವುದು, ಗಣ್ಯರ ವಿವರ ಕಲೆ ಹಾಕುವುದಷ್ಟೇ ಈತನ ಕೆಲಸವಾಗಿತ್ತು ಎಂದು ತಿಳಿದು ಬಂದಿದೆ.
ಫೋನ್ ಕರೆ ಮಾಹಿತಿ: ಆದರೆ, ಪಾರಿ ರಾಜನ್ ಫೋನ್ ಕರೆ ಸಂವಾದದ ಪಟ್ಟಿ ತೆಗೆದು ನೋಡಿದರೆ ಆತನ ಮೈಕಲ್ ಎಂಬ ಹೆಸರಿಗೆ ಹೆಚ್ಚಿನ ಕರೆ ಮಾಡಿಲ್ಲ. ಮೈಕಲ್ ಎಂದರೆ ಯಾರು? ಅದು ಆತನ ನಿಜವಾದ ಹೆಸರೇ? ಎಂಬ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಅಮಾನತುಗೊಂಡ 'ಸೂಪರ್ ಕಾಪ್' ಅಲೋಕ್ ಕುಮಾರ್ ಅವರನ್ನು ಪ್ರಶ್ನಿಸುವ ಸಾಧ್ಯತೆಯಿದೆ. ಭಾನುವಾರ ವಿಚಾರಣೆ ಆರಂಭಗೊಂಡಿದೆ. [ಎಸ್ಎಂಎಸ್ ಮೂಲಕ ಪೊಲೀಸರಿಗೆ ದೂರು ನೀಡಿ]
ಪಾರಿ ರಾಜನ್ ವಿಚಾರಣೆ: ಸಿಐಡಿ ತಂಡ ಮತ್ತೊಮ್ಮೆ ಪಾರಿ ರಾಜನ್ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಪಾರಿ ರಾಜನ್ ಬಂಧಿಸಲು ಬಂಗಾರಪೇಟೆಗೆ ತೆರಳುತ್ತಿದ್ದ ಎಸ್ ಐ ಪ್ರಕಾಶ್ ಎಂಬುವವರಿಗೆ ಅಲೋಕ್ ಕುಮಾರ್ ಅವರು ಎರಡು ಬಾರಿ ಫೋನ್ ಕರೆ ಮಾಡಿ ಪಾರಿ ಬಂಧಿಸದಂತೆ ಸೂಚಿಸಿದ್ದರು ಎಂಬ ಆರೋಪ ಸಿಐಡಿ ವರದಿಯಿಂದ ಸಾಬೀತಾಗಿದೆ.












Click it and Unblock the Notifications