ಬಿಜೆಪಿಯಿಂದ ಅನಂತಕುಮಾರ್ ಹೆಗಡೆ ಸಿಎಂ ಎಂದು ತೇಲಿ ಬಿಟ್ಟಿದ್ಯಾಕೆ?

Posted By:
Subscribe to Oneindia Kannada
ಕರ್ನಾಟಕದ ಮುಂದಿನ ಸಿ ಎಂ ಅಭ್ಯರ್ಥಿ ಅನಂತ್ ಕುಮಾರ್ ಹೆಗ್ಡೆ | Oneindia Kannada

ಬಿಜೆಪಿ ಪಾಳೆಯದಿಂದ ಹೊಸ ಗಾಳಿಪಟ ಹಾರಾಡಲು ಆರಂಭಿಸಿದೆ. ಕೇಂದ್ರ ಸರಕಾರದಲ್ಲಿ ರಾಜ್ಯ ಸಚಿವರಾಗಿರುವ ಅನಂತಕುಮಾರ್ ಹೆಗಡೆ ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಸುದ್ದಿ ಸೂತ್ರ ಹಾಗೂ ಬಾಲಂಗೋಚಿ ಎರಡೂ ಇಲ್ಲದೆ ಹಾರಾಡುತ್ತಿದೆ. ಪಕ್ಷದ ಮೂಲಗಳೇನೋ ಇದು ಕೂಡ ತಂತ್ರಗಾರಿಕೆಯ ಭಾಗ ಎನ್ನುತ್ತಿವೆ.

ಏನದು ತಂತ್ರಗಾರಿಕೆ ಅಂದರೆ, ಕರ್ನಾಟಕದಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಅಂತ ಕಟ್ಟಿ, ಯಾವ ಪಕ್ಷವನ್ನು ಕೆಡವಿದ್ದರೋ ಅದನ್ನು ಅವರಿಂದಲೇ ಕಟ್ಟಿಸಿ, ಆ ನಂತರ ಅವರನ್ನು ದೂರ ಮಾಡುವುದು ಸದ್ಯದ ದೂರಾಲೋಚನೆ ಎನ್ನುತ್ತಾರೆ.

ಅತ್ಯಾಚಾರಿ ವ್ಯಕ್ತಿಯ ಪೂಜೆಗೆ ನನ್ನನ್ನು ಆಹ್ವಾನಿಸಬೇಡಿ: ಸಚಿವ ಹೆಗಡೆ

ಈ ಮಧ್ಯೆ ಯಡಿಯೂರಪ್ಪ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕೂಡ ಅಲ್ಲಲ್ಲಿ ಮಾತುಗಳು ಕೇಳಿಬರುತ್ತಿದ್ದು, ಮುಂಚಿನಷ್ಟು ಚಟುವಟಿಕೆಯಿಂದ ಇಲ್ಲ. ಅದೇ ಕಾರಣಕ್ಕೆ ಮಂಗಳೂರು ಚಲೋನಲ್ಲೂ ಅವರು ತುಂಬ ಉತ್ಸಾಹದಿಂದೇನೂ ಪಾಲ್ಗೊಂಡಿರಲಿಲ್ಲ. ಜತೆಗೆ ತಮ್ಮ ಆಪ್ತ ಸಹಾಯಕನ ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಯಡಿಯೂರಪ್ಪ ಅವರು ನೀಡಿದ ಉತ್ತರವೂ ಅನಾರೋಗ್ಯವೇ ಆಗಿತ್ತು.

ಕರಾವಳಿಯಲ್ಲಿ ಪಕ್ಷ ಸಂಘಟನೆ

ಕರಾವಳಿಯಲ್ಲಿ ಪಕ್ಷ ಸಂಘಟನೆ

ಇನ್ನು ಅನಂತ ಕುಮಾರ ಹೆಗಡೆ ವಿಚಾರಕ್ಕೆ ಬಂದರೆ, ಅವರನ್ನು ಕೇಂದ್ರದಿಂದ ಸಚಿವರನ್ನಾಗಿ ಮಾಡಿದ್ದರ ಉದ್ದೇಶ ಕರಾವಳಿ ಜಿಲ್ಲೆಗಳಲ್ಲಿ ಪಕ್ಷ ಬಲಪಡಿಸುವುದಾಗಿತ್ತು. ಉಗ್ರ ಹಿಂದುತ್ವವಾದಿ ಧೋರಣೆಯ ಅನಂತಕುಮಾರ್ ಹೆಗಡೆ ಆಲೋಚನೆಗಳನ್ನು ಕೇಳಿಸಿಕೊಂಡು ಬಿಟ್ಟರೆ, ಎಲ್ಲರೂ ಒಪ್ಪುವಂಥ ನಾಯಕ ಅವರಲ್ಲ ಎಂಬುದು ಖಚಿತವಾಗುತ್ತದೆ.

ಅನಂತಕುಮಾರ್ ಹೆಗಡೆ ನಿರಾಕರಿಸಿಲ್ಲ

ಅನಂತಕುಮಾರ್ ಹೆಗಡೆ ನಿರಾಕರಿಸಿಲ್ಲ

ಇನ್ನು ಇಪ್ಪತ್ತೈದು- ಮೂವತ್ತು ವರ್ಷಗಳಿಂದ ರಾಜಕಾರಣದಲ್ಲಿರುವ ಅನಂತಕುಮಾರ್ ಹೆಗಡೆ ಅವರು ಡಿ.ವಿ.ಸದಾನಂದ ಗೌಡರಿಗಿಂತ ಸೀನಿಯರ್. ಅಂದರೆ ಬಹಳ ಮೊದಲೇ ಕೇಂದ್ರ ಸಚಿವರಾಗಿರಬೇಕಿತ್ತು ಅನ್ನುವವರು ಇದ್ದಾರೆ. ಈ ಸುದ್ದಿಗೆ ರೆಕ್ಕೆಪುಕ್ಕ ಬಂದ ಮೇಲೆ ಅನಂತಕುಮಾರ್ ಹೆಗಡೆ ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ. ಮಹತ್ವಾಕಾಂಕ್ಷೆ ಇರುವ ಯಾವುದೇ ರಾಜಕಾರಣಿಯು ನನಗೆ ಮುಖ್ಯಮಂತ್ರಿ ಆಗಬೇಕೆಂದಿಲ್ಲ ಅಂತ ಹೇಳುವುದಿಲ್ಲ.

ಸಿದ್ಧಾಂತ-ಪಕ್ಷ ನಿಷ್ಠ ಹೆಗಡೆ

ಸಿದ್ಧಾಂತ-ಪಕ್ಷ ನಿಷ್ಠ ಹೆಗಡೆ

ಅನಂತಕುಮಾರ್ ಹೆಗಡೆ ಇಷ್ಟು ಸಲ ಸಂಸದರಾಗಿದ್ದರೂ ಅವರ ವಿರುದ್ಧ ಅವ್ಯವಹಾರದ ಆರೋಪಗಳಿಲ್ಲ. ಆರೆಸ್ಸೆಸ್, ಬಿಜೆಪಿಯಿಂದ ಹಾಕಿದ ಗೆರೆ ದಾಟುವವರಲ್ಲ. ವ್ಯಕ್ತಿ ಅಥವಾ ನಾಯಕರಿಗಿಂತ ಹೆಚ್ಚಾಗಿ ಸಿದ್ಧಾಂತ ಹಾಗೂ ಪಕ್ಷಕ್ಕೆ ಬದ್ಧರಾಗಿರುವ ಹೆಗಡೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಕ್ಕ ಮೇಲಂತೂ ಜಿಲ್ಲೆಯಲ್ಲಿ ಸಿಗುವುದೇ ಮತ್ತೂ ಕಷ್ಟವಾಗಿದೆ ಎನ್ನುತ್ತಾರೆ ಜನ.

ಸಾಮಾಜಿಕ ಮಾಧ್ಯಮಗಳ ಸೃಷ್ಟಿ

ಸಾಮಾಜಿಕ ಮಾಧ್ಯಮಗಳ ಸೃಷ್ಟಿ

ಒಟ್ಟಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದು, ಫಲಿತಾಂಶ ಬಂದು, ಬಿಜೆಪಿ ಅಧಿಕಾರ ಹಿಡಿಯುವ ಸನ್ನಿವೇಶ ಸೃಷ್ಟಿಯಾಗುವವರೆಗೆ ಮುಖ್ಯಮಂತ್ರಿ ಯಾರು ಎಂಬುದು ಆಖೈರು ಆಗುವುದಿಲ್ಲ. ಪಕ್ಷದಲ್ಲೀಗ ಸಂಘಟನೆಯನ್ನು ಬಲಪಡಿಸುವ ಪ್ರಯತ್ನ ನಡೆಯುತ್ತಿದೆ. ಇನ್ನು ಅನಂತಕುಮಾರ ಹೆಗಡೆ ಹೆಸರು ಸಾಮಾಜಿಕ ಮಾಧ್ಯಮಗಳ ಸೃಷ್ಟಿ. ಆರೆಸ್ಸೆಸ್ - ಬಿಜೆಪಿ ಬೆಂಬಲಿತ ಗುಂಪು ಇಂಥ ಕೆಲಸ ಮಾಡಿದೆ ವಿನಾ ಈ ಸುದ್ದಿಗೆ ಯಾವ ಮೌಲ್ಯವೂ ಇಲ್ಲ ಎಂದು ಬಿಜೆಪಿಯ ಹಿರಿಯ ಸದಸ್ಯರೊಬ್ಬರು ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
What is the strategy behind central minister Ananthakumar Hegde projected as BJP CM candidate in social media. Here is an analysis.
Please Wait while comments are loading...