ಬಿಜೆಪಿಯ 'ಹೊಸ ತಲೆಮಾರಿನ' ತಂತ್ರಗಾರ ಬಿಎಲ್ ಸಂತೋಷ್ ಹಿನ್ನೆಲೆ ಏನು? ಅವರ ಬಗ್ಗೆ ಪಕ್ಷದ ಒಳಗಿನವರು ಹೇಳುವುದೇನು? ತಿಳಿಯಿರಿ
ಬೆಂಗಳೂರು, ಏಪ್ರಿಲ್ 19: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಬಿಎಲ್ ಸಂತೋಷ್ ಅವರು ಪಕ್ಷದೊಳಗೆ ಹೊಸ ತಂತ್ರಗಾರಿಕೆ ಮಾಡುತ್ತಿದ್ದು, ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದ್ದಾರೆ. ಬಿಎಲ್ ಸಂತೋಷ್ ಕುರಿತು ಮಾಜಿ ಸಿಎಂ, ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಅವರು ವಾಗ್ದಾಳಿ ನಡೆಸಿದ ಬಳಿಕ ಗಂಭೀರ ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗಳು ಹುಟ್ಟಿಕೊಂಡಿವೆ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದರ ಹಿಂದೆ ಬಿಎಲ್ ಸಂತೋಷರ ಕೈವಾಡ ಇದೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಬಿಜೆಪಿಯಲ್ಲಿ ಪಕ್ಷ ನಿಷ್ಠಗಿಂತ ವ್ಯಕ್ತಿ ನಿಷ್ಟೆಗೆ ಹೆಚ್ಚು ಗೌರವ ನೀಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ನಾಶಕ್ಕೆ ಬಿಎಲ್ ಸಂತೋಷ್ ಕಾರಣವಾಗುತ್ತಾರೆ ಎಂದು ಶೆಟ್ಟರ್ ಹೇಳಿದ್ದಾರೆ.

ಶೆಟ್ಟರ್ ಅವರು ಬಿಜೆಪಿ ಬಿಟ್ಟ ಬಳಿಕ ರಾಜ್ಯದಲ್ಲಿ ಹೊಸ ನಿರೂಪಣೆಯೊಂದು ಹುಟ್ಟಿಕೊಂಡಿದೆ. 'ಲಿಂಗಾಯತ ವಿರೋಧಿ ಬಿಜೆಪಿ' ಎಂಬ ನಿರೂಪಣೆಯನ್ನು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳ ನಾಯಕರು ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದಾರೆ. 'ಪೇಶ್ವೆ ಡಿಎನ್‌ಎ ಹಾಗೂ ಬಸವಣ್ಣನ ಡಿಎನ್‌ಎ' ಬಗ್ಗೆ ಮತ್ತೆ ಚರ್ಚೆಗಳು ಹುಟ್ಟಿಕೊಂಡಿವೆ. ಎಲ್ಲ ಪರ ವಿರೋಧ ಚರ್ಚೆಗಳು ತಿರುಗುತ್ತಿರುವು ಬಿಎಲ್ ಸಂತೋಷ್ ಸುತ್ತ ಎಂಬುದನ್ನು ನಾವಿಲ್ಲಿ ಗಮನಿಸಿಸುವುದು ಸೂಕ್ತವಾಗಿದೆ.
ಉಡುಪಿ ಮೂಲದ 56 ವರ್ಷದ ಸಂತೋಷ್ ಅವರು ಈ ಎಲ್ಲ ಬೆಳಗಣಿಗೆಗಳಿಂದ ಸ್ವಲ್ಪವೂ ವಿಚಲಿತರಾಗುವುದಿಲ್ಲ. ಅವರ ತೀರ್ಮಾಣವು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಲಾಭವನ್ನು ತಂದುಕೊಡುತ್ತದೆ ಎಂಬ ನಂಬಿಕೆಯನ್ನು ಪಕ್ಷದ ಇಟ್ಟುಕೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ.
ಹಾಲಿ ಶಾಸಕರು ಪುನರಾವರ್ತನೆಯಾಗಬಾರದು ಎಂಬ ಪಕ್ಷದ ನಿಲುವು ಕಳೆದ ವರ್ಷ ಗುಜರಾತ್‌ನಲ್ಲಿ ಲಾಭ ತಂದುಕೊಟ್ಟಿತ್ತು. ಕರ್ನಾಟಕದಲ್ಲಿ ಬಿಜೆಪಿಗೆ ಕಾಂಗ್ರೆಸ್ ಕಠಿಣ ಸವಾಲಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಮರೆಮಾಚಲು ಹೊಸ ಮುಖಗಳಿಗೆ ಮಣೆ ಹಾಕುವ ತಂತ್ರವನ್ನು ಬಳಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ರಾಜ್ಯ ಘಟಕಕ್ಕೆ ತಾಜಾ ಮುಖಗಳನ್ನು ಪರಿಚಯಿಸುವ ಆಲೋಚನೆಯು ಚುನಾವಣೆ ಘೋಷಣೆಯಾಗುವ ಮೊದಲೇ ಪ್ರಾರಂಭವಾಯಿತು. 2019 ರಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಲಾಯಿತು. ಬಸವರಾಜ ಬೊಮ್ಮಾಯಿ ಅವರನ್ನು ನೇಮಿಸುವುದು ಈ ಕಾರ್ಯಾಚರಣೆಯ ಭಾಗವಾಗಿದೆ ಎಂದು ಹೇಳಲಾಗಿದೆ.
ಆದರೆ, ಯಡಿಯೂರಪ್ಪ ಇದನ್ನು ಒಪ್ಪುವುದಿಲ್ಲ. 'ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕಾರ್ಯಾಚರಣೆಯಲ್ಲಿ ಸಂತೋಷ್ ಪ್ರಮುಖ ಸಂಚುಕೋರ ಎಂಬ ನಿರೂಪಣೆಯನ್ನು ಕಟ್ಟಿಕೊಡಲಾಗುತ್ತಿದೆ. ಈ ಆರೋಪ ನಿರಾಧಾರವಾಗಿದೆ. ಹೊಸ ನೀತಿಯು ಪಕ್ಷದ ಬೆಳವಣಿಗೆಯ ಹಿತದೃಷ್ಟಿಯಿಂದ ಎಂಬುದನ್ನು ಮನಗಂಡಿದ್ದರಿಂದ ನಾನೇ ಅಧಿಕಾರದಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದೇನೆ' ಎಂದು ಬಿಎಸ್‌ವೈ ಹೇಳಿದ್ದಾರೆ.
'ನಾನು ಹೊಸ ಪೀಳಿಗೆಗೆ ದಾರಿ ಮಾಡಿಕೊಡಬೇಕೆಂದು ನಿರ್ಧರಿಸಿದೆ. ಶೆಟ್ಟರ್ ಮತ್ತು ಇತರ ಹಿರಿಯರ ವಿಷಯದಲ್ಲೂ ಅದೇ ತತ್ವವನ್ನು ಅನ್ವಯಿಸಲಾಯಿತು. ಸಂತೋಷ್ ಅವರನ್ನು ದೂರುವುದು ಸರಿಯಲ್ಲ' ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಉಡುಪಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಂತೋಷ್ ಅವರು, ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. 1993 ರಲ್ಲಿ ಪೂರ್ಣಾವಧಿ ಆರ್‌ಎಸ್‌ಎಸ್ ಪ್ರಚಾರಕರಾಗುವ ಮೊದಲು ಐಟಿಐ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ನೌಕರಿ ಮಾಡಿದ್ದಾರೆ. ಅವರನ್ನು ಆರ್‌ಎಸ್‌ಎಸ್‌ನಿಂದ ಬಿಜೆಪಿಗೆ ಕಳುಹಿಸಲಾಯಿತು. 2006ರಲ್ಲಿ ರಾಜ್ಯ ಸಂಘಟನೆ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಅದು ಕರ್ನಾಟಕದಲ್ಲಿ ಬಿಜೆಪಿ ಒಂದು ಶಕ್ತಿಯಾಗಿ ಬೆಳೆಯಲು ಆರಂಭಿಸಿದ ಸಮಯ. 2004ರ ಚುನಾವಣೆಯಲ್ಲಿ 224 ಸದಸ್ಯ ಬಲದ ಸದನದಲ್ಲಿ 79 ಸ್ಥಾನಗಳನ್ನು ಗಳಿಸುವ ಮೂಲಕ ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಹೊಸ ರಾಜಕೀಯ ದೃಷ್ಟಿಕೋನ ಮತ್ತು ತಂತ್ರಗಳ ಅಳವಡಿಕೆಯೊಂದಿಗೆ ಪಕ್ಷವನ್ನು ಆಧುನೀಕರಿಸುವ ಸಂತೋಷ್ ಅವರ ಪ್ರಯತ್ನಗಳು ಪಕ್ಷದ ರಾಜ್ಯ ಅಧ್ಯಕ್ಷ ಅನಂತ್ ಕುಮಾರ್ ಅವರೊಂದಿಗಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು.
ಪಕ್ಷದಲ್ಲಿನ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಬಿಜೆಪಿ ಇತರ ಪಕ್ಷಗಳಿಗಿಂತ ಹೆಚ್ಚು ಮುಂದಿದ್ದರೆ ಅದಕ್ಕೆ ಅವರ ಶ್ರಮವೇ ಕಾರಣ ಎಂದು ರಾಜ್ಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಯಡಿಯೂರಪ್ಪ ಅವರೊಂದಿಗಿನ ಸಂಬಂಧವು ಆರಂಭದಲ್ಲಿ ಸೌಹಾರ್ದಯುತವಾಗಿದ್ದರೂ, 2008 ರಲ್ಲಿ ಬಿಜೆಪಿ ಸರ್ಕಾರವನ್ನು ಸ್ಥಾಪಿಸಿದ ನಂತರ ಭಿನ್ನಾಭಿಪ್ರಾಯಗಳು ಬೆಳೆದವು. ಏಕೆಂದರೆ ಸರ್ಕಾರವು ನಡೆಯುತ್ತಿರುವ ರೀತಿಗೆ ಬಿಎಲ್ ಸಂತೋಷ್ ಅವರಿಗೆ ಆಕ್ಷೇಪಣೆಗಳು ಇದ್ದವು. ಬಳ್ಳಾರಿಯಿಂದ ಗಣಿ ಧನಿಗಳು ಆಡಳಿತ ನಡೆಸುತ್ತಿರುವಂತೆ ಭಾಸವಾಗತೊಡಗಿತ್ತು. ಆಗ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾದವು. ಸಿಎಂ ಯಡಿಯೂರಪ್ಪ ಕೂಡ ಜೈಲಿಗೆ ತೆರಳಿದರು.
'ಈ ಕಷ್ಟದ ಸಮಯದಲ್ಲಿ, ಸಂತೋಷ್ ಬಂಡೆಯಂತೆ ನಿಂತರು. ಪಕ್ಷದ ಹಿತಾಸಕ್ತಿಗಳನ್ನು ಕಾಪಾಡಿದರು. ಹೊಸ ಮುಖಗಳಿಗೆ ಮಣೆ ಹಾಕುವ ಅವರ ದೃಷ್ಟಿ ನನ್ನಂತಹ ಅನೇಕರಿಗೆ ಅವಕಾಶಗಳನ್ನು ನೀಡಿತು' ಎಂದು ಗಿರೀಶ್ ಮಟ್ಟೆನ್ನವರ್ ಹೇಳಿದ್ದಾರೆ.
ಗಿರೀಶ್ ಮಟ್ಟೆನ್ನವರ್ 2007 ರಲ್ಲಿ ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. ಅವರನ್ನು ಸಂತೋಷ್ ಅವರು ನೇಮಿಸಿದರು. ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರನ್ನು ಹೆಸರಿಸಿದ್ದು ಸಂತೋಷ್ ಎಂದು ಹೇಳಲಾಗುತ್ತಿದೆ.
ಸಂತೋಷ್ ಅವರ ಕೆಲಸವನ್ನು ಬಿಜೆಪಿಯಲ್ಲಿ ಗುರುತಿಸಲಾಯಿತು. ಅವರನ್ನು 2014 ರಲ್ಲಿ ಜಂಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಮಾಡಲಾಯಿತು. 2019 ರಲ್ಲಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ನೇಮಿಸಲಾಯಿತು. ಇದನ್ನು ಬಿಜೆಪಿಯ ಕ್ರಮಾನುಗತದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಎರಡನೆ ಸ್ಥಾನವಾಗಿ ಪರಿಗಣಿಸಲಾಗಿದೆ.
ರಾಷ್ಟ್ರೀಯ ಸಂಘಟನೆಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು ಮೋದಿ ಗುಜರಾತ್‌ನ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಅವರು 2002 ರಲ್ಲಿ ಮುಖ್ಯಮಂತ್ರಿಯಾಗಿ ಗುಜರಾತ್‌ಗೆ ಮರಳಿದರು. ಸಂತೋಷ್ ಅವರ ಬೆಂಬಲಿಗರು ಅವರು ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಿ ಮರಳಿ ಬರಬೇಕೆಂದು ಬಯಸುತ್ತಿದ್ದಾರೆ.












Click it and Unblock the Notifications