ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಇಲಾಖೆಯ ವಿವಾದಗಳು ಒಂದಾ ಎರಡಾ ಮೂರಾ?

By Prasad
|
Google Oneindia Kannada News

ಬೆಂಗಳೂರು, ಜುಲೈ 08 : ಕರ್ನಾಟಕ ಪೊಲೀಸ್ ಇಲಾಖೆಗೆ ಏನಾಗಿದೆ? ಕೆಲ ದಿನಗಳ ಹಿಂದೆ ಇಡೀ ಪೊಲೀಸ್ ವ್ಯವಸ್ಥೆಯ ವಿರುದ್ಧ ಪೊಲೀಸರೇ ದಂಗೆ ಎದ್ದಿದ್ದರು. ಅದು ತಣ್ಣಗಾಗುವ ಹೊತ್ತಿಗೆ ಇಬ್ಬರು ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆತ್ಮಹತ್ಯೆಗೆ ಶರಣಾಗಿದ್ದಾರೆ! ಪೊಲೀಸ್ ಇಲಾಖೆಗೆ ಖಗ್ರಾಸ್ ಸೂರ್ಯಗ್ರಹಣ!

"ಕರ್ನಾಟಕ ಪೊಲೀಸ್ ವ್ಯವಸ್ಥೆ ಕುಲಗೆಟ್ಟು ಹೋಗಿದೆ. ಯಥಾ ರಾಜಾ ತಥಾ ಪ್ರಜಾ. ರಾಜ್ಯವನ್ನಾಳುತ್ತಿರುವ ರಾಜಕೀಯ ನಾಯಕರಂತೆ ಹಿರಿಯ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ನಿಜಕ್ಕೂ ದುರ್ದೈವದ ಸಂಗತಿ" ಎಂದು ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ಹೇಳಿರುವುದು ಗಬ್ಬೆದ್ದುಹೋಗಿರುವ ಪೊಲೀಸ್ ಇಲಾಖೆಗೆ ಕನ್ನಡಿ ಹಿಡಿದಿದೆ.

ಮಂಗಳೂರು ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಅವರ ಪರವಾಗಿ ಎಲ್ಲ ಶಾಸಕರೂ ನಿಲ್ಲಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿರುವುದು ಶಂಕರ್ ಬಿದರಿ ಅವರ ಹೇಳಿಕೆಗೆ ಪುಷ್ಟಿ ನೀಡಿದಂತಾಗಿದೆ. [ಡಿವೈಎಸ್ ಪಿ ಆತ್ಮಹತ್ಯೆ : ಸಚಿವ ಜಾರ್ಜ್ ಹೇಳುವುದೇನು?]

ಪೊಲೀಸ್ ಇಲಾಖೆಯಲ್ಲಿ ಬುಡದಿಂದ ತುದಿಯವರೆಗೆ ನಾನಾ ಹಂತಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಯಾರೂ ಅಲ್ಲಗಳೆಯುವುದಿಲ್ಲ. ಹಿರಿಯ ಅಧಿಕಾರಿಗಳ ದರ್ಪ ದಬ್ಬಾಳಿಕೆ, ಕಿರಿಯರನ್ನು ಕಾಲಾಳುಗಳಂತೆ ಕೀಳಾಗಿ ನೋಡಿಕೊಳ್ಳುವುದು, ದಣಿವಿಲ್ಲದ ದುಡಿಮೆ ಅಧಿಕಾರಿಗಳು ತಿರುಗಿ ಬೀಳುವುದಕ್ಕೆ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರಚೋದಿಸುತ್ತಿದೆಯಾ? ಇದಕ್ಕೆ ಪರಿಹಾರವೇನು?

ಇಲಾಖೆಯಲ್ಲಿ ಹಲವಾರು ಪ್ರಾಮಾಣಿಕ ಅಧಿಕಾರಿಗಳಿದ್ದರೂ ಕೆಟ್ಟು ಕೆರ ಹಿಡಿದಿರುವ ವ್ಯವಸ್ಥೆಯಿಂದಾಗಿ ಪೊಲೀಸ್ ಇಲಾಖೆಯ ಮೇಲೆಯೇ ಕಳಂಕ ಅಮರಿಕೊಂಡಿದೆ, ಅಪನಂಬಿಕೆ ಹುಟ್ಟುವಂತಾಗಿದೆ. ಗೃಹ ಸಚಿವಾಲಯದ ಹಿಡಿತದಲ್ಲಿರುವ ಪೊಲೀಸ್ ಇಲಾಖೆ ಸರಕಾರದ ಸೂತ್ರದ ಗೊಂಬೆಯಂತಾಗಿರುವುದು ನಿಜಕ್ಕೂ ದುರದೃಷ್ಟಕರ. [ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?]

ಇತ್ತೀಚಿನ ದಿನಗಳಲ್ಲಿ ಒಂದರಹಿಂದೊಂದರಂತೆ ನಡೆಯಬಾರದ ಘಟನೆಗಳು ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವೆ. ಪೊಲೀಸ್ ಅಧಿಕಾರಿಗಳು ಸಮೂಹ ಸನ್ನಿಗೇನಾದರೂ ಒಳಗಾಗಿದ್ದಾರಾ ಎಂಬ ಅನುಮಾನವೂ ಬರುವಂತೆ ಘಟನೆಗಳು ನಡೆಯುತ್ತಿವೆ. ಅವುಗಳನ್ನು ಒಂದೊಂದಾಗಿ ನೋಡೋಣ. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

ಮಂಗಳೂರು ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ

ಮಂಗಳೂರು ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ

51 ವರ್ಷದ ಪೊಲೀಸ್ ಅಧಿಕಾರಿ ಮಂಗಳೂರು ಡಿವೈಎಸ್‌ಪಿ ಗಣಪತಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಕೃತ್ಯಕ್ಕೆ ಕೈಹಾಕುವ ಮುನ್ನ ಖಾಸಗಿ ಟಿವಿ ಚಾನಲ್ಲಿಗೆ ನೀಡಿರುವ ಸಂದರ್ಶನದಲ್ಲಿ ಇದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್ ಮೋಹಾಂತಿ, ಎಡಿಜಿಪಿ (ಇಂಟೆಲಿಜೆನ್ಸ್) ಎಎಂ ಪ್ರಸಾದ್ ಮತ್ತು ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಅವರೇ ಕಾರಣರು ಎಂದು ಹೇಳಿಕೆ ನೀಡಿದ್ದರು. ಮರಣಪತ್ರದಲ್ಲೂ ಅವರು ಇವರ ಹೆಸರನ್ನೇ ಪ್ರಸ್ತಾಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ

ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ

ಬೆಳಗಾವಿ ಜಿಲ್ಲೆಯ ಮುರಗೋಡಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕಲ್ಲಪ್ಪ ಹಂಡಿಭಾಗ್ ಪ್ರಕರಣ ಪೊಲೀಸ್ ಇಲಾಖೆಯಲ್ಲಿನ ದುರವಸ್ಥೆಯ ಮೇಲೆ ಟಾರ್ಚ್ ಬಿಟ್ಟಿದೆ. ಅವರು ಯಾವುದೇ ಮರಣಪತ್ರ ಬರೆದು ಸಾವಿಗೆ ಶರಣಾಗದಿದ್ದರೂ ಹಿರಿಯ ಅಧಿಕಾರಿಗಳ ಕಿರುಕುಳ ಕಾರಣವಿರಬಹುದೆ ಅಥವಾ ಪ್ರಾಮಾಣಿಕರಾಗಿದ್ದ ಅವರನ್ನು ಸಿಕ್ಕಿಹಾಕಿಸಲು ಷಡ್ಯಂತ್ರ ರಚಿಸಲಾಯಿತೆ ಎಂಬ ಸಂಶಯಗಳು ಮೂಡಿವೆ. ಈ ಪ್ರಕರಣದ ತನಿಖೆಯೂ ಜಾರಿಯಲ್ಲಿದೆ.

ರಾಜೀನಾಮೆ ಬಿಸಾಕಿದ ಡಿವೈಎಸ್‌ಪಿ ಅನುಪಮಾ ಶೆಣೈ

ರಾಜೀನಾಮೆ ಬಿಸಾಕಿದ ಡಿವೈಎಸ್‌ಪಿ ಅನುಪಮಾ ಶೆಣೈ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಡಿವೈಎಸ್‌ಪಿಯಾಗಿದ್ದ ಅನುಪಮಾ ಶೆಣೈ ರಾಜೀನಾಮೆ ನೀಡಿ ಕೆರಹಿಡಿದಿರುವ ಪೊಲೀಸ್ ಇಲಾಖೆ ಮತ್ತು ಕೊಳೆತ ರಾಜಕೀಯ ವ್ಯವಸ್ಥೆಯ ವಿರುದ್ಧ ಸೆಡ್ಡು ಹೊಡೆದಿದ್ದಾರೆ. ಹಿರಿಯ ಅಧಿಕಾರಿಗಳ ದಬ್ಬಾಳಿಕೆ, ರಾಜಕಾರಣಿಯ ದರ್ಪ, ಕಿರಿಯ ಅಧಿಕಾರಿಗಳೇ ಅವರ ಮಾತು ಕೇಳದಿರುವುದು ಅವರಿಗೆ ಇಲಾಖೆಯ ಬಗ್ಗೆ ಭ್ರಮನಿರಸನವಾಗುವಂತೆ ಮಾಡಿದ್ದರಲ್ಲಿ ಅಚ್ಚರಿಯಿಲ್ಲ. ಎಷ್ಟೇ ಪ್ರಾಮಾಣಿಕತೆ ಇದ್ದರೂ ಇಲಾಖೆಯ ಬೆಂಬಲ ಸಿಗದಿದ್ದರೆ ಯಾರು ತಾನೆ ಏನು ಮಾಡಲು ಸಾಧ್ಯ?

ದಂಗೆಯೆದ್ದಿದ್ದ ಪೊಲೀಸ್ ಪೇದೆಗಳು

ದಂಗೆಯೆದ್ದಿದ್ದ ಪೊಲೀಸ್ ಪೇದೆಗಳು

ಸುಮಾರು 3 ದಶಕಗಳ ಕಾಲದಿಂದ ನ್ಯಾಯಯುತ, ಸಂವಿಧಾನಬದ್ಧ ಹಕ್ಕುಗಳನ್ನು ಈಡೇರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಕರ್ನಾಟಕದ ಪೊಲೀಸ್ ಸಿಬ್ಬಂದಿಗಳು ಇಲಾಖೆ ಮತ್ತು ಸರಕಾರದ ವಿರುದ್ಧ ಸಿಡಿದೆದ್ದಿದ್ದರು. ಅವರ ವಿರುದ್ಧ ಎಸ್ಮಾ ಜಾರಿಯ ಬೆದರಿಕೆ ಒಡ್ಡಿ ಮತ್ತು ಕೆಲ ಬೇಡಿಕೆಗಳನ್ನು ಈಡೇರಿಸುವ ಆಮಿಷವೊಡ್ಡಿ ಪ್ರತಿಭಟನೆಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಯಿತು. ಅವರ ಹಕ್ಕುಗಳನ್ನು ನೀಡಲಾಗಿದೆಯಾ? ದೇವರೂ ತಿಳಿದಿರಲಾರ!

English summary
What has happened to Karnataka police? Two DySPs Kallappa Handibhag and MK Ganapati have committed suicide in a week, one DySP Anupama Shenoy has submitted resignation protesting against the department and politics. Let's look at some of the latest controversies surrounding police department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X