ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಗೆ ಅಡ್ಡ ಮತದಾನದ ಆತಂಕ-ಡಿ ಕೆ ಶಿವಕುಮಾರ್ ಪ್ಲಾನ್ ಏನು?
ಬೆಂಗಳೂರು, ಫೆಬ್ರವರಿ 15: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ರಾಜ್ಯಸಭೆ ಚುನಾವಣೆಗೆ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಹೊಸ ದಾಳ ಪ್ರಯೋಗ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದ್ದರೂ ಸಹ ಈಗ ಅಡ್ಡ ಮತದಾನದ ಆತಂಕ ಎದುರಾಗಿದ್ದು, ಕನಕಪುರ ಬಂಡೆ ಡಿ ಕೆ ಶಿವಕುಮಾರ್ ಸಹ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನ ಸೆಳೆಯುವ ತಂತ್ರಗಾರಿಕೆ ನಡೆಸಿದ್ದಾರೆ.
ಹೌದು, ಈ ಕುರಿತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದು, ಅವರಿಗೆ ಆತ್ಮಸಾಕ್ಷಿಯ ಮತಗಳು ಬೀಳಲಿವೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರು ಅಡ್ಡಮತದಾನದ ಸೂಚನೆ ಕುರಿತು ಮಾತನಾಡಿ, ನಮಗೂ ಎಲ್ಲಾ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೂ ಆತ್ಮಸಾಕ್ಷಿ ಮತಗಳು ಬೀಳಲಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.

ನಮಗೂ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಜೆಡಿಎಸ್ ವಿಫಲವಾಗಿರುವ ಕಾರಣದಿಂದ ಅವರು ಬಿಜೆಪಿ ಜತೆ ನೆಂಟಸ್ಥನ ಮಾಡುತ್ತಿದ್ದಾರೆ. ಆ ಪಕ್ಷಗಳಿಂದ ನಮಗೂ ಆತ್ಮಸಾಕ್ಷಿಯ ಮತಗಳು ಬರುವ ವಿಶ್ವಾಸವಿದೆ. ಬಿಜೆಪಿ ಮತ್ತು ಜೆಡಿಎಸ್ ನವರು ಸದಾ ಕುದುರೆ ವ್ಯಾಪಾರ ಮಾಡುತ್ತಾರೆ. ಅವರು ಅದಕ್ಕೆ ಹೆಸರುವಾಸಿ. ಫೆಬ್ರವರಿ. 27 ರಂದು ಎಲ್ಲವೂ ತಿಳಿಯಲಿದೆ. ಅವರು ಬಿಜೆಪಿಗೆ ಬಹಳ ಹತ್ತಿರವಾಗಿರುವಂತೆ ಬಿಂಬಿಸುತ್ತಿದ್ದಾರೆ. ಬಿಜೆಪಿಯ ಎಷ್ಟು ಮತಗಳು ಅವರಿಗೆ ಸಿಗಲಿದೆ ಎಂಬುದನ್ನು ಕಾದುನೋಡಿ ಎಂದು ಹೇಳಿದರು.
ಮೈತ್ರಿಯಿಂದ ಐದನೇ ಅಭ್ಯರ್ಥಿ ಕಣಕ್ಕಿಳಿಸುತ್ತಿರುವ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಅವರು ಅವರ ಪ್ರಯತ್ನ ಮಾಡಲಿ. ನಾವು ನಮ್ಮ ಒಗ್ಗಟ್ಟಿನ ರಾಜಕಾರಣ ಮಾಡುತ್ತೇವೆ ಎಂದು ತಿಳಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ಬೆಂಬಲ ನೀಡಿದ್ದಾರೆ. ರಾಜ್ಯಸಭೆಗೆ ನಮ್ಮ ಪಕ್ಷದಿಂದ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇವರು ಆಯ್ಕೆಯಾಗಿ ರಾಜ್ಯಸಭೆಯಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಅಜಯ್ ಮಾಕೇನ್ ಅವರ ಆಯ್ಕೆ ವಿಚಾರವಾಗಿ ಮಾತನಾಡಿ, ಈ ಹಿಂದೆ ಬಿಜೆಪಿ, ಜೆಡಿಎಸ್ ನವರು ಕರೆದುಕೊಂಡು ಬಂದು ನಿಲ್ಲಿಸಿದ್ದರಲ್ಲ, ಅವರನ್ನು ಕೇಳಿ. ಅಜಯ್ ಮಾಕೇನ್ ಅವರ ಕುಟುಂಬ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಅನೇಕ ತ್ಯಾಗ ಮಾಡಿದೆ. ವಿದ್ಯಾರ್ಥಿ ನಾಯಕನಿಂದ ದೆಹಲಿವರೆಗೂ ಪಕ್ಷದ ಸಂಘಟನೆ ಮಾಡಿರುವ ಪಕ್ಷದ ಆಧಾರಸ್ತಂಭ ಇವರು. ಹೀಗಾಗಿ ಅವರನ್ನು ನಾವು ಬಹಳ ಸಂತೋಷದಿಂದ ಆಯ್ಕೆ ಮಾಡಿದ್ದೇವೆ ಎಂದರು.
ಚುನಾವಣಾ ಬಾಂಡ್ ಗಳನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿರುವ ಬಗ್ಗೆ ಕೇಳಿದಾಗ, "ದೇಶದ ಇತಿಹಾಸದಲ್ಲೇ ಇದೊಂದು ಮಹತ್ವದ ನಿರ್ಧಾರ. ಅವರ ಈ ಧೈರ್ಯವಾದ ನಿರ್ಧಾರಕ್ಕೆ ನಾನು ಅಭಿನಂದಿಸುತ್ತೇನೆ. ದೇಶದ ಪ್ರಜಾಪ್ರಭುತ್ವ ಉಳಿಸಲು ಇಂತಹ ಮಹತ್ವದ ನಿರ್ಧಾರಗಳು ಬೇಕು" ಎಂದು ತಿಳಿಸಿದರು.












Click it and Unblock the Notifications