ನಾಯಕರ ಮನೆಗಳಿಗೆ ತೆರಳುವ ಬದಲು ಕಾರ್ಯಕರ್ತರ ಮನೆಗೆ ತೆರಳಿದ ವಿಜಯೇಂದ್ರ- ಕುತೂಹಲಕರ ಹೆಜ್ಜೆ ಇಟ್ಟ 'ಮರಿಹುಲಿ'
ಬೆಂಗಳೂರು, ನವೆಂಬರ್ 11: ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಶಾಸಕರಾದ ಬಿವೈ ವಿಜಯೇಂದ್ರ ಅವರನ್ನು ಶುಕ್ರವಾರ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದ್ದು, ರಾಜ್ಯಾಧ್ಯಕ್ಷರಾದ ಬಳಿಕ ದೊಡ್ಡ ದೊಡ್ಡ ನಾಯಕರ ಮನೆಗೆ ತೆರಳುವ ಬದಲು ಕಾರ್ಯಕರ್ತರ ಮನೆಗೆ ಬಿ ವೈ ವಿಜಯೇಂದ್ರ ತೆಳಿದ್ದು, ಕುತೂಹಲಕಾರಿ ಹೆಜ್ಜೆ ಇಟ್ಟಿದ್ದಾರೆ.
ಹೌದು, ಗಾಂಧಿನಗರ ಬೂತ್ 40ರ ಅಧ್ಯಕ್ಷ ಶಶೀಂದ್ರ ಅವರ ಮನೆಗೆ ಭೇಟಿ ಕೊಟ್ಟ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಬಿಜೆಪಿ ಕಾರ್ಯಕರ್ತರು ಹೋರಾಟದಿಂದ ಹಿಂದೆ ಸರಿದ ಉದಾಹರಣೆಗಳಿಲ್ಲ. ನಮ್ಮ ಕಾರ್ಯಕರ್ತರ ರಕ್ತದ ಕಣಕಣದಲ್ಲೂ ಹೋರಾಟದ ಗುಣವಿದೆ. ಕಾಂಗ್ರೆಸ್ ಅಬ್ಬರವನ್ನು ಮೀರಿ ನಮ್ಮ ಪಕ್ಷದ ಕಾರ್ಯಕರ್ತರು ಸಂಘಟನೆ ಮಾಡುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಪ್ರತಿಯೊಂದು ಬೂತ್ ಅಧ್ಯಕ್ಷರು ಕೂಡ ಪಕ್ಷದ ಜೀವಾಳ. ಪಕ್ಷದ ಎಲ್ಲ ಬೂತ್‍ಗಳನ್ನು ಬಲಪಡಿಸಲು ಆದ್ಯತೆ ನೀಡುವುದಾಗಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದು,ಗಾಂಧಿನಗರ ಬೂತ್ 40ರ ಅಧ್ಯಕ್ಷ ಶಶೀಂದ್ರ ಅವರ ಮನೆಗೆ ಭೇಟಿ ಕೊಟ್ಟಿದ್ದೇನೆ. ದೀಪಾವಳಿ ಶುಭಾಶಯ ಕೋರಿದ್ದೇನೆ. ರಾಜ್ಯದಲ್ಲಿ 58,282 ಬೂತ್‍ಗಳು ಇವೆ. ಎಲ್ಲ ಬೂತ್‍ಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಬೂತ್ ಪ್ರಮುಖ ಮತ್ತು ಪಕ್ಷದ ಜೀವಾಳ ಎಂಬುದು ಹಿಂದಿನ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇಂದಿನ ಕೇಂದ್ರ ಗೃಹ ಸಚಿವರು ಆದ ಅಮಿತ್ ಶಾ, ಇಂದಿನ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಕಲ್ಪನೆ ಮತ್ತು ಚಿಂತನೆಯಾಗಿದೆ. ಅವರ ಚಿಂತನೆಯಂತೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡುವ ಮೂಲಕ ಕಾರ್ಯಾರಂಭ ಮಾಡಿದ್ದೇನೆ. ಇಡೀ ರಾಜ್ಯದಲ್ಲಿರುವ ಎಲ್ಲ 58 ಸಾವಿರಕ್ಕೂ ಹೆಚ್ಚು ಬೂತ್‍ಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಹೆಜ್ಜೆ ಇಡುವುದಾಗಿ ತಿಳಿಸಿದರು.
ಪಕ್ಷದ ರಾಷ್ಟ್ರೀಯ ನಾಯಕರು ಬೂತ್ ಅಧ್ಯಕ್ಷರಾಗಿ ಈ ಮಟ್ಟಕ್ಕೆ ಬೆಳೆದುಬಂದಿದ್ದಾರೆ. ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷರಂತೆ ಬೂತ್ ಅಧ್ಯಕ್ಷರನ್ನೂ ಗೌರವದಿಂದ ಕಾಣುತ್ತದೆ. ಇದೇ ಬಿಜೆಪಿಯ ವಿಶೇಷತೆ ಎಂದು ತಿಳಿಸಿದರು.












Click it and Unblock the Notifications