ಜೆಡಿಎಸ್-ಕಾಂಗ್ರೆಸ್ ಮೈತ್ರಿ : 12 ಸ್ಥಾನಕ್ಕೆ ದೇವೇಗೌಡರ ಬೇಡಿಕೆ
Recommended Video

ಬೆಂಗಳೂರು, ಡಿಸೆಂಬರ್ 29 : '2019ರ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯಲ್ಲಿ ನಮಗೆ 12 ಸ್ಥಾನಗಳು ಬೇಕು' ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡರು, 'ಯಾವುದೇ ಸಮಸ್ಯೆ ಇಲ್ಲದಂತೆ ಸೀಟು ಹಂಚಿಕೆ ಮಾಡಿಕೊಳ್ಳುತ್ತೇವೆ. ಜನವರಿ 8ರಂದು ಲೋಕಸಭೆ ಅಧಿವೇಶನ ಮುಗಿಯಲಿದ್ದು, ಜನವರಿ 15ರೊಳಗೆ ರಾಹುಲ್ ಗಾಂಧಿ ಜೊತೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲಾಗುತ್ತದೆ' ಎಂದರು.
'ಲೋಕಸಭೆ ಅಧಿವೇಶನ ಮುಗಿದ ಬಳಿಕ ಏಳೆಂಟು ಜಿಲ್ಲೆಗಳಿಗೆ ನಾವು ಪ್ರವಾಸ ಮಾಡುತ್ತೇವೆ. ಮಾರ್ಚ್ ಮೊದಲ ವಾರದಲ್ಲೇ ಪ್ರವಾಸ ಆರಂಭಿಸುತ್ತೇವೆ. ಮೈತ್ರಿ ಸರ್ಕಾರ ಮಾಡಿದ್ದೇವೆ ಎಂದು ಸಲುಗೆ ಕೊಡುವುದಿಲ್ಲ. ಪ್ರಾದೇಶಿಕ ಪಕ್ಷ ಉಳಿಯುವುದು ಮುಖ್ಯ' ಎಂದು ತಿಳಿಸಿದರು.

'ಉಪ ಸಭಾಪತಿ, ಸಚೇತಕ ಸ್ಥಾನ ನಮಗೆ ಬಿಟ್ಟುಕೊಟ್ಟಿದ್ದಾರೆ. ಅಂತಿಮ ಕ್ಷಣದವರೆಗೂ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಅಂತಿಮ ಕ್ಷಣದ ತನಕ ಪ್ರಯತ್ನ ನಡೆಸಿದೆವು. ಆದರೆ, ಆಗಲಿಲ್ಲ. ಇದಕ್ಕಾಗಿ ಸರ್ಕಾರಕ್ಕೆ ಸಂಚಕಾರ ತಂದುಕೊಳ್ಳಲು ಆಗುತ್ತಾ' ಎಂದು ಗೌಡರು ಪ್ರಶ್ನಿಸಿದರು.
'ಖಾತೆ ಹಂಚಿಕೆಯಲ್ಲಿ ಅಸಮಾಧಾನವಿಲ್ಲ. ಉಳಿದುಕೊಂಡಿರುವ ನಮ್ಮ ಎರಡು ಖಾತೆಗಳನ್ನು ಹಂಚುವುದು ಸ್ಪಲ್ಪ ತಡವಾಗಬಹುದು. ಮೊದಲು ಲೋಕಸಭೆ ಚುನಾವಣೆಗೆ ಗಮನ ಕೊಡಬೇಕಿದೆ' ಎಂದರು.












Click it and Unblock the Notifications