ಸಿದ್ದರಾಮಯ್ಯಗೆ ರಾಜೀನಾಮೆ ಕೊಡ್ಬೇಡಿ ಅಂತ ಹೇಳಿದ್ದೇವೆ ಎಂದಿದ್ಯಾರು
ಮುಡಾ ಪ್ರಕರಣದ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದೀಗ ಕಾಂಗ್ರೆಸ್‌ನ ಎಲ್ಲ ನಾಯಕರು ಹಾಗೂ ಮುಖಂಡರು ಸಿ.ಎಂ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಇಡೀ ಸಚಿವ ಮಂಡಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದೆ. ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರೆಶ್ನೆಯೇ ಇಲ್ಲ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಲೋಕಾಯುಕ್ತ ತನಿಖೆಗೆ ಅದೇಶಿಸಲಾಗಿದೆ. ತನಿಖೆ ನಡೆಯಲಿ, ಇದಾದ ನಂತರ ಸತ್ಯ ತಿಳಿಯಲಿದೆ. ಸಿದ್ದರಾಮಯ್ಯ ಅವರದ್ದು, ಈ ಪ್ರಕರಣದಲ್ಲಿ ಯಾವುದೇ ಪಾತ್ರ ಇಲ್ಲ. ಹೈಕೋರ್ಟ್‌ನಲ್ಲೂ ವಿಚಾರಣೆಗೆ ಅನುಮತಿ ಕೊಟ್ಟಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತನಿಖೆಗೆ ಆದೇಶ ಬಂದಿದೆ. ನಾವು ತನಿಖೆಗೆ ಸಿದ್ದ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಜತೆ ಇದೆ. ಶಾಸಕರು, ಸಚಿವರು ಅವರೊಂದಿಗೆ ಇದ್ದೇವೆ. ರಾಜೀನಾಮೆ ಕೊಡಬೇಡಿ ಎಂದು ನಾವೆಲ್ಲರೂ ಹೇಳಿದ್ದೇವೆ. ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಸಹ ಸಿದ್ದರಾಮಯ್ಯ ರಾಜೀನಾಮೆ ಅಗತ್ಯ ಇಲ್ಲವಿಲ್ಲ. ಕಾನೂನಾತ್ಮಕ ಹೋರಾಟ ಮಾಡಲಿದ್ದಾರೆ. ಅವರನ್ನು ಐದು ವರ್ಷ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಮುಡಾ ಪ್ರಕರಣ ಸಂಪೂರ್ಣ ರಾಜಕೀಯ ಪ್ರೇರಿತ ಎಂದಿದ್ದಾರೆ.
ಪ್ರಧಾನಿ ಮೋದಿಯಿಂದಲೂ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕರ್ನಾಟಕದ ಸಿ.ಎಂ ಸಿದ್ದರಾಮಯ್ಯ ಅವರ ಮೇಲೆ ಜಮೀನು ಕಬಳಿಸಿದ ಆರೋಪವಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್‌ನಲ್ಲೂ ಅವರಿಗೆ ಮುಖಭಂಗವಾಗಿದೆ. ಹೈಕೋರ್ಟ್ ಈ ಸಂಬಂಧ ತನಿಖೆ ನಡೆಯಬೇಕು ಎಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೇವಲ ಎರಡು ವರ್ಷ ಮಾತ್ರ ಆಗಿದೆ. ಆದರೆ, ಕಾಂಗ್ರೆಸ್ ನವರು ಚಾಳಿ ಬಿಡುವುದಿಲ್ಲ. ಹರಿಯಾಣದಲ್ಲೂ ಇದೇ ಪಾಪವನ್ನು ಮಾಡುವುದಕ್ಕೆ ನೀವು ಬಿಡಬೇಡಿ ಎಂದು ಅಲ್ಲಿ ನಡೆದ ಚುನಾವಣಾ ಪ್ರಚಾರಲ್ಲೂ ಮೋದಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ನರಿಗಳು ನ್ಯಾಯ ಪಂಚಾಯ್ತಿಗೆ ಕುಳಿತಂತೆಯೇ..
ಇನ್ನು ಬಿಜೆಪಿ ಆರೋಪಗಳಿಗೆ ಉತ್ತರಿಸಿರುವ ಕಾಂಗ್ರೆಸ್ ನರಿಗಳು ನ್ಯಾಯ ಪಂಚಾಯ್ತಿಗೆ ಕುಳಿತಂತೆಯೇ ಇದೆ ಎಂದು ವ್ಯಂಗ್ಯವಾಡಿದೆ. ಮೈಮೇಲೆ ಹಗರಣಗಳ ಸರಮಾಲೆಯನ್ನೇ ಹೊದ್ದಿರುವ ಬಿಜೆಪಿ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವುದು ನರಿಗಳು ನ್ಯಾಯ ಪಂಚಾಯ್ತಿಗೆ ಕುಳಿತಂತೆಯೇ ಸರಿ ಎಂದು ಕಾಂಗ್ರೆಸ್ ಹೇಳಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯವರಿಗೆ ನೈತಿಕತೆ ಇದ್ದರೆ ಜಾಮೀನಿನ ಮೇಲೆ ಹೊರಗಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ರಾಜೀನಾಮೆ ಕೇಳಲಿ ಎಂದಿದೆ. ಅಲ್ಲದೇ ಕುಮಾರ ಸ್ವಾಮಿ ಅವರ ಮೇಲೆ ಎರಡೆರಡು ಪ್ರಕರಣಗಳಿವೆ. ಕುಮಾರಸ್ವಾಮಿಯವರೇ, ನೀವು ರಾಜೀನಾಮೆ ಕೊಡುವುದು ಯಾವಾಗ, ಗಣಿ ಹಗರಣದ ವಿಚಾರಣೆ ಎದುರಿಸುವುದು ಯಾವಾಗ ಹಾಗೂ ಗಂಗೇನಹಳ್ಳಿ ಡಿನೋಟಿಫಿಕೇಶನ್ ಮೂಲಕ ಭೂಮಿ ಕಬಳಿಸಿದ ಪ್ರಕರಣದ ತನಿಖೆ ಎದುರಿಸುವುದು ಯಾವಾಗ ಎಂದು ಪ್ರಶ್ನೆ ಮಾಡಿದೆ. ಅಲ್ಲದೇ ಅಕ್ರಮಗಳಿಗೆ ಸ್ಪಷ್ಟ ದಾಖಲೆಗಳಿರುವ ಕುಮಾರಸ್ವಾಮಿ ಅವರು ರಾಜೀನಾಮೆ ಕೊಟ್ಟು ನೈತಿಕತೆ ತೋರಿಸಲಿ ಎಂದು ಹೇಳಿದ್ದಾರೆ.












Click it and Unblock the Notifications