ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರದ ಜಾಹೀರಾತು- ಇದು ಮತಯಾಚನೆ ತಂತ್ರವೇ? ಡಿಕೆಶಿ ಹೇಳಿದ್ದೇನು?
ಬೆಂಗಳೂರು, ನವೆಂಬರ್ 28: ನಮ್ಮ ಸರ್ಕಾರದ ಜಾಹೀರಾತಿನಲ್ಲಿ ನಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದೇವೆಯೇ ಹೊರತು ಮತಯಾಚನೆ ಮಾಡಿಲ್ಲ. ಹೀಗಾಗಿ ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಈ ಕುರಿತು ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ತೆಲಂಗಾಣದ ಪತ್ರಿಕೆಗಳಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾಹಿರಾತಿನ ವಿಚಾರವಾಗಿ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿರುವ ಬಗ್ಗೆ ಉತ್ತರಿಸಿದ್ದು, ನೀತಿ ಸಂಹಿತೆ ಉಲ್ಲಂಘನೆ ಅಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಜಾಹೀರಾತಿನಲ್ಲಿ ಸರ್ಕಾರದ ಕೆಲಸದ ಬಗ್ಗೆ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ಅಥವಾ ಇಂತಹ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಜಾಹಿರಾತಿನಲ್ಲಿ ತಿಳಿಸಿಲ್ಲ. ಇದು ಉಲ್ಲಂಘನೆ ಹೇಗೆ ಆಗುತ್ತದೆ? ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿಲ್ಲ ಎಂದು ಅವರು ಅಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ನಾವು ಪತ್ರಿಕೆ ಹಾಗೂ ಮ್ಯಾಗಜಿನ್ ಗಳಲ್ಲಿ ನೀಡುವ ಜಾಹೀರಾತು ಕೆಲವೊಮ್ಮೆ ತೆಲಂಗಾಣ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಗೂ ಹೋಗುತ್ತದೆ. ನಾವು ಮತ ಯಾಚನೆ ಮಾಡಿದ್ದರೆ ಆಗ ನಿಯಮ ಉಲ್ಲಂಘನೆ ಆಗುತ್ತಿತ್ತು. ಚುನಾವಣಾ ಆಯೋಗದ ನೊಟೀಸ್ ಗೆ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ಮಾದರಿಯಂತೆ ತೆಲಂಗಾಣದಲ್ಲಿ 6 ಗ್ಯಾರಂಟಿಗಳನ್ನು ನೀಡಲಾಗಿದೆ. ದಲಿತ ಸಿಎಂ ಸೇರಿದಂತೆ ಕೆಸಿಆರ್ ಅವರ ನೇತೃತ್ವದ ಸರ್ಕಾರ 10 ವರ್ಷಗಳಲ್ಲಿ ತಾನು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ತೆಲಂಗಾಣ ರಾಜ್ಯ ರಚನೆಗೆ ಸೋನಿಯಾ ಗಾಂಧಿ ಅವರೇ ಕಾರಣ. ತೆಲಂಗಾಣದ ಜನರಿಗೆ ಸೋನಿಯಾಗಾಂಧಿ ಅವರ ಋಣ ತೀರಿಸಬೇಕು ಎನ್ನುವ ಭಾವನೆ ಬಂದಿದೆ.
ಜನರಿಗೆ ತೋಟದ ಮನೆಯಲ್ಲಿ ಕುಳಿತು ಕೆಲಸ ಮಾಡುವವರು ಬೇಕಿಲ್ಲ. ಜನರ ಮಧ್ಯೆ ಕೆಲಸ ಮಾಡುವ ಸರ್ಕಾರ ಬೇಕು ಎನ್ನುವುದು ಅರ್ಥವಾಗಿದೆ. ಜನ ಬದಲಾವಣೆ ಬಯಸಿದ್ದಾರೆ" ಎಂದು ಹೇಳಿದರು. ತೆಲಂಗಾಣ ಚುನಾವಣೆಗೆ ಕರ್ನಾಟಕದ ಸುಮಾರು 40 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ನಾನು ಸಹ 5 ದಿನಗಳ ಕಾಲ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರೂ ಭಾಗವಹಿಸಿದ್ದರು" ಎಂದು ಹೇಳಿದರು.
ರೈತಬಂಧು ಕಾರ್ಯಕ್ರಮದ ಅಡಿ ರೈತರಿಗೆ ಧನಸಹಾಯ ನೀಡುವ ಬಿಜೆಪಿ ಸರ್ಕಾರದ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿತ್ತು. ಆದರೆ ಮತ್ತೆ ರದ್ದು ಮಾಡಿದ್ದಾರೆ. ಒಂದರ್ಥದಲ್ಲಿ ಚೆಸ್ ಆಟವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.












Click it and Unblock the Notifications