ಮದ್ದು ಅರೆದು ಕಳಿಸಿದ ಮೇಲೆ ಮುದ್ದುಗರೆಯುತ್ತಿದ್ದಾರಾ ಬಿಎಸ್ವೈ,ಈಶು?
ನಮ್ಮಿಬ್ಬರಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರುವುದಿಲ್ಲ ಎಂದು ಯಡಿಯೂರಪ್ಪ ಮತ್ತು ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಹೇಳಿದ್ದಾರೆ.
ಬೆಂಗಳೂರು, ಫೆ 18: ನನ್ನ ಮತ್ತು ಈಶ್ವರಪ್ಪ ನಡುವೆ ಇದ್ದ ಗೊಂದಲಗಳೆಲ್ಲಾ ಬಗೆಹರಿದಿದೆ, ಇಬ್ಬರೂ ಸೇರಿ ಪಕ್ಷವನ್ನು ಇನ್ನಷ್ಟು ಬಲಗೊಳಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಶನಿವಾರ (ಫೆ 18) ಹಿಂದುಳಿದ ವರ್ಗಗಳ ಮೋರ್ಚಾ ಸಭೆಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, ಇನ್ನು ಮುಂದೆ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಮತ ಇರುವುದಿಲ್ಲ ಎಂದು ವಾಗ್ದಾನ ಮಾಡಿದ್ದಾರೆ. (ಪೊಲೀಸ್ ಮೆಟ್ಟಿಲೇರಿದ ಬಿಎಸ್ವ್ವೈ, ಅನಂತ್ ಸಂಭಾಷಣೆ)
ನಮ್ಮಿಬ್ಬರಲ್ಲಿದ್ದ ಸಣ್ಣಮಟ್ಟದ ಗೊಂದಲ ಪರಿಹಾರವಾಗಿದೆ, ನಾನು ಮತ್ತು ಯಡಿಯೂರಪ್ಪ ರಾಜ್ಯದೆಲ್ಲಡೆ ಸುತ್ತಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಪಕ್ಷದಲ್ಲಿನ ಭಿನ್ನಮತವನ್ನು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ವರಿಷ್ಠರು ಬಗೆಹರಿಸಿದ್ದಾರೆಂದು ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ನಮ್ಮ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಕಟಿಬದ್ದರಾಗಿದ್ದಾರೆ. ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ನನ್ನ ಮುಂದಿನ ಏಕೈಕ ಗುರಿ ಎಂದು ಈಶ್ವರಪ್ಪ ಹೇಳಿದ್ದಾರೆ.
ಈಶ್ವರಪ್ಪನವರನ್ನು ಹಿಂದುಳಿದ ಮೋರ್ಚಾಕ್ಕೆ ಪ್ರಮುಖರನ್ನಾಗಿ ವರಿಷ್ಠರು ಆಯ್ಕೆ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ, ಈಶ್ವರಪ್ಪನವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಎರಡು ಬೃಹತ್ ಸಮಾವೇಶಗಳನ್ನು ಆಯೋಜಿಸುತ್ತೇವೆ ಎಂದು ಯಡಿಯೂರಪ್ಪ ಸಭೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಮಾತನಾಡುತ್ತಾ ಯಡಿಯೂರಪ್ಪ, ಹಲವು ಕಾರಣಗಳಿಂದ ಪಕ್ಷ ತೊರೆದ ಮುಖಂಡರನ್ನು ನಾನು ಈ ಮೂಲಕ ಮತ್ತೆ ಪಕ್ಷಕ್ಕೆ ಆಹ್ವಾನಿಸುತ್ತಿದ್ದೇನೆ. ಬನ್ನಿ ಪಕ್ಷವನ್ನು ಬಲಪಡಿಸೋಣ ಎಂದು ಬಿಎಸ್ವೈ ಕರೆ ನೀಡಿದ್ದಾರೆ.
ಕೊನೇ ಮಾತು: ಹಾವು ಮುಂಗುಸಿಯಂತಿದ್ದ ನೀವಿಬ್ಬರೂ ಒಂದೇ ಮೀಟಿಂಗ್ ನಲ್ಲಿ ಈ ಪಾಟಿ ಒಂದಾಗಿದ್ದೀರಾ ಅಂದರೆ, ವರಿಷ್ಠರು ಅದ್ಯಾವ ಟಾನಿಕ್ ಕೊಟ್ಟಿರಬಹುದು ಎನ್ನುವುದೇ ಇಲ್ಲಿ ಕುತೂಹಲದ ಪ್ರಶ್ನೆ.












Click it and Unblock the Notifications