ಗೌರಿ ಹತ್ಯೆಗೂ ನಮಗೂ ಸಂಬಂಧವಿಲ್ಲ: ಸನಾತನ ಸಂಸ್ಥೆ
ನವ ದೆಹಲಿ, ಜೂನ್ 05: ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ಬರುವ ಹೊತ್ತಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಗೌರಿ ಹತ್ಯೆಗೂ ನಮಗೂ ಸಂಬಂಧವಿಲ್ಲ ಎಂದಿದೆ.
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಜಂಟಿಯಾಗಿ ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, 'ಬೇಕೆಂದೇ ನಮ್ಮ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಲಾಗಿದ್ದು, ಅಮಾಯಕರಿಗೆ ಕಿರುಕುಳ ನೀಡಲಾಗುತ್ತಿದೆ' ಎಂದು ಪ್ರಕಟಣೆಯಲ್ಲಿ ಹೇಳಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಸನಾತನ ಸಂಸ್ಥೆಯ ಕಾರ್ಯಕರ್ತರು ಎನ್ನಲಾಗುತ್ತಿದ್ದು ಹಾಗಾಗಿ ಸನಾತನ ಸಂಸ್ಥೆಯು ಈ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ತಮ್ಮ ಸಂಘಟನೆಯನ್ನು ಬೇಕೆಂದೇ ಗುರಿ ಮಾಡಲಾಗಿದೆ ಎಂದು ಆರೋಪಿಸಿರುವ ಸನಾತನ ಸಂಸ್ಥೆ, ''ಜಾತ್ಯಾತೀತ' ಹೆಸರಿನಲ್ಲಿ ಹಿಂದೂ ಸಂಘಟನೆಗಳನ್ನು ಮುಗಿಸಲು ಹೂಡಿರುವ ಹುನ್ನಾರ' ಎಂದು ಅದು ಆರೋಪಿಸಿದೆ.
ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5 ರಂದು ಅವರ ಮನೆಯ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮೊದಲಿಗೆ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನನ್ನು ಬಂಧಿಸಲಾಗಿತ್ತು ಆ ನಂತರ ಇತ್ತೀಚೆಗೆ ಮತ್ತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರು ಸನಾತನ ಸಂಸ್ಥೆಯ ಸದಸ್ಯರು ಎನ್ನಲಾಗಿದೆ.












Click it and Unblock the Notifications