ಮಂಡ್ಯ, ಬೆಂಗಳೂರು ಗ್ರಾಮಾಂತರ ನಮ್ಮದು : ಎಚ್ಡಿಕೆ
ಬೀದರ್, ಡಿ. 10 : ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಜೆಡಿಎಸ್ ಹಾಲಿ ಶಾಸಕರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ. 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ಚುಣಾವಣಾ ಕಣಕ್ಕೆ ಧುಮುಕಲಿದೆ. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ನಾವು ಜಯಗಳಿಸಲಿದ್ದೇವೆ ಎಂದು ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಬೀದರ್ ನಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಲೋಕಸಭೆ ಚುನಾವಣೆಗೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಸ್ಪರ್ಧಿಸಲಿದೆ. ಡಿಸೆಂಬರ್ ಅಂತ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಲಿದೆ ಕನಿಷ್ಠ ನಾಲ್ಕು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸುವ ಪಕ್ಷ ಚಿಂತನೆ ನಡೆದಿದ್ದು, ವರಿಷ್ಠರು ಯಾವ ಕ್ಷೇತ್ರಗಳು ಎಂಬುದನ್ನು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.

ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಸಹ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ ಕುಮಾರಸ್ವಾಮಿ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿ ಒಟ್ಟು 15 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ಗುರಿ ಹೊಂದಿದೆ ಎಂದರು. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತ್ರ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುವ ಸುಳಿವನ್ನು ಕುಮಾರಸ್ವಾಮಿ ನೀಡಿದ್ದಾರೆ.
ಗೋವಾದಿಂದ ಮರಳಿದ ಜೆಡಿಎಸ್ ನಾಯಕರು : ಬೆಳಗಾವಿ ಚಳಿಗಾಲದ ಅಧಿವೇಶನದ ನಂತರ ಗೋವಾಕ್ಕೆ ತೆರಳಿದ ಜೆಡಿಎಸ್ ಶಾಸಕರು ಅಲ್ಲಿಂದ ಮರಳಿ, ಸ್ವ ಕ್ಷೇತ್ರಗಳಿಗೆ ಮರಳಿದ್ದಾರೆ. ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡು ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದ ಶಾಸಕ ಜಮೀರ್ ಅಹಮದ್ ಅವರ ಮನವೊಲಿಕೆ ಮಾಡಲು ಜೆಡಿಎಸ್ ನಾಯಕರು ಗೋವಾಕ್ಕೆ ತೆರಳಿದ್ದರು. (ಗೋವಾದಲ್ಲಿ ಸಂಧಾನ ಸಭೆ)
ಡಿ.5ರಂದು ಜಮೀರ್ ಅಹಮದ್ ಅವರೊಂದಿಗೆ ಶಾಸಕರಾದ ಎನ್.ಚೆಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಗೋವಾಕ್ಕೆ ತೆರಳಿದ್ದರು. ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇತರ ನಾಯಕರು ಶುಕ್ರವಾರ ಗೋವಾಕ್ಕೆ ತೆರಳಿದ್ದರು. ಸದ್ಯ ಎಲ್ಲರೂ ಸ್ವ ಕ್ಷೇತ್ರಗಳಿಗೆ ಮರಳಿದ್ದು, ಗೋವಾದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ಪಕ್ಷದ ಮೂಲಕಗಳು ತಿಳಿಸಿವೆ.












Click it and Unblock the Notifications