ಲೋಕಸಭಾ ಚುನಾವಣಾ ರಣತಂತ್ರದ ಮಾರ್ಗಸೂಚಿ ಚರ್ಚೆ: ಸಿ ಟಿ ರವಿ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 28: ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನ ಗೆಲ್ಲಲು ನಮ್ಮ ರಣತಂತ್ರ ಏನಿರಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ರಾಜ್ಯ ಮತ್ತು ದೇಶದ ಜನರು ನರೇಂದ್ರ ಮೋದಿಯವರು ಮತ್ತೆ ಪ್ರಧಾನಮಂತ್ರಿ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಜನರು ನಮ್ಮನ್ನು ಬಯಸುತ್ತಿದ್ದಾರೆ. ನಾವು ವಿಶೇಷ ಪ್ರಯತ್ನ ಮಾಡಿದರೆ, ಒಂದಾಗಿ ಹೋದರೆ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.
ರಾಜ್ಯಾಧ್ಯಕ್ಷ ವಿಜಯೇಂದ್ರರವರ ನೇತೃತ್ವದಲ್ಲಿ ಪ್ರಮುಖರ ವಿಶೇóಷ ಸಮಾಲೋಚನಾ ಸಭೆ ನಡೆಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 28 ಸ್ಥಾನಗಳನ್ನೂ ಗೆಲ್ಲುವ ಕುರಿತು ಯಾವ ರೀತಿ ಕಾರ್ಯಯೋಜನೆ ರೂಪಿಸಬೇಕು. ಜೆಡಿಎಸ್ ಜೊತೆ ಸಮನ್ವಯ ಸಾಧಿಸಿ ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ಎಂಬ ವಿಷಯ ಚರ್ಚಿಸಲಾಗಿದೆ. ರಣತಂತ್ರದ ಮಾರ್ಗಸೂಚಿಯ ಚರ್ಚೆ ನಡೆದಿದೆ ಎಂದು ಹೇಳಿದರು.

2 ಪದವೀಧರ, 4 ಶಿಕ್ಷಕರ ಕ್ಷೇತ್ರ ಸೇರಿ ವಿಧಾನಪರಿಷತ್ತಿನ 6 ಕ್ಷೇತ್ರಗಳ ಚುನಾವಣೆಯೂ ಬರುತ್ತಿದೆ. ಈ ಚುನಾವಣಾ ದೃಷ್ಟಿಯಿಂದಲೂ ಚರ್ಚೆ ನಡೆದಿದೆ. ಬಿಜೆಪಿಯನ್ನು ಮತ್ತೆ ಸಂಘಟಿಸುವುದೇ ನಮ್ಮ ಗುರಿ ಎಂದು ವಿವರಿಸಿದರು. ವಿಧಾನಸಭಾ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ನಮ್ಮದು. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿಗೆ ಶ್ರಮಿಸೋಣ: ವಿಜಯೇಂದ್ರ
ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಶ್ರಮಿಸುವ ಅಗತ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಲೋಕಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ. ಹಾಗಾಗಿ ಎಲ್ಲರ ಸಹಕಾರ, ಮಾರ್ಗದರ್ಶನ ಬೇಕಿದೆ ಎಂದು ಹೇಳಿದರು.
ಪಕ್ಷವು ಕರ್ನಾಟಕದಲ್ಲಿ ಇಷ್ಟು ಎತ್ತರಕ್ಕೆ ಬೆಳೆದು ನಿಲ್ಲಲು ಬಿ.ಎಸ್. ಯಡಿಯೂರಪ್ಪನವರು, ಸದಾನಂದಗೌಡರು, ಈಶ್ವರಪ್ಪನವರು, ಸಿ.ಟಿ.ರವಿಯವರು, ಬಸವರಾಜ ಬೊಮ್ಮಾಯಿಯವರು ಸೇರಿ ಅನೇಕ ಹಿರಿಯರು ಕಾರಣಕರ್ತರಾಗಿದ್ದಾರೆ. ಅಂಥ ಎಲ್ಲ ಹಿರಿಯರು ಇಲ್ಲಿದ್ದಾರೆ. ಎಲ್ಲರ ಪರಿಶ್ರಮ ಪಕ್ಷದ ಬೆಳವಣಿಗೆಗೆ ಕಾರಣವಾಗಿದೆ. ಬಿಜೆಪಿಯ ಬೃಹದಾದ ಕಟ್ಟಡ ಮಾತ್ರ ನಮಗೆ ಕಾಣುತ್ತದೆ. ಆದರೆ, ಕಟ್ಟಡದ ಅಡಿಪಾಯ ನಮಗೆ ಗೋಚರಿಸುವುದಿಲ್ಲ. ಬಿಜೆಪಿಗೆ ಸುಭದ್ರ ಬುನಾದಿ ಹಾಕಿದ ಹಿರಿಯರು ನನಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ. ಅವರೆಲ್ಲರೂ ಪಕ್ಷವನ್ನು ಮುನ್ನಡೆಸಲು ಮಾರ್ಗದರ್ಶನ ಮಾಡಬೇಕೆಂದು ಮನವಿ ಮಾಡಿದರು.
ಪಕ್ಷದ ರಾಷ್ಟ್ರದ ಹಿರಿಯರ ಆಶೀರ್ವಾದದಿಂದ ಈ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಎಲ್ಲ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಸಹಕಾರದಿಂದ ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿ ಇಟ್ಟುಕೊಳ್ಳೋಣ. ಲೋಕಸಭೆ ಚುನಾವಣೆ ಮಾತ್ರವಲ್ಲದೆ, ನಂತರ ಬರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ವಿಧಾನ ಪರಿಷತ್ ಸೇರಿ ಎಲ್ಲ ಚುನಾವಣೆಗಳಲ್ಲಿ ಕೂಡ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲೇಬೇಕಿದೆ ಎಂದು ತಿಳಿಸಿದರು. ಈ ಗುರಿ ತಲುಪಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ ಎಂದು ನುಡಿದರು.
ಈ ಸಭೆಯಲ್ಲಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಮಾಜಿಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.












Click it and Unblock the Notifications