Waqf Board Property: ವಕ್ಫ್ ಆಸ್ತಿ ಕುರಿತು ಸರ್ಕಾರದ ಮಹತ್ವದ ಆದೇಶ
ಬೆಂಗಳೂರು, ನವೆಂಬರ್ 10: ವಕ್ಫ್ ಮಂಡಳಿ ಆಸ್ತಿ ಗುರುತಿಸುವಿಕೆ ಕರ್ನಾಟಕದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕೆರೆ, ಪ್ರವಾಸಿ ತಾಣಗಳು, ರೈತರ ಜಮೀನುಗಳನ್ನು ವಕ್ಫ್ ಮಂಡಳಿ ಆಸ್ತಿ ಎಂದು ಪಹಣಿಯಲ್ಲಿ ತೋರಿಸಲಾಗಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಇದನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು ಇವರು ಈ ಕುರಿತು ಎಲ್ಲಾ ಪ್ರಾದೇಶಿಕ ಆಯುಕ್ತರು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ವಕ್ಫ್ ಮಂಡಳಿ ಆಸ್ತಿ ಕುರಿತು ಸೂಚನೆಗಳನ್ನು ನೀಡಿದ್ದಾರೆ. ಈ ಆದೇಶ ವಕ್ಫ್ ಹೆಸರಿನಲ್ಲಿ ಖಾತೆ ಬದಲಾವಣೆ ಕುರಿತು ನೀಡಲಾದ ನಿರ್ದೇಶನಗಳ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಆದೇಶದ ವಿವರಗಳು: ಡಾ: ಬಿ. ಉದಯ ಕುಮಾರ್ ಶೆಟ್ಟಿ, ಸರ್ಕಾರದ ಅಪರ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂ ಮಂಜೂರಾತಿ, ಭೂ ಸುಧಾರಣೆ & ಭೂ ಕಂದಾಯ) ಇವರು ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ.
ಆದೇಶದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕೆಲವು ರೈತರ ಹಾಗೂ ಇತರ ಆಸ್ತಿಗಳನ್ನು ವಕ್ಫ್ ಹೆಸರಿಗೆ ಖಾತೆ ಮಾಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಸಭೆಯನ್ನು ನಡೆಸಿ ಈ ಕೆಳಕಂಡಂತೆ ಸೂಚನೆಯನ್ನು ನೀಡಿರುತ್ತಾರೆ ಎಂದು ಹೇಳಿದ್ದಾರೆ.
* ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್ ಮಾಡಲು ಯಾವುದೇ ಕಛೇರಿ ಅಥವಾ ಯಾವುದೇ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ತಕ್ಷಣದಿಂದಲೇ ಹಿಂಪಡೆಯುವುದು ಹಾಗೂ ಮ್ಯುಟೇಷನ್ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸುವುದು.
* ಈ ಕುರಿತು ನೀಡಲಾದ ಎಲ್ಲಾ ನೋಟೀಸುಗಳನ್ನು ಹಿಂಪಡೆಯುವುದು.
* ಸದರಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರುಗಳ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸತಕ್ಕದಲ್ಲ.
ಸನ್ಮಾನ್ಯ ಮುಖ್ಯಮಂತ್ರಿಗಳ ಸೂಚನೆಯನ್ನಯ ಸರ್ಕಾರದ ಪತ್ರ ದಿನಾಂಕ 15.04.2024, 23.04.2024 ಹಾಗೂ ದಿನಾಂಕ 07.11,2024ರ ನೆನಪೋಲೆ-2 ಇವುಗಳನ್ನು ತಕ್ಷಣದಿಂದಲೇ ಹಿಂಪಡೆಯಲಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳ ಆದೇಶವಿದ್ದಾಗ್ಯೂ, ಮೇಲಧಿಕಾರಿಗಳ ಅನುಮತಿ/ ಅನುಮೋದನೆ ಇಲ್ಲದ ದಿನಾಂಕ 07.11.2024ರ ನೆನಪೋಲೆ-2 ಅನ್ನು ಹೊರಡಿಸಿದ ಅಧಿಕಾರಿಯ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು.
ಸನ್ಮಾನ್ಯ ಮುಖ್ಯಮಂತ್ರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಮ್ಮನ್ನು ಕೋರಲು ನಿರ್ದೇಶಿಸಲ್ಪಟ್ಟಿರುತ್ತೇನೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಪೋಸ್ಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ವಕ್ಫ್ ಮಂಡಳಿ ಆಸ್ತಿ ವಿವಾದ, ಬಿಜೆಪಿ ಪ್ರತಿಭಟನೆ ಕುರಿತು ಪೋಸ್ಟ್ ಹಾಕಿ, 'ವಕ್ಫ್ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣ ವಾಪಸ್ ಪಡೆಯಲು ನಮ್ಮ ಸರ್ಕಾರ ಸೂಚನೆ ನೀಡಿದ ನಂತರವೂ ಬಿಜೆಪಿ ಕರ್ನಾಟಕ ನಾಯಕರು ಪ್ರತಿಭಟನೆಗೆ ಮುಂದಾಗಿರುವುದಕ್ಕೆ ರಾಜಕೀಯ ಲಾಭದ ದುರುದ್ದೇಶ ಇದೆಯೇ ಹೊರತು ಇದರಲ್ಲಿ ರೈತರ ಹಿತಾಸಕ್ತಿ ರಕ್ಷಣೆಯ ಯಾವ ಸದುದ್ದೇಶ ಇಲ್ಲ ಎನ್ನುವುದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ' ಎಂದು ಹೇಳಿದ್ದರು.
'ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಲಾಗಿರುವ ನೋಟಿಸ್‌ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯಬೇಕು. ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಕಾನೂನು ಬಾಹಿರವಾಗಿ ಹಾಗೂ ನೋಟಿಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು. ಅಧಿಕಾರಿಗಳು ಎಚ್ಚರ ವಹಿಸಿ ರೈತರಿಗೆ ತೊಂದರೆ ಆಗುವ ಯಾವುದೇ ತೀರ್ಮಾನವನ್ನು ಕೈಗೊಳ್ಳಬಾರದು ಎಂದು ನಾನು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ಈ ಸೂಚನೆಯ ನಂತರವೂ ಬಿಜೆಪಿ ನಾಯಕರು ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ?' ಎಂದು ಪ್ರಶ್ನಿಸಿದ್ದರು.
'ಜಮೀನಿಗೆ ಸಂಬಂಧಿಸಿದ ವಿವಾದದಲ್ಲಿ ನೋಟಿಸ್ ನೀಡಿ ವಿವರ ಪಡೆಯುವುದು ಒಂದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಬಿಜೆಪಿಯ ಬಿ. ಎಸ್. ಯಡಿಯೂರಪ್ಪ, ಡಿ. ವಿ. ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಹಾಗೂ ಜೆಡಿಎಸ್ ಪಕ್ಷದ ಹೆಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿಯೂ ನೋಟಿಸ್ ನೀಡಲಾಗಿತ್ತು. ಈ ವಿವರಗಳನ್ನು ನನ್ನ ಸಹದ್ಯೋಗಿಗಳಾಗಿರುವ ಎಂ. ಬಿ. ಪಾಟೀಲ್, ಪ್ರಿಯಾಂಕ ಖರ್ಗೆ ಮೊದಲಾದವರು ಮಾಧ್ಯಮಗಳಿಗೆ ನೀಡಿದ್ದಾರೆ' ಎಂದು ಹೇಳಿದ್ದರು.
'ಬಿಜೆಪಿಯ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ ''ವಕ್ಫ್ ಆಸ್ತಿ ಅಲ್ಲಾಹುಗೆ ಸೇರಿದ್ದು, ಆ ಆಸ್ತಿಯನ್ನು ಹಲವರು ಕಬಳಿಸಿದ್ದಾರೆ, ಅದನ್ನು ಒಂದೊಂದು ಇಂಚು ಬಿಡದೆ ವಾಪಸು ಪಡೆಯಬೇಕು, ಇಲ್ಲದೆ ಇದ್ದರೆ ಅಲ್ಲಾಹುವಿನ ದೃಷ್ಟಿಯಲ್ಲಿ ನೀವು ತಪ್ಪಿತಸ್ಥರಾಗುತ್ತಿರಿ'' ಎಂದು ಹೇಳಿರುವ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ, ಇದು ಬಿಜೆಪಿ ನಾಯಕರ ಅತ್ಮವಂಚನೆಯ ನಡವಳಿಕೆಯನ್ನು ಬಯಲು ಮಾಡಿದೆ' ಎಂದು ಟೀಕಿಸಿದ್ದರು.












Click it and Unblock the Notifications