ಹಿಜಾಬ್ ವಿವಾದ: ಹೈಕೋರ್ಟ್ ತೀರ್ಪಿನ ಕುರಿತು ವಕ್ಫ್ ಬೋರ್ಡ್, ಮುಸ್ಲಿಂ ಮುಖಂಡರು ಹೇಳಿದ್ದೇನು?
ಬೆಂಗಳೂರು, ಮಾರ್ಚ್ 15: ಹಿಜಾಬ್ (ಶಿರವಸ್ತ್ರ) ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದು ಹಿಜಾಬ್ ಧಾರಣೆ ಇಸ್ಲಾಂ ಧರ್ಮದ ಧಾರ್ಮಿಕ ಅತ್ಯಗತ್ಯ ಆಚರಣೆಯಲ್ಲ ಎಂದು ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಫಿ ಸಅದಿ ತಿಳಿಸಿದ್ದಾರೆ.
ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಯಾವ ಆಧಾರದಲ್ಲಿ ತೀರ್ಪು ಕೊಟ್ಟಿದೆ ಎಂಬುದು ಗೊತ್ತಿಲ್ಲ. ಆದರೆ ಸಂವಿಧಾನಬದ್ಧವಾಗಿ ಕಾನೂನು ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವ ಬಗ್ಗೆ ಕುರಾನ್‌ನಲ್ಲಿ ಸ್ಪಷ್ಟ ಉಲ್ಲೇಖವಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಉಲೆಮಾ ಒಕ್ಕೂಟದಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ಮುಖ್ಯವಾಗಿದ್ದು, ಷರಿಯತ್ ಬದ್ಧವಾಗಿ ಅವರಿಗೆ ಶಿಕ್ಷಣ ಸಿಗಬೇಕಿದೆ. ಹೀಗಾಗಿ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಫಿ ಸಅದಿ ಸ್ಪಷ್ಟಪಡಿಸಿದ್ದಾರೆ.

ಹಿಜಾಬ್ ಧರಿಸುವುದು ನಮ್ಮ ಕಟ್ಟಲೆಯಾಗಿದೆ. ಕುರಾನ್‌ನಲ್ಲಿ ಉಲ್ಲೇಖವಿದೆ. ಷರಿಯತ್ ಸಹ ಇದನ್ನು ಸ್ಪಷ್ಟಪಡಿಸಿದೆ. ಇದು ಹಿಂದೂ-ಮುಸ್ಲಿಂ ಸಮುದಾಯದ ಬಿಕ್ಕಟ್ಟು ಅಲ್ಲ, ಇದು ಸಂವಿಧಾನದ ಬಿಕ್ಕಟ್ಟು. ಇದನ್ನು ನಾವು ಹೇಗೆ ನಿರ್ವಹಿಸಬೇಕೋ ಹಾಗೆ ನಿರ್ವಹಿಸುತ್ತೇವೆ. ರಾಜಕೀಯ ಷಡ್ಯಂತ್ರಗಳಿಗೆ ಯಾರೊಬ್ಬರೂ ಬಲಿಯಾಗಬಾರದು. ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲು ನಮಗೆ ಅವಕಾಶವಿದೆ ಎಂದು ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.
ವಿಭೂತಿ ಅಲಂಕಾರಿಕ ಅಲ್ಲ, ಅದು ಭಕ್ತಿಯ ಸಂಕೇತ: ಸಿಎಂ ಇಬ್ರಾಹಿಂ
ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಅದನ್ನು ಸುಪ್ರಿಂಕೋರ್ಟ್‌ನಲ್ಲಿ ನಿರ್ಧರಿಸಬೇಕಾಗುತ್ತದೆ. ಯಾರೂ ಕೂಡ ಬೀದಿಗೆ ಇಳಿಯುವ ಅವಶ್ಯಕತೆ ಇಲ್ಲ. ನಾವೆಲ್ಲಾ ಒಗ್ಗಟ್ಟಾಗಿ ಸುಪ್ರೀಂ ಕೋರ್ಟ್‌ಗೆ ಹೋಗಲು ಯತ್ನ ಮಾಡುತ್ತೇವೆ. ಮುಂಬೈನ ವಕೀಲರ ಜತೆಗೂ ನಾನು ಮಾತನಾಡಿದ್ದೇನೆ. ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಹಿಂದೂಗಳು ಹಚ್ಚುವ ವಿಭೂತಿ ಕೇವಲ ಅಲಂಕಾರಿಕ ಅಲ್ಲ, ಅದು ಭಕ್ತಿಯ ಸಂಕೇತ. ನಾಳೆ ಅದನ್ನೂ ಬೇಡ ಅಂದ್ರೆ ಏನು ಮಾಡಬೇಕು. ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವುದಾದರೆ ಸುಪ್ರೀಂ ಕೋರ್ಟ್‌ಗೆ ಹೋಗಬೇಡಿ ಎಂದು ಹೇಳುತ್ತೇನೆ ಎಂದು ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ.
ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು: ಯು.ಟಿ. ಖಾದರ್
ಇನ್ನು ಹೈಕೋರ್ಟ್ ತೀರ್ಪಿನ ಬಗ್ಗೆ ವಿಧಾನಸಭೆ ಉಪನಾಯಕ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶವಿದೆ. ಕರಾವಳಿ ಭಾಗದಲ್ಲಿ ಯಾವುದೇ ಆತಂಕ ಇಲ್ಲ. ಕೋಮು ಸೌಹಾರ್ದತೆಗೆ ಸಮಸ್ಯೆ ಉಂಟಾಗುವ ಆತಂಕವಿಲ್ಲ. ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣ ಮುಖ್ಯ. ಶಾಲಾ ಮಟ್ಟದಲ್ಲಿಯೇ ಸಮಸ್ಯೆ ಬಗೆಹರಿಸಬಹುದಾಗಿತ್ತು. ಕೋರ್ಟ್‌ವರೆಗೆ ಬರಬೇಕಾದ ಅಗತ್ಯತೆ ಇರಲಿಲ್ಲ ಎಂದು ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.
ಅಸಾದುದ್ದೀನ್ ಓವೈಸಿ ಹೇಳಿದ್ದೇನು?
ಹಿಜಾಬ್ ಪ್ರಕರಣದ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ನಾನು ಒಪ್ಪುವುದಿಲ್ಲ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಹಿಜಾಬ್ ಸಂಬಂಧ ಹೈಕೋರ್ಟ್ ತೀರ್ಪು ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ನಾನು ಒಪ್ಪುವುದಿಲ್ಲ. ಕೋರ್ಟ್ ತೀರ್ಪನ್ನು ವಿರೋಧಿಸುವುದು ನನ್ನ ಹಕ್ಕು. ಹಿಜಾಬ್ ಪರ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಾತ್ರವಲ್ಲ ಇತರೆ ಧಾರ್ಮಿಕ ಗುಂಪುಗಳ ಸಂಘ-ಸಂಸ್ಥೆಗಳು ಸಹ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಿವೆ ಎಂದು ಭಾವಿಸಿದ್ದೇನೆ. ಏಕೆಂದರೆ ಅದು (ಕೋರ್ಟ್) ಧರ್ಮ, ಸಂಸ್ಕೃತಿ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಸ್ಥಗಿತಗೊಳಿಸಿದೆ. ಸಂವಿಧಾನದ ಪೀಠಿಕೆಯು ವ್ಯಕ್ತಿಗೆ ಆಲೋಚನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಹೊಂದುವ ಹಕ್ಕಿದೆ ಎಂದು ಹೇಳುತ್ತದೆ ಎಂದಿದ್ದಾರೆ.
ಹಿಜಾಬ್ ವಿವಾದ ಬಗ್ಗೆ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಿದ್ದು, ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಆಚರಣೆ ಅಲ್ಲ. ಸರ್ಕಾರದ ಸಮವಸ್ತ್ರ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ತರಗತಿಗಳಿಗೆ ಹಿಜಬ್ ಧರಿಸಿ ಹೋಗುವಂತಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.












Click it and Unblock the Notifications