ಟಿಕೆಟ್ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್ ಹೊಸ ಸೂತ್ರ;ಅಭ್ಯರ್ಥಿಗಳ ಆಯ್ಕೆಗೆ ಗೌಪ್ಯ ಮತದಾನದಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ?
ಬೆಂಗಳೂರು,ಮಾರ್ಚ್31: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಚುನಾವಣಾ ದಿನಾಂಕವೂ ನಿಗದಿಯಾಗಿದೆ. ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪಣ ತೊಟ್ಟಿರುವ ಬಿಜೆಪಿ ಹೈಕಮಾಂಡ್ ಹಲವು ತಂತ್ರಗಾರಿಕೆಯನ್ನ ನಡೆಸುತ್ತಿದೆ.
ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಯ ತಯಾರಿ ನಡೆಸುತ್ತಿದೆ. ಇತ್ತ ಮಿಷನ್ 150 ಟಾರ್ಗೆಟ್ ಹಾಕಿಕೊಂಡಿರುವ ಬಿಜೆಪಿ ಹೈಕಮಾಂಡ್ ಮತ್ತೆ ರಾಜ್ಯದ ಅಧಿಕಾರದ ಗದ್ದುಗೆ ಹಿಡಿಯಲು ಹೊಸ ಹೊಸ ಪ್ಲಾನ್ ಗಳನ್ನ ನಡೆಸುತ್ತಿದೆ. ಇತ್ತ ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಇನ್ನೂ ಪ್ರತಿ ಕ್ಷೇತ್ರದಲ್ಲೂ ಟಿಕೆಟ್ ಗಾಗಿ ಹೈಕಮಾಂಡ್ ನಾಯಕರ ಮಟ್ಟದಲ್ಲಿ ಲಾಭಿ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು ಆಯಾ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳೇ ಆಯ್ಕೆ ಮಾಡಬೇಕೆಂಬ ಹೊಸ ಫಾರ್ಮುಲಾಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಶುಕ್ರವಾರದಂದು (ಮಾರ್ಚ್ 31) ಮತದಾನಕ್ಕೆ ಏರ್ಪಾಟು ಮಾಡಲಾಗಿದ್ದು,ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನದ ಅವಧಿಯನ್ನು ನಿಗದಿಗೊಳಿಸಲಾಗಿದೆ. ಬ್ಯಾಲೆಟ್ ಬಾಕ್ಸ್ ಮಾದರಿಯಲ್ಲಿ ಮತದಾನ ನಡೆಯುತ್ತಿದೆ. ಬಿಜೆಪಿಯ ಮಾತೃ ಘಟಕದ ಪದಾಧಿಕಾರಿಗಳು, ಮಹಿಳಾ, ರೈತ, ಅಲ್ಪಸಂಖ್ಯಾಕ ತರಿಗಿಷ್ಟ ಜಾತಿ-ಪಂಗಡ, ಯುವ ಮೋರ್ಚಾ, ಹಿಂದುಳಿದ ಕಾರ್ಮಿಕ ಹೀಗೆ ವಿವಿಧ ಘಟಕಗಳ ಆಯಾ ವಿಧಾನಸಭಾ ಕೇತ್ರದ ಪದಾಧಿಕಾರಿಗಳು ತಮ್ಮ ಕ್ಷೇತ್ರದ ಅಭ್ಯರ್ಥಿ ಯಾರೆಂಬುದನ್ನು ಅವರ ಹೆಸರು ಬರೆದು ಮತ ಪೆಟ್ಟಿಗೆಗೆ ಹಾಕಬೇಕಿದೆ. ಪದಾಧಿಕಾರಿಗಳ ಮೇಲೂ ಪ್ರಭಾವ ಬೀರುವ ಇಲ್ಲವೆ ಹಾಲಿ ಶಾಸಕರು ತಮ್ಮದೇ ಶಕ್ತಿ ಪ್ರದರ್ಶಿಸುವುದಕ್ಕೆ ಅವಕಾಶ ನೀಡದಂತೆ ಬೇರೆ ಜಿಲ್ಲೆಯ ಪಕ್ಷದ ನಾಯಕರನ್ನು ಮೇಲುಸ್ತುವಾರಿಗೆ ನಿಯೋಜಿಸಲಾಗಿದೆ.
ಶುಕ್ರವಾರ ಸಂಜೆ ಮತದಾನ ಮುಗಿದ ನಂತರ ಅದೇ ಮತ ಎಣಿಕೆಯಾಗುತ್ತದೆ. ಜಿಲ್ಲಾ ಮಟ್ಟದ ಬಿಜೆಪಿ ಕೋರ್ ಕಮಿಟಿ ಸದಸ್ಯರು ಯಾವ ಯಾವ ಟಿಕೆಟ್ ಆಕಾಂಕ್ಷಿಗೆ ಎಷ್ಟು ಮತ ಬಂದವೆಂಬ ಪಟ್ಟಿಯನ್ನು ತಯಾರಿಸಿ ಅದನ್ನು ಬೆಂಗಳೂರಿಗೆ ತರಲಿದ್ದಾರೆ. ಶನಿವಾರ ಹಾಗೂ ಭಾನುವಾರದಂದು ಬೆಂಗಳೂರಿನಲ್ಲೇ ಮೊಕ್ಕಾಂ ಹೂಡುವ ಕೋರ್ ಕಮಿಟಿ ಸದಸ್ಯರು, ಇಲ್ಲಿ ರಾಜ್ಯಮಟ್ಟದ ವರಿಷ್ಠರನ್ನು ಭೇಟಿ ಮಾಡಿ, ಗೌಪ್ಯ ಮತದಾನದ ವರದಿಯನ್ನು ಹಾಗೂ ತಮ್ಮ ಜಿಲ್ಲೆಯ ಯಾವ ಟಿಕೆಟ್ ಆಕಾಂಕ್ಷಿಯ ಪ್ರಭಾವ ಜಿಲ್ಲೆಯ ಜನರ ಮೇಲಿದೆ ಇತ್ಯಾದಿ ವಿಚಾರಗಳನ್ನು ಚರ್ಚಿಸಲಿದ್ದಾರೆ.

ಇನ್ನೂ ಏಪ್ರಿಲ್ 3 ಅಥವಾ 4ರಂದು ರಾಜ್ಯಮಟ್ಟದ ಬಿಜೆಪಿ ಕೋರ್ ಸಮಿತಿಯ ಸದಸ್ಯರು ಸಭೆ ನಡೆಸಲಿದ್ದು, ಪ್ರತಿ ಜಿಲ್ಲಾ ಕೋರ್ ಕಮಿಟಿ ಸದಸ್ಯರು ಸೂಚಿಸಿರುವ ಅಭ್ಯರ್ಥಿಗಳ ಪಟ್ಟಿಯ ಕುರಿತಾಗಿ ಚರ್ಚಿಸಿ, ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಪಕ್ಷ ಹಾಗೂ ಕ್ಷೇತ್ರಕ್ಕಾಗುವ ಅನುಕೂಲಗಳನ್ನ ಕುರಿತು ಚರ್ಚೆ ನಡೆಸಲಿದ್ದಾರೆ. ಒಂದು ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಸಂಸದೀಯ ಮಂಡಳಿಗೆ ಶಿಫಾರಸು ಮಾಡಲಾಗುತ್ತದೆ. ಏ. 5 ರ ನಂತರದ ದಿನಗಳಲ್ಲಿ ಬಿಜೆಪಿ ಸಂಸದೀಯ ಸಮಿತಿಯು ಸಭೆ ಸೇರಿ, ಸಂಸದೀಯ ಮಂಡಳಿ ಸಭೆಯಲ್ಲಿ ಪ್ರತಿ ಕ್ಷೇತ್ರಕ್ಕೆ ಮೂವರಲ್ಲಿ ಒಬ್ಬರನ್ನು ಅಭ್ಯರ್ಥಿ ಯಾರೆಂಬುದನ್ನು ಅಂತಿಮಗೊಳಿಸಲಾಗುತ್ತದೆ.
ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ ನಗರದ ಧರ್ಮನಾಥ ಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ನಡೆದ ಸಭೆಯಲ್ಲಿ ಬೆಳಗಾವಿ ಗ್ರಾಮೀಣ, ಉತ್ತರ, ಅಥಣಿ, ರಾಮದುರ್ಗ, ಸವದತ್ತಿ ಹುಕ್ಕೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಿಂದ 10 ಜನ ಆಕಾಂಕ್ಷಿ ಅಭ್ಯರ್ಥಿಗಳು ಸ್ಪರ್ಧಿಸಲು ಮುಂದಾಗಿದ್ದಾರೆ.

ಹೀಗಾಗಿ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಮತ ಚೀಟಿಯಲ್ಲಿ ಜಿಲ್ಲೆ ಮತಕ್ಷೇತ್ರ ಹಾಗೂ ಸಂಭಾವಿತ ಅಭ್ಯರ್ಥಿಗಳ ಹೆಸರು ಸೂಚಿಸಲು ಅವಕಾಶ ನೀಡಲಾಗಿದೆ. ಅಳೆದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ಪ್ರತಿ ಕ್ಷೇತ್ರದಲ್ಲೂ ಸಮೀಕ್ಷೆಯನ್ನ ನಡೆಸಿರುವ ಹೈಕಮಾಂಡ್, ಕ್ಷೇತ್ರದಲ್ಲಿ ಅಭ್ಯರ್ಥಿಯ ಪರ ಇರುವ ಅಲೆಯನ್ನ ಜತಿಳಿದುಕೊಳ್ಳುವ ಲೆಕ್ಕಾಚಾರ ಒಂದು ಕಡೆಯಾದ್ರೆ, ಇತ್ತ ಟಿಕೆಟ್ ಕೈ ತಪ್ಪುವುದರಿಂದ ಅಸಮಾಧಾನಗೊಳ್ಳುವ ನಾಯಕರಿಗೆ ತಮ್ಮ ತಮ್ಮ ಕ್ಷೇತ್ರ ಜನರ ಒಲವೇ ಉತ್ತರವಾಗಲಿದೆ ಎಂದು ಹೈಕಮಾಂಡ್ ಈ ಹೊಸ ಪ್ಲಾನ್ ಗೆ ಮುಂದಾಗಿದೆ.












Click it and Unblock the Notifications