ಮತದಾರರ ಪಟ್ಟಿ ಪರಿಷ್ಕರಣೆ ರಾಕಿಬಾಯ್ ಸೇಡಿನ ಕತೆಯೂ ಅಲ್ಲ, ಕಾಂತಾರದ ದಂತಕತೆಯೂ ಅಲ್ಲ: ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 18: ಮತದಾರರ ಮಾಹಿತಿ ಕಳ್ಳತನದ ಹಗರಣವೀಗ ದೇಶದಾದ್ಯಂತ ತಲ್ಲಣ ಸೃಷ್ಟಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು ಈ ಹಗರಣದಲ್ಲಿ ಶಾಮೀಲಾಗಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.
ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಹಾಯ್ದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಆಪರೇಷನ್ ವೋಟರ್ ಹಗರಣವನ್ನು ಹಾಸ್ಯಾಸ್ಪದ ಎಂದು ತಳ್ಳಿಹಾಕಿರುವ ಮುಖ್ಯಮಂತ್ರಿಗಳು, ಈ ಹಗರಣದ ರೂವಾರಿಗಳನ್ನು ರಕ್ಷಿಸಲು, ಸಂಸ್ಥೆಯ ಒಬ್ಬ ಏಜೆಂಟನ ವಿರುದ್ಧ ಪೊಲೀಸರಿಂದ ಎಫ್ಐಆರ್ ಹಾಕಿಸಿ ತಮ್ಮ ಸರ್ಕಾರದ ಕೆಲಸ ಎಷ್ಟು ಹಾಸ್ಯಾಸ್ಪದ ಎನ್ನುವುದನ್ನು ಸಾಬೀತುಪಡಿಸಿದ್ದಾರೆ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

'ಮತದಾರರ ಪಟ್ಟಿ ಪರಿಷ್ಕರಣೆಯ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿರುದ್ಧವೇ ನಾವು ದೂರು ನೀಡಿದ್ದೆವು. ಮುಖ್ಯಮಂತ್ರಿಗಳು 20,000 ರೂಪಾಯಿ ಸಂಬಳದ ಬಡಪಾಯಿ ಏಜೆಂಟನನ್ನು ಬಲಿಪಶು ಮಾಡಿ ತಾವು ಪಾರಾಗುವ ಸಂಚು ನಡೆಸಿದ್ದಾರೆ' ಎಂದು ಆರೋಪಿಸಿದ್ದಾರೆ.
'ಮುಖ್ಯಮಂತ್ರಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಆಪರೇಷನ್ ವೋಟರ್ ಹಗರಣವನ್ನು ಜಾತಿಗಣತಿಗೆ ಹೋಲಿಸಿದ್ದಾರೆ. ಒಂದು ಸಂಸ್ಥೆಯ ಹಿನ್ನೆಲೆಯನ್ನೂ ಪರಿಶೀಲಿಸದೆ ಮತದಾರರ ಪರಿಷ್ಕರಣೆಗೆ ನೀಡಿರುವ ಅನುಮತಿಗೂ, ಸುಪ್ರೀಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಡೆಸಿರುವ ಜಾತಿಗಣತಿಗೂ ಏನು ಸ್ವಾಮಿ ಸಂಬಂಧ' ಎಂದು ಪ್ರಶ್ನಿಸಿದ್ದಾರೆ.

'ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿರುವ ಚಿಲುಮೆ ಸಂಸ್ಥೆಯ ಹಿನ್ನೆಲೆ ಏನು? ಅದರ ಮಾಲೀಕರು ಯಾರು? ಹಣಕಾಸು ಸಾಮರ್ಥ್ಯ ಏನು? ಉದ್ಯೋಗಿಗಳ ಸಂಖ್ಯೆ ಎಷ್ಟು? ಅದರ ಹಣಕಾಸಿನ ಮೂಲ ಯಾವುದು? ಈ ಬಗ್ಗೆ ತನಿಖೆಯಾಗಲಿ' ಎಂದು ಒತ್ತಾಯಿಸಿದ್ದಾರೆ.
'ದೂರು ಬಂದ ಕಾರಣಕ್ಕೆ ಚಿಲುಮೆಗೆ ನೀಡಿರುವ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿರುವುದನ್ನು ಸ್ವಾಗತಿಸುತ್ತೇನೆ. ಮಾಡಿರುವ ಅಪರಾಧಕ್ಕೆ ಅನುಮತಿ ರದ್ದತಿ ಶಿಕ್ಷೆ ಅಲ್ಲವಲ್ಲಾ? ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ಆಗಿರುವ ಅಪರಾಧವನ್ನು ಇಲಾಖೆಯೇ ಒಪ್ಪಿಕೊಂಡಂತಾಗಿಲ್ಲವೇ' ಎಂದು ಕೇಳಿದ್ದಾರೆ.

'ಸಮಾಜ ಸೇವೆಗೆ ಬೇಕಾದಷ್ಟು ಅವಕಾಶ ಇರುವಾಗ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಉಚಿತವಾಗಿ ಮಾಡುತ್ತೇವೆ ಎಂದು ಸಂಸ್ಥೆ ಅರ್ಜಿ ನೀಡಿದಾಗಲೇ ಅದರ ಹಿಂದಿನ ದುರುದ್ದೇಶದ ಅರಿವು ಬಿಬಿಎಂಪಿಗೆ ಆಗಬೇಕಿತ್ತು. ಆಗಿಲ್ಲ ಎಂದರೆ ಬಿಬಿಎಂಪಿ ಹಗರಣದದಲ್ಲಿ ಭಾಗಿಯಾಗಿದೆ ಎಂದು ಅರ್ಥ ಅಲ್ಲವೇ' ಎಂದು ಟ್ವೀಟ್ ಮಾಡಿದ್ದಾರೆ.
'ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಚಿಲುಮೆ ಸಂಸ್ಥೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿದ್ದೀರಿ? ಆ ಸಂಸ್ಥೆ ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಏನಾಯಿತು? ಆ ಸಂಸ್ಥೆ ಬಿಬಿಎಂಪಿಗೆ ಸಲ್ಲಿಸಿದೆಯಾ? ಇಲ್ಲವೇ ಯಾವುದಾದರೂ ರಾಜಕೀಯ ಪಕ್ಷಕ್ಕೆ ಮಾರಿದೆಯಾ' ಎಂದು ಕೇಳಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು "ಕೆಜಿಎಫ್" ಚಿತ್ರದ ರಾಕಿಭಾಯ್‌ನ ಸೇಡಿನ ಕತೆಯೂ ಅಲ್ಲ, "ಕಾಂತಾರ" ಚಿತ್ರದ ಗುಳಿಗ-ಪಂಜುರ್ಲಿಯ ದಂತಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು ಎಂದು ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ
ಮತದಾರರ ದತ್ತಾಂಶ ಕಳ್ಳತನ ಕುರಿತು ಗುರುವಾರ ಮಾಧ್ಯಮ ಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಆಪರೇಷನ್ ಕಮಲದ ಮುಂದುವರಿದ ಭಾಗವಾಗಿ 'ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ' ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ ಅಪರಾಧವಾಗಿದೆ. ಈ ಬಗ್ಗೆ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿಯೇ ನ್ಯಾಯಾಂಗ ತನಿಖೆ ಮಾಡಬೇಕು. ಈ ಹಗರಣದಲ್ಲಿ ಭಾಗಿಯಾಗಿರುವ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು. ಅಲ್ಲದೇ, ಅವರನ್ನು ಬಂಧಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.












Click it and Unblock the Notifications