Chandrashekhar Swamiji: ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ನಿಧನ; ರಾಜಕೀಯ ಗಣ್ಯರಿಂದ ಸಂತಾಪ!
ಬೆಂಗಳೂರು, ಆಗಸ್ಟ್ 16: ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿದ್ದ ಡಾ.ಶರಣಬಸವಪ್ಪ ಅಪ್ಪಾಜಿಯವರು ಆಗಸ್ಟ್ 14 ರಂದು ಇಹಲೋಕ ತ್ಯಜಿಸಿದ್ದರು. ಇದೀಗ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ಕೂಡ ಇದೀಗ ಇಹಲೋಕ ತ್ಯಜಿಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಇದೀಗ ನಿಧನರಾಗಿದ್ದಾರೆ.
ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚಂದ್ರಶೇಖರ್ ಸ್ವಾಮೀಜಿಯವರು ಇಂದು ಇಹಲೋಕಾ ತ್ಯಜಿಸಿದ್ದಾರೆ. ವಕ್ಫ್ ಬೋರ್ಡ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನಿರಾಕರಿಸುವ ಕಾನೂನು ತರಬೇಕು ಎಂದು ಹೇಳಿದ್ದರು.

ಕಳೆದ ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಬ್ಬರೂ ಇರುವ ವೇದಿಕೆಯಲ್ಲಿ, ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ರೆ ಡಿ ಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಸಿದ್ದರಾಮಯ್ಯ ಅವರು ಅನುಭವಿಗಳು ಸಿಎಂ ಕುರ್ಚಿ ಬಿಟ್ಟುಕೊಡಬೇಕು ಎಂಬ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದರು. ಇದೀಗ ಅನಾರೋಗ್ಯದಿಂದ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ನಿಧನ ಹೊಂದಿದ್ದಾರೆ.
ಚಂದ್ರಶೇಖರನಾಥ ಮಹಾಸ್ವಾಮೀಜಿರವರು ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸಂತಾಪ ಸೂಚಿಸಿದ್ದಾರೆ. ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿರವರು ವಿಧಿವಶರಾದ ವಿಷಯ ತಿಳಿದು ಅತ್ಯಂತ ನೋವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತಮ್ಮ ಸಂತಾಪ ಸೂಚನಾ ಸಂದೇಶದಲ್ಲಿ ತಿಳಿಸಿದ್ದಾರೆ.
ಮಹಾಸ್ವಾಮೀಜಿರವರು ಶ್ರೀ ಮಠದ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಅಗಲಿಕೆಯ ಆಘಾತದ ನೋವಿನಲ್ಲಿರುವ ಭಕ್ತಾದಿಗಳು, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಬಿ ವೈ ವಿಜಯೇಂದ್ರ ಅವರು ಪ್ರಾರ್ಥಿಸಿದ್ದಾರೆ.
ಇನ್ನೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿರವರು ಭೈರವೈಕ್ಯರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಆಧ್ಯಾತ್ಮ ಲೋಕದಲ್ಲಿ ಮಹೋನ್ನತ ಸಾಧನೆ ಮಾಡಿದ್ದ ಪರಮಪೂಜ್ಯರು ಸಮಾಜ ಸೇವೆ ಹಾಗೂ ಧರ್ಮ ಕೈಂಕರ್ಯದಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು. ಪರಮಪೂಜ್ಯರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಕ್ತರಿಗೆ ಶ್ರೀ ಕಾಲ ಭೈರವೇಶ್ವರ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದು, ಕೆಂಗೇರಿಯ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಕುಮಾರ ಚಂದ್ರಶೇಖರ ಸ್ವಾಮೀಜಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಯಿತು. ಸ್ವಾಮೀಜಿ ಧಾರ್ಮಿಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಭಕ್ತರಿಗೆ ಕರುಣಿಸಲಿ ಹಾಗೂ ಮೃತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರ ನಿಧನಕ್ಕೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಪೂಜ್ಯ ಸ್ವಾಮೀಜಿಗಳ ನಿಧನದ ಸುದ್ದಿ ಕೇಳಿ ಮನಸ್ಸಿಗೆ ನೋವಾಗಿದೆ. ಸಮುದಾಯದ ಬೆಳವಣಿಗೆಗೆ ಸ್ವಾಮೀಜಿಯವರು ನೀಡಿದ ಕೊಡುಗೆ ಅಪಾರ. ಶಿಕ್ಷಣದಿಂದ ಮಾತ್ರ ಸಮುದಾಯದ ಪ್ರಗತಿ ಸಾಧ್ಯ ಎಂದು ನಂಬಿದ್ದರು. ತಾವೇ ಕೃಷಿ ಮಾಡಿ ದಾಸೋಹ ಮಾಡುತ್ತಿದ್ದರು. ಅವರ ಅಗಲಿಕೆ ಇಡೀ ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ. ಸ್ವಾಮೀಜಿಯವರ ದಿವ್ಯ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಭಕ್ತರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications