ಕಿರಿಕಿರಿ ಇಲ್ಲ, ಪ್ರಶ್ನೆಗಳಿಲ್ಲ: ರಜೆ ಕೇಳಿದ ತಕ್ಷಣ ಓಕೆ ಎನ್ನುವ ಬಾಸ್‌ನ ಬೋರಿಂಗ್ ವಾಟ್ಸಾಪ್ ಚಾಟ್ ವೈರಲ್!
ಕಾರ್ಪೊರೇಟ್ ಜಗತ್ತಿನಲ್ಲಿ ಟಾಕ್ಸಿಕ್ ಬಾಸ್‌ಗಳ ಬಗ್ಗೆಯೇ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ರಜೆ ಕೇಳಿದರೆ ಸಾಕು, ನಾನಾ ಪ್ರಶ್ನೆಗಳನ್ನ ಕೇಳಿ, ನೌಕರರನ್ನ ಮಾನಸಿಕವಾಗಿ ಕುಗ್ಗಿಸುವ ಮ್ಯಾನೇಜರ್‌ಗಳ ಕಥೆಗಳನ್ನ ನಾವು ಹೆಚ್ಚಾಗಿ ಕೇಳುತ್ತಿರುತ್ತೇವೆ. ಆದರೆ, ಇದಕ್ಕೆ ವಿರುದ್ಧವೆನ್ನುವ ಹಾಗೆ, ರಜೆ ಮತ್ತು ವರ್ಕ್ ಫ್ರಮ್ ಹೋಮ್ ಕೇಳಿದಾಗ ಒಪ್ಪಿಕೊಂಡು ರಜೆ ನೀಡುವ ಉತ್ತಮ ಮ್ಯಾನೇಜರ್ ಒಬ್ಬರ ವಾಟ್ಸಾಪ್ ಚಾಟ್‌ಗಳು ಇದೀಗ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಭಾರಿ ವೈರಲ್ ಆಗಿವೆ.
r/IndianWorkplace ಎಂಬ ರೆಡ್ಡಿಟ್ ಬಳಸುವ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ಜೊತೆಗಿನ ವಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನ ಹಂಚಿಕೊಂಡಿದ್ದಾರೆ. ಇದಕ್ಕೆ "ಮ್ಯಾನೇಜರ್ ಕಡೆಯಿಂದ ಒಂದು ಪೋಸ್ಟ್" ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದರಲ್ಲಿ ಯಾವುದೇ ನಾಟಕೀಯ ಘಟನೆಗಳಿಲ್ಲ, ಬದಲಾಗಿ ಇದು ತುಂಬಾ ಬೋರಿಂಗ್ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಏಕೆಂದರೆ, ಇಲ್ಲಿ ಉದ್ಯೋಗಿ ರಜೆ ಅಥವಾ ಮನೆಯಿಂದ ಕೆಲಸ ಮಾಡಲು ಕೇಳಿದಾಗ ಮ್ಯಾನೇಜರ್ ಯಾವುದೇ ಕಿರಿಕಿರಿ ಮಾಡದೆ ಬಹಳ ಸಹಜವಾಗಿ ಪ್ರತಿಕ್ರಿಯಿಸಿದ್ದಾರೆ.
ಉದಾಹರಣೆಗೆ, ಉದ್ಯೋಗಿಯೊಬ್ಬರು "ನಿನ್ನೆ ಗಂಟಲು ನೋವು ಕಡಿಮೆಯಾಗಿತ್ತು, ಆದರೆ ರಾತ್ರಿ ಮತ್ತೆ ಕೆಮ್ಮು ಹೆಚ್ಚಾಗಿದೆ. ಹಾಗಾಗಿ ಮನೆಯಿಂದಲೇ ಕೆಲಸ ಮಾಡುತ್ತೇನೆ, ತಡವಾಗಿ ತಿಳಿಸುತ್ತಿರುವುದಕ್ಕೆ ಕ್ಷಮಿಸಿ" ಎಂದು ಸಂದೇಶ ಕಳುಹಿಸಿದ್ದಾರೆ. ಅದಕ್ಕೆ ಆ ಮ್ಯಾನೇಜರ್, "ಓಕೆ, ಅರ್ಥವಾಗುತ್ತದೆ. ಆರೋಗ್ಯ ನೋಡಿಕೊಳ್ಳಿ" ಎಂದು ಅತ್ಯಂತ ಸರಳವಾಗಿ ಉತ್ತರಿಸಿದ್ದಾರೆ.
ಮತ್ತೊಂದು ಚಾಟ್‌ನಲ್ಲಿ, ಕಚೇರಿಯಿಂದ ಹಿಂದಿರುಗಿದ ನಂತರ ಜ್ವರ ಬಂದಿದೆ, ನಾಳೆ ಆರೋಗ್ಯ ಹೇಗಿರುತ್ತದೆ ಎಂಬುದನ್ನು ನೋಡಿಕೊಂಡು ಕೆಲಸದ ಬಗ್ಗೆ ತಿಳಿಸುತ್ತೇನೆ ಎಂದು ಉದ್ಯೋಗಿ ಹೇಳಿದಾಗ, ಮ್ಯಾನೇಜರ್ ಕೇವಲ "ಟೇಕ್ ಕೇರ್" ಎಂದಷ್ಟೇ ಹೇಳಿದ್ದಾರೆ.
ಇನ್ನೊಬ್ಬ ಉದ್ಯೋಗಿ, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರಿಂದ ಸುಸ್ತಾಗಿದೆ, ಕಚೇರಿಗೆ ಬರಲು ಕಷ್ಟವಾಗುತ್ತದೆ, ಹೀಗಾಗಿ ವರ್ಕ್ ಫ್ರಮ್ ಹೋಮ್ ಮಾಡುತ್ತೇನೆ ಎಂದಾಗ "ಓಕೆ, ಯಾವುದೇ ತೊಂದರೆ ಇಲ್ಲ" ಎಂದು ಬಾಸ್ ಒಪ್ಪಿಗೆ ನೀಡಿದ್ದಾರೆ.
ಯಾವಾಗಲೂ ಟಾಕ್ಸಿಕ್ ಬಾಸ್‌ಗಳ ಬಗ್ಗೆಯೇ ಕೇಳಿ ಬೇಸತ್ತಿದ್ದ ಜನರಿಗೆ, ಒಂದು ಸಣ್ಣ ಬದಲಾವಣೆ ಇರಲಿ ಎನ್ನುವ ಕಾರಣಕ್ಕೆ ಮಾತ್ರವೇ ಈ ಬಾಸ್ ವಾಟ್ಸಾಪ್ ಚಾಟ್ ಅನ್ನು ಹಂಚಿಕೊಂಡಿರುವುದಾಗಿ ಪೋಸ್ಟ್ ಮಾಡಿದ ಉದ್ಯೋಗಿ ಸ್ಪಷ್ಟಪಡಿಸಿದ್ದಾರೆ.
ಉತ್ತಮ ಮ್ಯಾನೇಜ್ಮೆಂಟ್ ಹೇಗಿರಬೇಕು? ನೆಟ್ಟಿಗರ ಚರ್ಚೆ
ಈ ಪೋಸ್ಟ್ ನೋಡಿದ ನೆಟ್ಟಿಗರು ಒಳ್ಳೆ ಆಫೀಸ್ ವಾತಾವರಣ ಹೇಗಿರಬೇಕು ಎಂಬುದರ ಕುರಿತು ಚರ್ಚೆ ಆರಂಭಿಸಿದ್ದಾರೆ. "ಒಬ್ಬ ವ್ಯಕ್ತಿ ರಜೆ ತೆಗೆದುಕೊಂಡಾಗ ಇಡೀ ತಂಡದ ಕೆಲಸವೇ ನಿಂತುಹೋಗುತ್ತದೆ ಎಂದರೆ, ಅದು ಮ್ಯಾನೇಜರ್ ಅವರ ತಪ್ಪು. ಯಾವುದೇ ವ್ಯಕ್ತಿ ಇಲ್ಲದಿದ್ದರೂ ಕೆಲಸ ಸುಗಮವಾಗಿ ಸಾಗುವಂತಹ ವ್ಯವಸ್ಥೆಯನ್ನ ಮ್ಯಾನೇಜರ್ ರೂಪಿಸಬೇಕು" ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕೆನಡಾದ ತಮ್ಮ ಹಳೆಯ ಬಾಸ್ ಒಬ್ಬರನ್ನ ನೆನಪಿಸಿಕೊಂಡಿರುವ ಇನ್ನೊಬ್ಬ ಬಳಕೆದಾರರು, "ಅವರು ಕೆಲಸದ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದರು, ಆದರೆ ಉದ್ಯೋಗಿಗಳ ವೈಯಕ್ತಿಕ ಸಮಯಕ್ಕೆ ಬೆಲೆ ಕೊಡುತ್ತಿದ್ದರು. 5 ವರ್ಷಗಳಲ್ಲಿ ಕೇವಲ ಒಮ್ಮೆ ಮಾತ್ರ ಕಚೇರಿ ಸಮಯದ ನಂತರ ಮೆಸೇಜ್ ಮಾಡಿ ಸಹಾಯ ಕೇಳಿದ್ದರು, ಅದಕ್ಕೂ ಅವರು ಕ್ಷಮೆ ಕೇಳಿದ್ದರು" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications
