ಗ್ಯಾರಂಟಿಗಳಿಂದ ಹಳ್ಳಿ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ: ಕುಮಾರಣ್ಣನ ವಿವಾದಿತ ಹೇಳಿಕೆಗೆ ಭಾರೀ ಆಕ್ರೋಶ
ಬೆಂಗಳೂರು, ಏಪ್ರಿಲ್ 14: ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಹೆಚ್ ಡಿ ಕುಮಾರಸ್ವಾಮಿ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ. ಇನ್ನೂ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಕರ್ನಾಟಕದ ಗೌರವಾನ್ವಿತ ಮಹಿಳೆಯರ ಕ್ಷಮೆಯಾಚಿಸಿ ಎಂದು ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನ ಜಾರಿಗೊಳಿಸಿದ್ದು,ಹಂತ ಹಂತವಾಗಿ ಐದು ಗ್ಯಾರಂಟಿಗಳನ್ನ ಕಾಂಗ್ರೆಸ್ ಜಾರಿಗೊಳಿಸಿದೆ. ಇದೀಗ ತುಮಕೂರಿನ ತುರುವೇಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ವಿವಾದಿತ ಹೇಳಿಕೆಯನ್ನ ನೀಡಿದ್ದಾರೆ. ಇತ್ತ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ನೀಡುವ ಭರದಲ್ಲಿ ಹಳ್ಳಿಯ ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.

ಮಹಿಳೆಯರ ಪರವಾಗಿರುವ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ವಿರುದ್ಧ ನಿಮ್ಮ ಹೇಳಿಕೆ ಮತ್ತು ಮಹಿಳೆಯರ ಬಗೆಗಿನ ನಿಮ್ಮ ಅವಹೇಳನಕಾರಿ ವರ್ತನೆ ಅತ್ಯಂತ ಖಂಡನೀಯ. ಕೂಡಲೇ ಕರ್ನಾಟಕದ ಗೌರವಾನ್ವಿತ ಮಹಿಳೆಯರ ಕ್ಷಮೆಯಾಚಿಸಿ ಎಂದು ಮಹಿಳಾ ಕಾಂಗ್ರೆಸ್ ಆಗ್ರಹಿಸಿದರು.
ಕುಮಾರಸ್ವಾಮಿ ಹೇಳಿದ್ದೇನು?
ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ. ಇವತ್ತಿನ ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರಿಂದ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಈ ರೀತಿ ಉಚಿತ ಯೋಜನೆ ಕೊಟ್ಟರೆ ಹಳ್ಳಿಯ ತಾಯಂದಿರ ಬದುಕು ಏನಾಗಬೇಕು? ಈ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕಿದೆ. ನಿಮ್ಮ ಕುಟುಂಬದ ಬದುಕೇನಾಗಬೇಕು ಯೋಚನೆ ಮಾಡಬೇಕಿದೆ. ಅವರಿಗೆ ಐದು ಉಚಿತ ಗ್ಯಾರಂಟಿ ಬಿಟ್ಟು ಬೇರೆ ಏನೂ ಇಲ್ಲ. ಸ್ವಲ್ಪ ಗಮನ ಇಟ್ಟು ಎರಡು ಮಾತುಗಳನ್ನು ಕೇಳಿ ಎಂದು ಹೇಳಿದ್ದಾರೆ.
ಈಗಾಗಲೇ ₹300 ಕೋಟಿಯಷ್ಟು ಹಣವನ್ನು ಜಾಹೀರಾತಿಗಾಗಿ ಖರ್ಚು ಮಾಡಿದ್ದಾರೆ. ಅದೆಲ್ಲವೂ ನಿಮ್ಮ ದುಡ್ಡು. ಬೆಳಗ್ಗೆ ಎದ್ದು ಯಾವ ಪತ್ರಿಕೆ ನೋಡಿದರೂ ಗ್ಯಾರಂಟಿಯದ್ದೇ ಜಾಹೀರಾತು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಫೋಟೋಗಳನ್ನು ಇರುತ್ತವೆ. ಈ ಹಣ ಕಾಂಗ್ರೆಸ್ ಕಚೇರಿಯಿಂದಲೋ ಅಥವಾ ಅವರ ಜೇಬಿನಿಂದ ಹಾಕಿರುವ ದುಡ್ಡಲ್ಲ. ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದರೂ ಕೇಂದ್ರ ಸರ್ಕಾರ ದುಡ್ಡು ಕೊಟ್ಟಿಲ್ಲ ಎಂದು ದೂರುತ್ತಿದ್ದಾರೆ ಎಂದಿದ್ದಾರೆ.












Click it and Unblock the Notifications