Vijayapura Airport: ವಿಜಯಪುರ ಏರ್‍ಪೋರ್ಟ್ ಉದ್ಘಾಟನೆಗೆ ಮುಹೂರ್ತ ಫಿಕ್ಸ್: ಎಂಬಿ ಪಾಟೀಲ್
ಬೆಂಗಳೂರು: ಒಂದಷ್ಟು ವಿಳಂಬ ಬಳಿಕ ಸೇವೆಗೆ ಸಜ್ಜಾಗಿರುವ ವಿಜಯಪುರ ವಿಮಾನ ನಿಲ್ದಾಣ (Vijayapura Airport) ಕಾರ್ಯಾಚರಣೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಸ್ತುತ ಏರ್ ಪೋರ್ಟ್‌ಗೆ ಸಂಬಂಧಿಸಿದಂತೆ ಎದುರಾಗಿದ್ದ ಪರಿಸರ ಸಂಬಂಧಿ ಪ್ರಕರಣದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿಸಿದೆ. ಈವರೆಗೆ ಉಂಟಾಗಿದ್ದ ಅಡೆತಡೆ ನಿವಾರಣೆ ಆಗಿದ್ದು, ನೂತನ ಏರ್‍ಪೋರ್ಟ್‌ಗೆ ಗ್ರಿನ್ ಸಿಗ್ನಲ್ ನೀಡುವ ಸಮಯ ಬಂದಿದೆ.
ಬಾಕಿ ಇರುವ ವಿಮಾನ ಹಾರಾಟ ಪರೀಕ್ಷೆ ಶೀಘ್ರವೇ ನಡೆಯಲಿದೆ. ನಂತರದ ಎಲ್ಲ ಪ್ರಕ್ರಿಯೆಗಳು ನಿರೀಕ್ಷೆಯಂತೆ ನಡೆದರೆ ಮುಂದಿನ ಮೂರೇ ತಿಂಗಳಲ್ಲಿ ಬಹುನಿರೀಕ್ಷೆಯ ವಿಜಯಪುರ ವಿಮಾನ ನಿಲ್ದಾಣದ ಲೋಕಾರ್ಪಣೆ ನೆರವೇರಿಸಲಾಗುವುದು. ಕಿತ್ತೂರು ಕರ್ನಾಟಕ ಮತ್ತು ನೆರೆ ಹೊರೆ ಪ್ರದೇಶಗಳಿಗೂ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರೂ ಆಗಿರುವ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ ಹೇಳಿದರು. ಈ ಮೂಲಕ ತಮ್ಮ ತವರು ಜಿಲ್ಲೆಗೆ ಗುಡ್‌ನ್ಯೂಸ್ ನೀಡಿದ್ದಾರೆ.

ವಿಜಯಪುರ ಏರ್‍ಪೋರ್ಟ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ತೀರ್ಪು ನೀಡಿದ ಬಳಿಕ ಸಚಿವರು ಪ್ರತಿಕ್ರಿಸಿದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜಯಮಾಲ್ಯ ಬಾಗ್ಚಿ ಮತ್ತು ನ್ಯಾ.ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು ನೀಡಿರುವ ಅಂತಿಮ ತೀರ್ಪು ಸ್ವಾಗತಾರ್ಹ ಎಂದರು.
ಏರ್ ಪೋರ್ಟ್ ಪರ ವಿವಿಧ ವಕೀಲರ ವಾದ
ಈ ವಿಚಾರದಲ್ಲಿ ವಿಜಯಪುರ ವಿಮಾನ ನಿಲ್ದಾಣ ಯೋಜನೆಯಲ್ಲಿ ಇರುವ ಸಾರ್ವಜನಿಕ ಹಿತಾಸಕ್ತಿಯನ್ನು ತಿಳಿದುಕೊಂಡು, ರಾಜ್ಯದ ಪರವಾಗಿ ವಿಚಾರ ಮಂಡಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ, ಹೆಸರಾಂತ ನ್ಯಾಯವಾದಿ ಕಪಿಲ್ ಸಿಬಲ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ರಾಜ್ಯದ ಪರ ವಕೀಲ ನಿಶಾಂತ್ ಪಾಟೀಲ್ ಅವರಿಗೆ ಸಚಿವರು ವಿಶೇಷ ಧನ್ಯವಾದ ತಿಳಿಸಿದರು.
ಖಾಸಗಿ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗಲೇ ಪರಿಸರ ಸಂಬಂಧಿ ಅನುಮೋದನೆಗಳನ್ನು ತೆಗೆದುಕೊಳ್ಳಬೇಕಾದ್ದು ಕಡ್ಡಾಯವಾಗಿದೆ. ಇದನ್ನು ಪಾಲಿಸದ ದೇಶದ ಎಲ್ಲಾ ಯೋಜನೆಗಳನ್ನೂ ರದ್ದುಪಡಿಸುವಂತೆ ಸುಪ್ರೀಂಕೋರ್ಟ್ 2025ರ ಮೇ 16ರಂದು ಆದೇಶಿಸಿತ್ತು. ಇದರಿಂದಾಗಿ ವಿಜಯಪುರ ಏರ್‍ಪೋರ್ಟ್ ಯೋಜನೆಗೂ ಸಂಕಷ್ಟ ಎದುರಾಗಿತ್ತು. ಆಗ ನಾನು ಮೆಹತಾ, ಸಿಬಲ್ ಮತ್ತು ಪಾಟೀಲ್ ಅವರನ್ನು ಸಂಪರ್ಕಿಸಿ, ಈ ತೊಡಕನ್ನು ನಿವಾರಿಸಲು ಕೇಳಿಕೊಂಡಿದ್ದೆ. ಇಂದಿನ ಅಂತಿಮ ತೀರ್ಪಿನಿಂದ ನಿರಾಳವಾಗಿದ್ದೇನೆ ಎಂದು ಅವರು ಸ್ಮರಿಸಿದರು.
ವಿಮಾನಯಾನ ಅಧಿಕಾರಿಗಳು ವಿಜಯಪುರಕ್ಕೆ ಭೇಟಿ
ಪರಿಸರ ಸಂಬಂಧಿ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಈಗ ಹೇಳಲಾಗಿದೆ. ಹೀಗಾಗಿ ವಿಜಯಪುರ ಏರ್‍ಪೋರ್ಟ್ ಸಂಬಂಧದ ಅಗತ್ಯ ಅನುಮತಿ ಸಿಗಲು ದಾರಿ ಸುಗಮವಾಗಿದೆ. ಇದಾದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಜಯಪುರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಆಗಿರುವ ಕೆಲಸಗಳನ್ನು ಪರಿಶೀಲಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸುಪ್ರೀಂಕೋರ್ಟ್ ಈ ವರ್ಷದ ಏಪ್ರಿಲ್ 1ರಂದು ವಿಚಾರಣೆ ನಡೆಸಿದಾಗ, ಪರಿಸರ ಸಂಬಂಧಿ ಅನುಮತಿಗೆ ಕಾಯುತ್ತಿರುವ ಯೋಜನೆಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿ, ವಿಸ್ತೃತ ಅಧ್ಯಯನಕ್ಕೆ ಸೂಚಿಸಿ, ಅಂತಿಮ ತೀರ್ಪನ್ನು ಕಾದಿರಿಸಿತ್ತು. ಇವತ್ತು ನೀಡಿರುವ ತೀರ್ಪಿನಲ್ಲಿ ಶಾಶ್ವತ ವಿನಾಯಿತಿ ನೀಡಿದೆ. ಏತನ್ಮಧ್ಯೆ ನಾವು ವಿಜಯಪುರ ಏರ್ಪೋರ್ಟ್ ಸಂಬಂಧ ಪರಿಸರ ಸಂಬಂಧಿ ಅನುಮತಿ ಕೋರಿ ಅರ್ಜಿ ಹಾಕಿದ್ದೇವೆ ಎಂದು ವಿವರಿಸಿದ್ದರು.
ಪರಿಸರ ಸಂಬಂಧಿ ಒಪ್ಪಿಗೆ ಸಿಕ್ಕಿದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಜಯಪುರ ವಿಮಾನ ನಿಲ್ದಾಣದಲ್ಲಿ ಆಗಿರುವ ಕೆಲಸಗಳನ್ನು ಪರಿಶೀಲಿಸಲಿದ್ದಾರೆ. ಅದೊಂದು ಪ್ರಕ್ರಿಯೆ ಮುಗಿದರೆ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ದಾರಿ ಸುಗಮವಾಗಲಿದೆ ಎಂದು ಸಚಿವರು ತಿಳಿಸಿದರು.
ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ 614 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ವಿನಿಯೋಗಿಸಲಾಗಿದೆ. ಇದು ಕಾರ್ಯಾರಂಭ ಮಾಡಿದರೆ ಸುತ್ತಮುತ್ತಲಿನ ಅನೇಕ ಜಿಲ್ಲೆಗಳು ಸೇರಿದಂತೆ ರಾಜ್ಯ ಹಾಗೂ ಅಂತಾರಾಜ್ಯಗಳಿಗೆ (ದೇಶಿಯ) ವಿಮಾನಯಾನ ಸಾರಿಗೆ ಸಂಪರ್ಕ ಸುಧಾರಿಸುತ್ತದೆ ಎಂದು ಅವರು ಹೇಳಿದರು.


Click it and Unblock the Notifications
