Slipper Attack on Darshan : ದರ್ಶನ್ ಮೇಲೆ ಚಪ್ಪಲಿ ಎಸೆತ ಪ್ರಕರಣ: ಮೂವರ ಬಂಧನ
ವಿಜಯನಗರ, ಡಿಸೆಂಬರ್ 26: ಡಿಸೆಂಬರ್ 18ರಂದು ಕ್ರಾಂತಿ ಚಲನಚಿತ್ರ ಪ್ರಚಾರ ಸಂದರ್ಭದಲ್ಲಿ ಕರ್ನಾಟಕದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಮೇಲೆ ಚಪ್ಪಲಿ ಎಸೆದಿದ್ದ ಪ್ರಕರಣ ಸಂಬಂಧ ಮೂವರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳನ್ನು ಪತ್ತೆ ಹಚ್ಚುವ ಕುರಿತು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡದವರು ಭಾನುವಾರ ಪ್ರಕರಣ ಸಂಬಂಧ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ಕುರಿತು ವಿಜಯನಗರ ಜಿಲ್ಲಾ ಎಸ್‌ಪಿ ಮಾರ್ಗದರ್ಶನದಲ್ಲಿ ಹೊಸಪೇಟೆ ಡಿವೈಎಸ್‌ಪಿ ನೇತೃತ್ವದಲ್ಲಿ ಇತರ ಪೊಲೀಸ್ ಸಿಬ್ಬಂದಿ ಇನ್ನೂಳಿದ ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 18ರ ರಾತ್ರಿ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ನಟ ದರ್ಶನ್ ತೂಗುದೀಪ, ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ತಂಡ ಪ್ರಮೋಷನ್‌ಗೆ ಬಂದಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ನಟ ದರ್ಶನ್ ಅವರ ಮೇಲೆ ಚಪ್ಪಲಿ ತೂರಿದ್ದರು. ಘಟನಾ ಸ್ಥಳದಲ್ಲಿ ಇಷ್ಟಾದರೂ ದರ್ಶನ್ ತೂಗುದೀಪ ಅವರು ಮಾತನಾಡಿ, ಆಯ್ತು ಚಿನ್ನ ಎಂದು ಹೇಳಿ ರಚಿತಾ ರಾಮ್ ಅವರಿಗೆ ಮಾತನಾಡಲು ಮೈಕ್ ನೀಡಿದ್ದರು.

ಘಟನೆ ನಡೆದ ನಂತರ ಕರ್ನಾಟಕದಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಪ್ರಭಾವಿ ರಾಜಕಾರಣಿಗಳು ಕಿಡಿಗೇಡಿಗಳ ಈ ಕೃತ್ಯವನ್ನು ಖಂಡಿಸಿದ್ದರು. ಈ ವಿಚಾರವಾಗಿ ಬುಧವಾರ ಸರಣಿ ಟ್ವೀಟ್ ಮಾಡಿದ್ದ ಬೆಂಗಳೂರು ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಅವರು, 'ಹೆಸರಾಂತ ನಟ, ಆತ್ಮೀಯ ಗೆಳೆಯ ದರ್ಶನ್ ತೂಗುದೀಪ ಅವರ ಮೇಲೆ ಚಪ್ಪಲಿ ಎಸೆದಿರುವುದು ಅತ್ಯಂತ ಹೇಯ ಕೃತ್ಯ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪೊಲೀಸ್ ಇಲಾಖೆ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ. ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡು, ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿ, ಅಭಿಮಾನಿಗಳಿಂದ ಡಿ ಬಾಸ್ ಎಂದು ಕರೆಸಿಕೊಂಡರೂ ದರ್ಶನ್‌ರಲ್ಲಿ ಅಹಂಕಾರವೆಂಬುದು ಕಿಂಚಿತ್ತು ಇಲ್ಲ ಎಂದು ಹೇಳಿದ್ದರು.
ದರ್ಶನ್‌ರ ಜೊತೆ ನಾವಿದ್ದೇವೆ. ಇಂಥಾ ಘಟನೆ ಮತ್ತೆಂದೂ ಮರುಕಳಿಸದಿರಲಿ. ಕನ್ನಡ ನಾಡೆಂಬ ಕುಟುಂಬದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ ಹೀನ ಮನಸುಗಳಿಗೆ ನನ್ನ ಧಿಕ್ಕಾರವಿದೆ ಎಂದು ಜಮೀರ್ ಖಾನ್ ಹೇಳಿದ್ದರು. ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿಗಳನ್ನು ಬಂಧಿಸುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ದಾವಣಗೆರೆ, ಗುಂಡ್ಲುಪೇಟೆ ಸೇರಿದಂತೆ ರಾಜ್ಯದ ವಿವಿಧೆಡೆ ಅವರ ಅಭಿಮಾನಿಗಳು ಕನ್ನಡಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.












Click it and Unblock the Notifications