ನಟಿ ತಮನ್ನಾ ಬದಲು ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ: ವಾಟಾಳ್ ಬಿಗ್ ಆಫರ್
ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರಿಗೆ 6.2 ಕೋಟಿ ರೂಪಾಯಿ ನೀಡಿ ನೇಮಕ ಮಾಡಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಸರ್ಕಾರ ಈ ಬಗ್ಗೆ ಸಮರ್ಥನೆ ನೀಡಿದ್ದರೂ ತಮನ್ನಾ ಅವರ ನೇಮಕವನ್ನು ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರಕ್ಕೆ ಬಿಗ್ ಆಫರ್ ಕೂಡ ನೀಡಿದ್ದಾರೆ.
ನಟಿ ತಮನ್ನಾ ಅವರನ್ನು ಭಾರಿ ಮೊತ್ತಕ್ಕೆ ರಾಯಭಾರಿ ಮಾಡಿರುವ ವಿಚಾರವಾಗಿ ಕೆಂಡಕಾರಿರುವ ವಾಟಾಳ್ ನಾಗರಾಜ್ ಅವರು ಯಾವ ತಮ್ಮನ್ನಾನೂ ಬೇಡ, ಮೈಸೂರು ಸ್ಯಾಂಡಲ್ ಸೋಪ್ ಎನ್ನುವುದೇ ಒಂದು ಬ್ರ್ಯಾಂಡ್ ಎಂದಿದ್ದಾರೆ. ಬೇಕಾದರೆ ನಾನೇ ಮೈಸೂರು ಸ್ಯಾಂಡಲ್ ಸೋಪ್‌ಗೆ ಉಚಿತವಾಗಿ ರಾಯಭಾರಿ ಆಗ್ತೀನಿ ಎಂದೂ ಸರ್ಕಾರಕ್ಕೆ ಆಫರ್ ಕೊಟ್ಟಿದ್ದಾರೆ.

ತಮನ್ನಾ ಭಾಟಿಯಾ ಮೂಲತಃ ತಮಿಳು ಚಿತ್ರರಂಗದಿಂದ ಸಿನಿ ಕೆರಿಯರ್ ಶುರು ಮಾಡಿದವರು. ಇದನ್ನು ಉಲ್ಲೇಖಿಸಿದ ವಾಟಾಳ್, ಮೈಸೂರು ಸ್ಯಾಂಡಲ್ ಸೋಪ್‌ಗೆ ತಮಿಳಿನ ರಾಯಭಾರಿ ಬೇಕಾಗಿಲ್ಲ. ಬೇಕಿದ್ದರೆ ಅದಕ್ಕೆ ನಾನೇ ಉಚಿತವಾಗಿ ರಾಯಭಾರಿ ಆಗುತ್ತೇನೆ ಎಂದು ಸರ್ಕಾರಕ್ಕೆ ಉಚಿತ ಆಫರ್ ಕೂಡ ನೀಡಿದ್ದು, ಎಲ್ಲರೂ ನಮ್ಮ ಸ್ಯಾಂಡಲ್ ಸೋಪ್ ಬಳಸಿ ಎಂದು ಕರ್ನಾಟಕದ ಜನರಿಗೆ ಕರೆ ನೀಡಿದ್ದಾರೆ. ಸಿಎಂ, ಡಿಸಿಎಂ ಸೇರಿದಂತೆ ರಾಜ್ಯದ ಸಚಿವರು ಕೂಡ ನಮ್ಮ ಮೈಸೂರು ಸ್ಯಾಂಡಲ್ ಸೋಪನ್ನು ಹಾಕಿ ಉಜ್ಜಲಿ, ಘಮ ಘಮ ಎಂದು ಸೋಪ್ ಮಾರಾಟ ಆಗಲಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಮೇಲೆ ದ್ವೇಷ
ಕರ್ನಾಟಕ ಸರ್ಕಾರಕ್ಕೆ ಕನ್ನಡದ ನಟಿಯರು ಬೇಕಾಗಿಲ್ವಾ? ಎಂದು ಜೆಡಿಎಸ್ ಕೂಡ ಪ್ರಶ್ನಿಸಿದೆ. ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ "ನಮ್ಮ ನೀರು, ನಮ್ಮ ಹಕ್ಕು" ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಲಿಲ್ಲ ಎಂದು ದ್ವೇಷ ಕಾರುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ಯಾಂಡಲ್‌ವುಡ್ ಕಲಾವಿದರ ನಟ್ಟು -ಬೋಲ್ಟು ಟೈಟು ಮಾಡುತ್ತೇವೆ ಎಂದು ಬಹಿರಂಗ ವೇದಿಕೆಯಲ್ಲಿ ಹೇಳಿದ್ದರು.ಕಾಂಗ್ರೆಸ್ ಸರ್ಕಾರ, ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಗೆ ಅನ್ಯ ರಾಜ್ಯದ ನಟಿ ತಮನ್ನಾರನ್ನು ರಾಯಭಾರಿಯನ್ನಾಗಿ ನೇಮಿಸಿ 6.20 ಕೋಟಿ ರೂಪಾಯಿ ಭಾರೀ ಮೊತ್ತವನ್ನು ನೀಡುತ್ತಿದೆ ಎಂದು ದೂರಿದೆ.

1916ರಲ್ಲಿ ಮೈಸೂರು ಅರಸರಿಂದ ಪ್ರಾರಂಭವಾದ ಮೈಸೂರು ಸ್ಯಾಂಡಲ್ ಸೋಪ್ಸ್ ಸಂಸ್ಥೆಯು ವಿಶ್ವ ಮಟ್ಟದಲ್ಲೇ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಕನ್ನಡಿಗರ ಹಿರಿಮೆಯ ಮೈಸೂರು ಸ್ಯಾಂಡಲ್ ಸೋಪ್ ಕಂಪನಿಗೆ ಸ್ಯಾಂಡಲ್‌ವುಡ್ ನಟಿಯರು ಸಿಗಲಿಲ್ಲವೇ? ಬ್ರಾಂಡ್ ಅಂಬಾಸಿಡರ್ ಆಗಲು ಅನ್ಯರಾಜ್ಯದ ನಟಿಯೇ ಬೇಕಿತ್ತೆ? ರಾಜ್ಯ ಸರ್ಕಾರ ತಕ್ಷಣವೇ ಈ ನೇಮಕವನ್ನು ಹಿಂಪಡೆಯಬೇಕು ಎಂಬುದು ಸಮಸ್ತ ಕನ್ನಡಿಗರ ಒಕ್ಕೊರಲ ಆಗ್ರಹವಾಗಿದೆ. ಕನ್ನಡಿಗರ ಹೆಮ್ಮೆಯ ಗಂಧದ ಸೋಪಿಗೆ ಕನ್ನಡದ ಕಲಾವಿದರನ್ನೇ ರಾಯಭಾರಿಯಾಗಿ ನೇಮಕ ಮಾಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.












Click it and Unblock the Notifications