ಅಬ್ಬಬ್ಬಾ.. ಬಿಟ್ರೆ ದೇವರಿಗೂ ಏನಾದ್ರು ವೈರಸ್ ಅಂಟಿಸಿ ಬಿಟ್ಟಾರು, ಈ ಫಟಿಂಗ್ರು
ಸುಳ್ಳುಸುದ್ದಿ ಹಬ್ಬಿಸುವುದರಲ್ಲಿ ಅದೇನು ಖುಷಿ ಸಿಗುತ್ತಾ ಈ ವದಂತಿ ಹಬ್ಬಿಸುವವರಿಗೆ. ಅಬ್ಬಬ್ಬಾ..ಎಂತೆಂತಾ ಸುಳ್ಳುಸುದ್ದಿಗಳು, ಬಿಟ್ಟರೆ, ದೇವರನ್ನೂ ಬಿಡೋಲ್ಲಾ ಅಂತಾರೆ ಇವರು.
Recommended Video
ಈ ಹಿಂದೆ ಗಣೇಶನಿಗೆ ಹಾಲು ಕುಡಿಸಿದ್ರು, ಆಂಜನೇಯ, ಬಾಬಾನ ಕಣ್ಣಲ್ಲಿ ನೀರನ್ನೂ ತರಿಸಿದ್ದರು. ಇದನ್ನೇ ನಂಬಿದ ಭಕ್ತರು, ಸಮೂಹ ಸನ್ನಿಯಂತೇ ದೇವಾಲಯಕ್ಕೆ ಓಟ ಕಿತ್ತಿದ್ದೇ..ಕಿತ್ತಿದ್ದು.
ಕೊರೊನಾ ಕಾಟದಿಂದ ತಿರುಪತಿ ದೇವಾಲಯ ಭಕ್ತರಿಗೆ ಬಂದ್ ಆದ ನಂತರ, ಹಸುವೊಂದು ಮೆಟ್ಟಲೇರಿ ಬಾಲಾಜಿಯ ದರ್ಶನ ಮಾಡಿತು ಎಂದು ಸುಳ್ಳುಸುದ್ದಿ ಸಾಮಾಜಿಕ ತಾಣದಲ್ಲಿ ಹರಿಯ ಬಿಡಲಾಯಿತು. ಜನ ಲೈಕ್ ಒತ್ತಿದ್ದೇ. ಒತ್ತಿದ್ದು, ಶೇರ್ ಮಾಡಿದ್ದೇ..ಮಾಡಿದ್ದು.
ಈಗಿನ ಮಾರಣಾಂತಿಕ ಕೊರೊನಾ ವಿಚಾರದಲ್ಲೂ ಹರಿದಾಡುತ್ತಿರುವ ಸುಳ್ಳುಸುದ್ದಿಗಳು ಒಂದೇ, ಎರಡೇ.. ಈ ಕಾಟ ತಾಳಲಾರದೇ, ಕೇಂದ್ರವೇ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಕೆಲವೊಂದು ಭಯಂಕರ ಸ್ಯಾಂಪಲ್ ಗಳು:

ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನ
ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನದಲ್ಲಿ ಪ್ರತೀ ಮಂಗಳವಾರ ನಡೆಯುವ ದರ್ಶನದ ವೇಳೆ, ತಾಯಿಯಿಂದ ಸೂಚನೆ ಬಂದಿದೆ. ಎಲ್ಲಾ ಭಕ್ತರು ಟೀ ಪುಡಿಯನ್ನು ನೀರಿನಲ್ಲಿ ಕುದಿಸಿ, ಅದಕ್ಕೆ ಅರಸಿಣ ಹಾಕಿ ಕುಡಿದರೆ, ಕೊರೊನಾ ವೈರಸ್ ಹತ್ತಿರ ಬರುವುದಿಲ್ಲ ಎನ್ನುವ ಸೂಚನೆ ಬಂದಿದೆ ಎಂದು ಸುಳ್ಳುಸುದ್ದಿಯನ್ನು ಹಬ್ಬಿಸಲಾಗಿತ್ತು. ನಂತರ, ದೇವಸ್ಥಾನದ ಮೊಕೇಸ್ತರರು ಇದೊಂದು ವದಂತಿ ಎಂದು ಸ್ಪಷ್ಟನೆಯನ್ನು ನೀಡಿದರು.

ಧರ್ಮಸ್ಥಳದ ಮಂಜುನಾಥ ದೇವಾಲಯದ ನಂದಾದೀಪ
ಇದಾದ ನಂತರ, ಧರ್ಮಸ್ಥಳದ ಮಂಜುನಾಥ ದೇವಾಲಯದ ನಂದಾದೀಪ ನಂದಿ ಹೋಗಿದೆ. ಇದು ಅಪಶಕುನದ ಸೂಚಕ. ಎಲ್ಲಾ ಭಕ್ತರು ಅವರವರ ಮನೆಯ ಮುಂದೆ ದೀಪವನ್ನು ಹಚ್ಚಬೇಕೆಂದು ತಡರಾತ್ರಿ ಕಿಡಿಗೇಡಿಗಳು ವದಂತಿ ಹಬ್ಬಿಸಿದರು. ಎದ್ದೆನೋ, ಬಿದ್ದೆನೋ ಎಂದು ಎಲ್ಲಾ ಭಕ್ತರು ಅದನ್ನು ನಂಬಿ ದೀಪ ಹಚ್ಚಿದರು. ನಂತರ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಸ್ಪಷ್ಟೀಕರಣವನ್ನು ನೀಡಿದರು.

ಆದಿಶಕ್ತಿ ರೇಣುಕಾ ಯಲ್ಲಮ್ಮ ಮೂರ್ತಿ
ಆದಿಶಕ್ತಿ ರೇಣುಕಾ ಯಲ್ಲಮ್ಮ ಮೂರ್ತಿಯ ಮಂಗಳಸೂತ್ರ ಹರಿದಿದೆ, ಇದು ನಾಡಿಗೆ ಮುಂದಾಗುವ ಆಪತ್ತಿನ ಸೂಚನೆ ಎಂದು ಯಾರೋ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದರು. ಅಸಂಖ್ಯಾತ ಭಕ್ತರನ್ನು ಹೊಂದಿರುವ ಈ ದೇವಾಲಯದ, ಈ ಮಂಗಳಸೂತ್ರ ಹರಿದ ಸುದ್ದಿ ಭಕ್ತರಲ್ಲಿ ಭಾರೀ ಆತಂಕವನ್ನು ಮೂಡಿಸಿತ್ತು. ನಂತರ, ದೇವಸ್ಥಾನದ ಆಡಳಿತ ಮಂಡಳಿ, ಇದು ಸುಳ್ಳುಸುದ್ದಿ ಎಂದು ಸ್ಪಷ್ಟನೆಯನ್ನು ನೀಡಿತು.

ಚಿಕ್ಕಬಳ್ಳಾಪುರದ ಹಲವು ಗ್ರಾಮ
ಆಂಧ್ರಪ್ರದೇಶದ ಹಿಂದೂಪುರದಲ್ಲಿ ಪುರುಷನೊಬ್ಬ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾನೆ. ಆ ಹೆಣ್ಣುಮಗು ಅರ್ಧ ಹಂದಿ, ಅರ್ಧ ಮನುಷ್ಯನನ್ನು ಹೋಲುತ್ತದೆ. ಇದು, ಜಗತ್ತಿಗೆ ಎದುರಾಗುವ ಕೇಡುಕಾಲದ ಸಂಕೇತ. ಇಡೀ ರಾತ್ರಿ ಯಾರೂ ಮಲಗಬಾರದು. ಒಬ್ಬನೇ ಮಗನಿರುವ ಕುಟುಂಬದವರು, ಇನ್ನೊಬ್ಬನೇ ಮಗನಿರುವ ಇನ್ನೊಂದು ಮನೆಯಿಂದ ನೀರನ್ನು ತಂದು, ಮಧ್ಯರಾತ್ರಿ ಎರಡು ಗಂಟೆಗೆ ತೆಂಗಿನಮರದ ಬುಡದಲ್ಲಿ ಸ್ನಾನವನ್ನು ಮಾಡಬೇಕು/ಮಾಡಿಸಬೇಕು ಎಂದು ಸುದ್ದಿ ಹಬ್ಬಿಸಲಾಗಿತ್ತು. ಚಿಕ್ಕಬಳ್ಳಾಪುರದ ಹಲವು ಗ್ರಾಮಗಳಲ್ಲಿ ಇದನ್ನು ಪಾಲಿಸಲಾಗಿತ್ತು. ನಂತರ, ಇದೊಂದು ವದಂತಿ ಎಂದು ಗೊತ್ತಾದಾಗ, ಜನ, ಬೇಸತ್ತರು.












Click it and Unblock the Notifications