Valmiki case: ವಾಲ್ಮೀಕಿ ನಿಗಮ ಪ್ರಕರಣದ ಇಡಿ ತನಿಖೆಯಲ್ಲಿ ಷಡ್ಯಂತ್ರ- ಕೇಂದ್ರದ ವಿರುದ್ಧ ಪ್ರಿಯಾಂಕ ಖರ್ಗೆ ಕಿಡಿ
ಬೆಂಗಳೂರು ಜುಲೈ 18: ವಾಲ್ಮೀಕಿ ನಿಗಮ ಪ್ರಕರಣದ ಇಡಿ ತನಿಖೆಯಲ್ಲಿ ಕೇಂದ್ರ ಸರ್ಕಾರದಿಂದ ಷಡ್ಯಂತ್ರ ನಡೆದಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಆರೋಪ ಮಾಡಿದ್ದಾರೆ.
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಹಲವರನ್ನು ಬಂಧಿಸಿ ಇಡಿ ತನಿಖೆ ನಡೆಸುತ್ತಿದೆ. ವಾಲ್ಮೀಕಿ ನಿಗಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಇನ್ನಿತರ ಸದಸ್ಯರ ಕೈವಾಡವಿದೆ ಎಂದು ಹೇಳುವಂತೆ ಬಂಧಿತರಿಗೆ ಒತ್ತಾಯಿಸಲಾಗುತ್ತಿದೆ ಎಂದು ಪ್ರಿಯಾಂಕ ಖರ್ಗೆ ದೂರಿದ್ದಾರೆ.

ವಾಲ್ಮೀಕಿ ನಿಗಮ ಹಗರಣಕ್ಕೆ ಸಿಎಂ, ಡಿಸಿಎಂ ಕಾರಣ ಎಂದು ಹೇಳಲು ಬಲವಂತ ಮಾಡಲಾಗುತ್ತಿದೆ. ಅಲ್ಲದೆ ಮಾಲ್ಮೀಕಿ ನಿಗಮ ಹಣವನ್ನು ಬಳ್ಳಾರಿ ಚುನಾವಣೆಗೆ ಬಳಕೆ ಮಾಡಲಾಗಿದೆ ಅಂತ ಹೇಳಲು ಬಂಧಿತರಿಗೆ ಒತ್ತಡ ಹಾಕಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ ಖರ್ಗೆ ಅವರು, 'ಕೆಐಎಡಿಬಿ ದುಡ್ಡು ಸೇಲಂಗೆ ಹೋಗಿದೆ, ಬೋವಿ ನಿಗಮದಲ್ಲಿ 120 ಕೋಟಿ ಹಗರಣ ಆಗಿದೆ, ದೇವರ ಅರಸು ಟ್ರಕ್ ಟರ್ಮಿನಲ್ ಪ್ರಕರಣದಲ್ಲಿ ಹಣ ದುರ್ಬಳಕೆಯಾಗಿದೆ ಇದರ ಬಗ್ಗೆ ಯಾಕೆ ಇಡಿ ಯಾಕೆ ಕಾಳಜಿ ವಹಿಸಿಲ್ಲ?' ಎಂದು ವಾಗ್ದಾಳಿ ಮಾಡಿದ್ದಾರೆ.

ಇದು ಬಿಜೆಪಿ ಷಡ್ಯಂತ್ರ. ಬಿಜೆಪಿಯವರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಇದು. ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಸರ್ಕಾರಗಳನ್ನು ಬಿಜೆಪಿಯವರು ಬೀಳಿಸಿದ್ದಾರೆ ನೋಡಿ. 2016ರಲ್ಲಿ ಉತ್ತರಖಂಡ, 2019ರಲ್ಲಿ ಕರ್ನಾಟಕ, ಗುಜರಾತ್‌ನಲ್ಲಿ ನಮ್ಮ ಎಂಎಲ್‌ಎಗಳ ಖರೀದಿ ಮಾಡಿದ್ರು. ಸಿಕ್ಕಿಂನಲ್ಲಿ ಎಂಎಲ್‌ಎಗಳ ಖರೀದಿ ಮಾಡಿದ್ರು. 2014 ರಿಂದ 444 ಎಂಎಲ್‌ಎಗಳನ್ನು ಖರೀದಿ ಮಾಡಲಾಗಿದೆ. ಮೆಜಾರಿಟಿ ಇದ್ರೂ ಕೂಡ ಕೇಂದ್ರದ ಏಜೆನ್ಸಿಗಳನ್ನು ಬಳಸಿಕೊಂಡು ಸರ್ಕಾರಗಳನ್ನು ಕೆಡವಲಾಗುತ್ತಿದೆ ಎಂದು ಖರ್ಗೆ ಹರಿಹಾಯ್ದಿದ್ದಾರೆ.
ಯಾವ ಶಾಸಕರು ತಮ್ಮ ಪಕ್ಷಕ್ಕೆ ಸೇರುವುದಿಲ್ಲ ಅವರ ಮೇಲೆ ಹೆಚ್ಚು ಒತ್ತಡ ತರುವುದು. 60 ಬಾರಿ ಮಣಿಪುರ, ಹಿಮಾಚಲ ಪ್ರದೆಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಶಾಸಕರ ಖರೀದಿ ನಡೆದಿದೆ. ಮಾಜಿ ಸಿಎಂ ಯಡಿಯೂರಪ್ಪ ಮೇಲೂ ಕೇಸ್ ಇದೆ. ಅವರ ವಿಚಾರಣೆ ಯಾಕೆ ಆಗುತ್ತಿಲ್ಲ. ರೆಡ್ಡಿ ಬ್ರದರ್ಸ್ ಮೇಲೆ ಐಟಿ ಕೇಸ್ ಇತ್ತು. ಆದರೆ ಅವರು ಪಕ್ಷ ಸೇರಿದ ಬಳಿಕೆ ಅವರ ವಿಚಾರಣೆ ಇಲ್ಲ. ಬಿಜೆಪಿ ಸೇರಿದರೆ ಸಾಥ್ ಖೂನ್ ಮಾಫ್ ಎಂದು ಆಕ್ರೋಶಗೊಂಡರು.












Click it and Unblock the Notifications