ವೈಕುಂಠ ಏಕಾದಶಿ 2023: ವಿಷ್ಣುವಿನ ಕೃಪೆಗೆ ಪಾತ್ರರಾಗಲು ವೃತಾಚರಣೆ ಮಾಡುವುದು ಹೇಗೆ..?
ಬೆಂಗಳೂರು, ಜನವರಿ,2: ಹೊಸವರ್ಷ ಆರಂಭದಲ್ಲೇ ಶುಭಾರಂಭವೆನ್ನುವಂತೆ ಸೋಮವಾರ ವೈಕುಂಠ ಏಕಾದಶಿ ಬಂದಿದ್ದು, ಎಲ್ಲೆಡೆ ವಿಷ್ಣುವಿನ ಆರಾಧಾನೆ ಆರಂಭವಾಗಿದೆ.
ವಿಷ್ಣುವಿನ ಆರಾಧನೆ ಹಾಗೂ ಉಪವಾಸಕ್ಕೆ ಪ್ರಸಿದ್ಧಿಯಾಗಿರುವ ವೈಕುಂಠ ಏಕಾದಶಿ ಆಚರಣೆ, ಜನವರಿ, 2, 2023ರಂದು ಬಂದಿದ್ದು, ಈ ದಿನ ಭಕ್ತರು ಶ್ರದ್ಧೆ ಹಾಗೂ ಭಕ್ತಿಯಿಂದ ವಿಷ್ಣುವಿನ ಆರಾಧನೆ ಮಾಡುತ್ತಾರೆ. ಇದರಿಂದ ಇಷ್ಟಾರ್ಥಗಳೆಲ್ಲವೂ ಈಡೇರುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ.
ವೈಕುಂಠ ಏಕಾದಶಿಯನ್ನು ಪೌಷ ಪುತ್ರದಾ ಏಕಾದಶಿ, ಮುಕ್ಕೋಟಿ ಏಕಾದಶಿ, ಭೀಷ್ಮ ಏಕಾದಶಿ ಎಂದೂ ಸಹ ಕರೆಯುತ್ತಾರೆ. ಈ ದಿನ ವಿಷ್ಣು ಹಾಗೂ ವಿಷ್ಣುವಿನ ಅವತಾರದ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾಗುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಜನರ ನಂಬಿಕೆ.

ವೈಕುಂಠ ಏಕಾದಶಿಯ ದಿನ ಹೆಚ್ಚಿನ ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರ ಎಂಬ ವಿಶೇಷ ಪ್ರವೇಶವನ್ನು ನಿರ್ಮಿಸಲಾಗುತ್ತದೆ. ಈ ಮಂಗಳಕರ ದಿನದಂದು ಈ ದ್ವಾರವನ್ನು ಹಾದು ಹೋಗುವವರು ವೈಕುಂಠವನ್ನು ತಲುಪುತ್ತಾರೆ ಎಂದು ಸಹ ಹೇಳಲಾಗುತ್ತದೆ.
2023ರ ಜನವರಿ 1 ರಂದು ಸಂಜೆ 7:11 ರಿಂದ ಏಕಾದಶಿ ತಿಥಿ ಪ್ರಾರಂಭವಾಗಲಿದ್ದು, 2023 ರ ಜನವರಿ 2 ರಂದು ರಾತ್ರಿ 8:23 ಕ್ಕೆ ಮುಕ್ತಾಯಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ಜನವರಿ 2, 2023 ರಂದು ವೈಕುಂಠ ಏಕಾದಶಿ ವ್ರತವನ್ನು ಆಚರಿಸಲಾಗುತ್ತಿದೆ.
ವೈಕುಂಠ ಏಕಾದಶಿ ವೃತಾಚರಣೆ ಮಾಡುವುದು ಹೇಗೆ..?
ವೈಕುಂಠ ಏಕಾದಶಿ ವೃತವನ್ನು ಮಾಡುವವರು ಬೆಳಗ್ಗೆ ಬೇಗನೆ ಎದ್ದು ಪುಣ್ಯ ಸ್ನಾನ ಮಾಡಿ ಉಪವಾಸ ಮಾಡುವ ಸಂಕಲ್ಪ ಮಾಡುತ್ತಾರೆ. ಈ ಏಕಾದಶಿ ವ್ರತವನ್ನು ಆಚರಿಸುವರು, ಧೂಪ ಮಾಡಿ ದೀಪ ಬೆಳಗಿಸಿ, ನೈವೇದ್ಯ ಮಾಡಿ ಬಳಿಕ ಹದಿನಾರು ಪದಾರ್ಥಗಳಿಂದ ವಿಷ್ಣುವನ್ನು ವಿಶೇಷವಾಗಿ ಪೂಜಿಸುತ್ತಾರೆ. ಬಳಿಕ ವಿಷ್ಣು ಅಥವಾ ಆತನ ಅವತಾರದ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾವಿಷ್ಣುವಿಗೆ ಹೂವಿನ ಹಾರ, ನೈವೇದ್ಯ ಮತ್ತು ಬಾಳೆಹಣ್ಣು ಅರ್ಪಿಸುತ್ತಾರೆ. ವೃತ ಆಚರಿಸುವವರು ಕೊನೆಯಲ್ಲಿ ರಾತ್ರಿ ದೀಪದಾನ ಮಾಡುವುದು ಕೂಡ ಶ್ರೇಷ್ಠವಾಗಿದೆ. ವೃತದ ವೇಳೆ ಮಹಾವಿಷ್ಣುವಿನ ಮಂತ್ರ, ಶ್ರೀ ಹರಿ ಸ್ತೋತ್ರಂ, ವಿಷ್ಣು ಸಹಸ್ತ್ರನಾಮ ಮತ್ತು ಏಕಾದಶಿ ವ್ರತ ಕಥೆಯನ್ನು ಪಠಿಸುವುದರಿಂದ ವೃತ ಪೂರ್ಣಗೊಳ್ಳುತ್ತದೆ.
ವೈಕುಂಠ ಏಕಾದಶಿಯ ಮಹತ್ವ
ಹಿಂದೂ ಪುರಾಣಗಳ ಪ್ರಕಾರ, ವೈಕುಂಠ ಏಕಾದಶಿಯ ದಿನದಂದು ಸಾಗರ ಮಂಥನವನ್ನು ನಡೆಸಲಾಯಿತು ಎನ್ನುವುದು ಪ್ರತೀತಿ. ಈ ಸಾಗರ ಮಂಥನದ ಸಮಯದಲ್ಲಿ, ಕ್ಷೀರ ಸಾಗರದಿಂದ ದೈವಿಕ ಅಮೃತವು ಹೊರಹೊಮ್ಮಿತು, ದೇವರುಗಳಿಗೆ ವಿತರಿಸಲಾಯಿತು. ಆದ್ದರಿಂದ ಈ ಮಂಗಳಕರ ದಿನದಂದು ಸಾಯುವ ಜನರು ಜನನ ಮತ್ತು ಮರಣ ಚಕ್ರದಿಂದ ಮುಕ್ತರಾಗುತ್ತಾರೆ ಮತ್ತು ಭಗವಾನ್ ವಿಷ್ಣುವಿನ ನಿವಾಸ ಅಥವಾ ವೈಕುಂಠವನ್ನು ಸೇರುತ್ತಾರೆ ಎನ್ನುವುದು ಜನರ ನಂಬಿಕೆಯಾಗಿದೆ.












Click it and Unblock the Notifications