ಈ ಕಾರಣಕ್ಕೆ ಡಿ.ಕೆ ಶಿವಕುಮಾರ್ "U-TURN' CM ಎಂದ ವಿರೋಧ ಪಕ್ಷದ ನಾಯಕ ಆರ್. ಅಶೋಕ್!
ಜನಾಕ್ರೋಶದ ಬೆಚ್ಚಿಬಿದ್ದು ಮತ್ತೊಮ್ಮೆ ಮಂಡಿಯೂರಿದ "U-TURN" CM ಡಿ.ಕೆ. ಶಿವಕುಮಾರ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕೆ ಮಾಡಿದ್ದಾರೆ. ಜನರ ವಿರೋಧ ಮತ್ತು ಬಿಜೆಪಿಯ ನಿರಂತರ ಹೋರಾಟದ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸರ್ಕಾರ - 'ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆ'ಯನ್ನು ಕೊನೆಗೂ ಹಿಂಪಡೆಯಲು ನಿರ್ಧರಿಸಿದೆ ಎಂದು ಆರ್. ಅಶೋಕ್ ಅವರು ಹೇಳಿದ್ದಾರೆ.
ಅಭಿವೃದ್ಧಿಯ ನೆಪದಲ್ಲಿ ಬೆಂಗಳೂರಿನ ಅಮೂಲ್ಯ ಹಸಿರು ಉದ್ಯಾನವನಗಳಿಗೆ ಕತ್ತರಿ ಹಾಕಲು ಹೊರಟಿದ್ದ ಭಂಡ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಕೊನೆಗೂ ಹಿಂದೆ ಸರಿಯದೆ ಬೇರೆ ದಾರಿ ಉಳಿಯಲಿಲ್ಲ. ಇದು ಕೇವಲ ಮಸೂದೆ ಹಿಂಪಡೆಯುವಿಕೆ ಅಲ್ಲ. ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದ ಡಿಕೆಶಿ ಸರ್ಕಾರಕ್ಕೆ ನಾಗರೀಕರು ಮಾಡಿದ ಮತ್ತೊಂದು ರಾಜಕೀಯ ಮುಖಭಂಗ!

ಬಿಜೆಪಿ ಎಚ್ಚರಿಸಿತು - ಕೇಳಲಿಲ್ಲ, ಜನರು ವಿರೋಧಿಸಿದರು - ಲೆಕ್ಕಿಸಲಿಲ್ಲ, ಹೋರಾಟ ತೀವ್ರವಾಯಿತು - ಬೆಚ್ಚಿಬಿದ್ದರು. ಜನಾಕ್ರೋಶ ಭುಗಿಲೆದ್ದಿತು - ಕೊನೆಗೆ U-TURN ಹೊಡೆದರು! ಇದಕ್ಕಾಗಿಯೇ ಡಿ.ಕೆ. ಶಿವಕುಮಾರ್ ಅವರಿಗೆ ಕನ್ನಡಿಗರು ನೀಡಿರುವ ಬಿರುದು - 'U-TURN CM'! ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ಒಂದು ವಿಷಯ ನೆನಪಿರಲಿ: 5% ಅಲ್ಲ - ಬೆಂಗಳೂರಿನ ಉದ್ಯಾನಗಳ 5 ಇಂಚು ಭೂಮಿಯನ್ನೂ ಖಾಸಗಿ ಅಥವಾ ವಾಣಿಜ್ಯ ಹಿತಾಸಕ್ತಿಗಳಿಗೆ ಬಿಟ್ಟುಕೊಡಲು ಬಿಜೆಪಿ ಬಿಡುವುದಿಲ್ಲ!
ಬೆಂಗಳೂರು ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಹಸಿರಿಗೆ ಕತ್ತರಿ ಹಾಕುವ ಯಾವುದೇ ಪ್ರಯತ್ನಕ್ಕೆ ಬಿಜೆಪಿ ಗೋಡೆಯಂತೆ ನಿಲ್ಲುತ್ತದೆ. ಇದು ಬಿಜೆಪಿಯ ಹೋರಾಟದ ಭರ್ಜರಿ ಗೆಲುವು. ಇದು ಬೆಂಗಳೂರಿನ ಜನರ ಗೆಲುವು. ಇದು ನಮ್ಮ ಹೆಮ್ಮೆಯ ಉದ್ಯಾನ ನಗರಿಯ ಹಸಿರಿನ ಗೆಲುವು ಎಂದೂ ಮುಖ್ಯಮಂತ್ರಿ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹದಗೆಟ್ಟಿದೆ: ಆರ್. ಅಶೋಕ್
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದಲ್ಲಿ ಪಾಠ ಕೇಳುತ್ತಿದ್ದ ಮಕ್ಕಳ ಮೇಲೆಯೇ ಶಾಲೆಯ ಛಾವಣಿ ಕುಸಿದು ಬಿದ್ದಿರುವ ಘಟನೆ ಸಾಕ್ಷಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಮಕ್ಕಳಿಗೆ ಶೂ-ಸಾಕ್ಸ್ ಇಲ್ಲ, ಪಠ್ಯಪುಸ್ತಕಗಳ ಕೊರತೆ, ಶಾಲೆಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆಯಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ. ಈಗ ಕೊನೆಯ ಪಕ್ಷ ಮಕ್ಕಳು ನೆಮ್ಮದಿಯಾಗಿ ಪಾಠ ಕೇಳಲು ಸುರಕ್ಷಿತ ಸೂರು ಕೂಡ ಇಲ್ಲದಂತಾಗಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಇದೇನಾ ನಿಮ್ಮ 'ಗ್ಯಾರಂಟಿ' ಸರ್ಕಾರ? ಮಕ್ಕಳ ಜೀವದ ವಿಚಾರದಲ್ಲೂ ನಿಮ್ಮ ಗ್ಯಾರಂಟಿ ಇಷ್ಟೇನಾ? ಮೊದಲು ನಿಮ್ಮ ಶಿಕ್ಷಣ ಇಲಾಖೆಯ ಸ್ಥಿತಿ ಹೇಗಿದೆ ಎಂಬುದನ್ನು ಗಮನಿಸಿ. ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಯ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ಏಕೆ ಎಂದು ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.
ರಾಜಕೀಯ ಪ್ರಚಾರಕ್ಕೆ ನೀಡುವ ಮಹತ್ವವನ್ನು ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗೆ ನೀಡಿ. ಕರ್ನಾಟಕದ ಎಲ್ಲಾ ಶಿಥಿಲಗೊಂಡ ಸರ್ಕಾರಿ ಶಾಲಾ ಕಟ್ಟಡಗಳನ್ನು ತಕ್ಷಣ ಪರಿಶೀಲಿಸಿ, ದುರಸ್ತಿ ಕಾರ್ಯ ಕೈಗೊಂಡು ಮಕ್ಕಳಿಗೆ ಸುರಕ್ಷಿತ ಕಲಿಕಾ ವಾತಾವರಣ ಕಲ್ಪಿಸಿ ಎಂದೂ ಹೇಳಿದ್ದಾರೆ.


Click it and Unblock the Notifications
