ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಪ್ರಕಟವಾಗಿದೆ. ಹೀಗಾಗಿ ಉತ್ತರ ಕನ್ನಡದಲ್ಲಿ ಅಸಮಾಧಾನದ ಹೊಗೆ ಆಡತೊಡಗಿದೆ. ಟಿಕೆಟ್ ಕೈತಪ್ಪಿದ್ದ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ಪಡೆದು ಪ್ರಚಾರಕ್ಕಿಳಿಯಲು ಮುಂದಾದ ಕಾಗೇರಿ ಪ್ರಯತ್ನ ವಿಫಲವಾಗಿದೆ.
ಆರು ಸಲ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅವರು ಉತ್ತರ ಕನ್ನಡದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈತಪ್ಪಿದ್ದರಿಂದ ಅನಂತಕುಮಾರ ಹೆಗಡೆ ಅವರು ಕಾರ್ಯಕರ್ತರು ಮಾತ್ರವಲ್ಲದೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರಿಂದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಂಕಷ್ಟ ಎದುರಾಗಿದೆ.

ಅನಂತಕುಮಾರ್ ಹೆಗಡೆ ಮನವೊಲಿಸಲು ಅವರ ಮನೆ ಬಳಿ ಹೋಗಿ ಕಾಗೇರಿ ಅರ್ಧ ಗಂಟೆ ಕಾದರೂ ಸೌಜನ್ಯಕ್ಕೂ ಗೇಟ್ ತೆರೆಸಿ ಅವರ ಬಳಿ ಮಾತನಾಡಿಲ್ಲ ಎಂಬುದು ಗೊತ್ತಾಗಿದೆ. ಇವರೊಂದಿಗೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕೂಡ ಕಾಗೇರಿ ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಕಾಗೇರಿ ಅವರಿಗೆ ಸೋಲಿನ ಭೀತಿಯನ್ನು ಹುಟ್ಟಿಸಿದಂತೆ ಕಾಣಿಸುತ್ತಿದೆ.
ಟಿಕೆಟ್ ಸಿಗದೆ ಅಸಮಾಧಾನಗೊಂಡ ಸಂಸದರು ಹಾಗೂ ಶಾಸಕರ ಮನವೊಲಿಸುವುದೇ ಕಾಗೇರಿಗೆ ದೊಡ್ಡ ಸವಾಲಾಗಿದೆ. ಕಾಗೇರಿಗೆ ಬೆಂಬಲ ನೀಡಿ ಪ್ರಚಾರಕ್ಕೆ ಇಳಿಯದೇ ಇದ್ದರೆ ಮತಗಳು ಕೈಮೀರಿ ಹೋಗುವ ಭೀತಿ ಕೂಡ ಎದುರಾಗಿದೆ. ಹೀಗಾಗಿ ಉತ್ತರ ಕನ್ನಡದಲ್ಲಿ ಬಿಜೆಪಿ ವಲಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಒಂದು ವೇಳೆ ಅಸಮಾಧಾನಿತರು ಕಾಗೇರಿಗೆ ಬೆಂಬಲ ನೀಡದೇ ಇದ್ದರೆ ಇದರ ಲಾಭವನ್ನು ಕಾಂಗ್ರೆಸ್ ಪಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್‌ನ ಡಾ. ಅಂಜಲಿ ಲಿಂಬಾಳ್ಕರ್ ಹಾಗೂ ಕಾಗೇರಿ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆಯೇ, ಕ್ಷೇತ್ರದ ವ್ಯಾಪ್ತಿಯ ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳು ಹಾಗೂ ಬೆಳಗಾವಿ ಜಿಲ್ಲೆಯ ಎರಡು ತಾಲೂಕುಗಳ ಮತದಾರರನ್ನು ಗಮನ ಸೆಳೆದು ಅಭ್ಯರ್ಥಿಗಳು ಗೆಲ್ಲಬೇಕಾಗಿದೆ.
ವಿಶ್ವೇಶ್ವರ ಹೆಗಡೆ ಮತ್ತು ಅಂಜಲಿ ನಿಂಬಾಳ್ಕರ ಇಬ್ಬರೂ ಈಗ ಲೋಕಸಭೆ ಪ್ರವೇಶಿಸುವುದಕ್ಕೆ ತಮ್ಮ ಪಕ್ಷಗಳ ಹುರಿಯಾಳು ಆಗಿದ್ದಾರೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯನ್ನು ಮೀರಿ ಬಹಳಷ್ಟು ವಿಸ್ತಾರವಾದ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರ ಮನ್ನಣೆಗಳಿಸಲು ಇದೀಗ ಪ್ರಯತ್ನ ಪ್ರಾರಂಭಿಸಬೇಕಿದೆ.
ಕಾಗೇರಿ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅನಂತ್ ಕುಮಾರ ಹೆಗಡೆ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗುತ್ತಾರೆಯೋ ಇಲ್ಲವೋ? ಅಥವಾ ಅವರ ನಡೆ ಏನು ಎಂಬ ಬಗ್ಗೆ ಹಲವಾರು ಗೊಂದಲದ ಹೇಳಿಕೆಗಳು ವ್ಯಕ್ತವಾಗಿದೆ.











Click it and Unblock the Notifications