ಬಿಜೆಪಿ ಮುಳುಗಿಸುವ 5 ನಾಯಕರ ಪಟ್ಟಿ ಕೊಟ್ಟ ಖಾದರ್!
ಬೆಂಗಳೂರು, ಜನವರಿ 03 : 'ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಮುಳುಗಿಸಲು ಪಕ್ಷದ 5 ನಾಯಕರು ಸಾಕು. ಜೈಲಿಗೆ ಹೋಗಿ ಬಂದವರನ್ನು ಜನರು ಮರೆಯುತ್ತಾರೆ. ಆದರೆ, ಅನ್ನ, ಕ್ಷೀರ, ಮನೆ ಕೊಟ್ಟವರನ್ನು ಮರೆಯುವುದಿಲ್ಲ' ಎಂದು ಯು.ಟಿ.ಖಾದರ್ ಹೇಳಿದರು.
ಬುಧವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದರು.
'ಗುಜರಾತ್‌ನಲ್ಲಿಯೇ ಮೋದಿ ಹವಾ ಇಲ್ಲ. ಇನ್ನು ಕರ್ನಾಟಕದಲ್ಲಿ ನಡೆಯುತ್ತದೆಯೇ?. ಗುಜರಾತ್‌ನಲ್ಲಿ ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ ಅವರಂತಹ ನಾಯಕರು ಸಿಕ್ಕಿದ್ದರೆ ಬಿಜೆಪಿ ಧೂಳಿಪಟವಾಗುತ್ತಿತ್ತು' ಎಂದು ಹೇಳಿದರು.
'ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಯೋಜನೆ ಏಕೆ ಜಾರಿಗೆ ಬಂದಿಲ್ಲ?' ಎಂದು ಖಾದರ್ ಪ್ರಶ್ನಿಸಿದರು. ಖಾದರ್ ಹೇಳಿದ 5 ನಾಯಕರ ಪಟ್ಟಿ ಇಲ್ಲಿದೆ...

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ
'ಒಬ್ಬರು ಸಂವಿಧಾನ ಬದಲಿಸಬೇಕು ಎಂದು ಹೇಳುತ್ತಾರೆ' ಎಂದು ಯು.ಟಿ.ಖಾದರ್ ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ, ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಬಿಜೆಪಿ ಮುಳುಗಿಸುತ್ತಾರೆ ಎಂದರು.

'ಬೆಂಕಿ ಹಚ್ಚಬೇಕು'
'ಒಬ್ಬ ಬಿಜೆಪಿ ನಾಯಕರು ಬೆಂಕಿ ಹಚ್ಚಬೇಕು' ಎಂದು ಹೇಳುತ್ತಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಹೇಳದೆ ಬಿಜೆಪಿ ಮುಳುಗಿಸುತ್ತಾರೆ ಎಂದು ಖಾದರ್ ಹೇಳಿದರು.

ಶೋಭಾ ಕರಂದ್ಲಾಜೆ
ಯು.ಟಿ.ಖಾದರ್ ಅವರು ಹೇಳಿದ ಬಿಜೆಪಿ ಮುಳುಗಿಸುವ ನಾಯಕರ ಪಟ್ಟಿಯಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಸೇರಿಸಿದರು. ಇತ್ತೀಚಿನ ದಿನಗಳಲ್ಲಿ ತಮ್ಮ ಉಗ್ರ ಭಾಷಣದಿಂದಲೇ ಉಡುಪಿ-ಚಿಕ್ಕಮಗಳೂರು ಸಂಸದೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಸುದ್ದಿ ಮಾಡುತ್ತಿದ್ದಾರೆ.

ಗೋ.ಮಧುಸೂದನ್
ಕೆಲವು ದಿನಗಳ ಹಿಂದೆ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿದ್ದ ಗೋ.ಮಧುಸೂದನ್ ಅವರು ಸಹ ಕರ್ನಾಟಕದಲ್ಲಿ ಪಕ್ಷವನ್ನು ಮುಳುಗಿಸುವ ನಾಯಕರು ಎಂಬುದು ಖಾದರ್ ಹೇಳಿಕೆ.

ನಳೀನ್ ಕುಮಾರ್ ಕಟೀಲ್
ಸಚಿವ ಯು.ಟಿ.ಖಾದರ್ ಅವರ ಪ್ರಕಾರ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಕರ್ನಾಟಕದಲ್ಲಿ ಪಕ್ಷವನ್ನು ಮುಳುಗಿಸುತ್ತಾರೆ.











Click it and Unblock the Notifications