Urdu Habba: ವಿಧಾನಸೌಧ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ: ಕನ್ನಡ ರಾಜ್ಯೋತ್ಸವ ಮಾಸದಲ್ಲೇ ಆಚರಣೆ, ಕನ್ನಡಿಗರ ವಿರೋಧ!
Urdu Habba: ಕನ್ನಡ ರಾಜ್ಯೋತ್ಸವ ತಿಂಗಳಿನಲ್ಲೇ ಕರ್ನಾಟಕ ಸರ್ಕಾರವು ಉರ್ದು ಹಬ್ಬ ಆಚರಣೆ ಮಾಡುವುದಕ್ಕೆ ಮುಂದಾಗಿದೆ. ಈ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಈಚೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು, ತುಳು ಭಾಷೆಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಗೆ ಅನ್ವಯವಾಗುವಂತೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ತುಳು ಭಾಷೆಗೂ ಹೆಚ್ಚುವರಿ ಆಡಳಿತ ಭಾಷೆಯನ್ನಾಗಿ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು. ಇದೀಗ ಕರ್ನಾಟಕ ಸರ್ಕಾರವು ನವೆಂಬರ್ ತಿಂಗಳಿನಲ್ಲಿ ಉರ್ದು ಹಬ್ಬ ಆಚರಣೆಗೆ ಮುಂದಾಗಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರವು ನವೆಂಬರ್ 9ರಂದು ಕರ್ನಾಟಕದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಇದೇ ಮೊದಲ ಬಾರಿಗೆ "ಉರ್ದು ಹಬ್ಬ'ವನ್ನು ಆಯೋಜಿಸಲು ಮುಂದಾಗಿದೆ. ಉರ್ದು ದಿನದ ಅಂಗವಾಗಿ ನವೆಂಬರ್ 9ರಂದು ಕರ್ನಾಟಕ ಸರ್ಕಾರವು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ "ಉರ್ದು ಹಬ್ಬ'ವನ್ನು ಆಯೋಜಿಸಲಿದೆ, ರಾಜ್ಯ ಸರ್ಕಾರವು ಮೊದಲ ಬಾರಿಗೆ ಈ ಐತಿಹಾಸಿಕ ಸ್ಥಳದಲ್ಲಿ ಈ ಕಾರ್ಯಕ್ರಮವನ್ನು ಯೋಜಿಸಿದೆ ಎಂದು ಸಚಿವ ಯು.ಟಿ ಖಾದರ್ ಅವರು ಹೇಳಿದ್ದಾರೆ.

"ಕರ್ನಾಟಕ ಪರ್ವ 2026'ರ ನಾಲ್ಕನೇ ದಿನದ ಸಂದರ್ಭದಲ್ಲಿ ಉರ್ದು ಪತ್ರಿಕೆಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಉರ್ದು ದಿನ ಕಾರ್ಯಕ್ರಮವನ್ನು ಘೋಷಿಸಿದ್ದಾರೆ.
ಉರ್ದು ಹಬ್ಬ ಉದ್ದೇಶವು ಭಾಷೆಯ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ವಿವಿಧ ಕಲಾ ಪ್ರಕಾರಗಳನ್ನು ಎಲ್ಲಾ ಸಮುದಾಯಗಳ ಜನರಿಗೆ ಪರಿಚಯಿಸುವುದು ಎಂದು ಸಚಿವ ಯು.ಟಿ ಖಾದರ್ ಅವರು ಹೇಳಿದ್ದಾರೆ. ಈ ಕಾರ್ಯಕ್ರಮವು ಸಾಹಿತ್ಯಿಕ ಚಟುವಟಿಕೆಗಳಿಗೆ ಸೀಮಿತವಾಗಿರದೆ, ಉರ್ದು ಸಂಸ್ಕೃತಿಯ ವಿವಿಧ ಅಂಶಗಳನ್ನು ಸಾಮಾನ್ಯ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತದೆ ಎಂದೂ ಅವರು ಹೇಳಿದ್ದಾರೆ.
ಪ್ರಸ್ತಾವಿತ ಉತ್ಸವವು ಉರ್ದು ಪುಸ್ತಕಗಳು, ಆಹಾರ, ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ವಿವಿಧ ಕಲಾ ಪ್ರಕಾರಗಳನ್ನು ಒಳಗೊಂಡಿರುತ್ತದೆ, ಇದು ಈ ಕಾರ್ಯಕ್ರಮಕ್ಕೆ ಬರುವವರಿಗೆ ಭಾಷೆಗೆ ಸಂಬಂಧಿಸಿದ ವೈವಿಧ್ಯಮಯ ಪರಂಪರೆಯನ್ನು ಅನುಭವಿಸಲು ಅವಕಾಶವನ್ನು ಒದಗಿಸುತ್ತದೆ. ವಿಧಾನಸೌಧವನ್ನು ಆವರಣದಲ್ಲಿ ವಿವಿಧ ಇಲಾಖೆಗಳು ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಸರ್ಕಾರದ ಕಾರ್ಯವೈಖರಿಯನ್ನು ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವ ಯು.ಟಿ ಖಾದರ್ ಅವರು ಹೇಳಿದ್ದಾರೆ. ಮುಂದುವರಿದು ಉರ್ದು ಭಾಷೆ ಮತ್ತು ಸಾಹಿತ್ಯದ ಪ್ರಮುಖ ಆಚರಣೆಯನ್ನು ಈ ಐತಿಹಾಸಿಕ ಸ್ಥಳದಲ್ಲಿ ಆಯೋಜಿಸಬಹುದು ಎಂದಿದ್ದಾರೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ಉರ್ದುವಿನ ಕೊಡುಗೆಯನ್ನು ಪರಿಚಯಿಸುವ ಸರ್ಕಾರ ಈ ಕಾರ್ಯಕ್ರಮವನ್ನು ಬಳಸಿಕೊಳ್ಳಲು ಉದ್ದೇಶಿಸಿದೆ. ಬರಹಗಾರರು, ಕವಿಗಳು ಹಾಗೂ ಕಲಾವಿದರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಕಾರ್ಯಕ್ರಮದ ವಿವರಗಳನ್ನು ಇನ್ನೂ ಘೋಷಿಸಿಲ್ಲ.
Urdu Habba: ಉರ್ದು ಹಬ್ಬಕ್ಕೆ ಕನ್ನಡಿಗರ ವಿರೋಧ
ಇನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಣೆಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗುತ್ತಿದೆ. ಗೀತ ರಚನೆಕಾರ ಹಾಗೂ ನಿರ್ದೇಶಕ ಕವಿರಾಜ್ ಅವರು, ಬೇಕಾ ಇದೆಲ್ಲಾ.. ?? ಮಾಡಬೇಕಾದ ಕೆಲಸ ಬಿಟ್ಟು ಅದೇನನ್ನೋ ಮಾಡಿದ್ರಂತೆ. ಕರ್ನಾಟಕ ಕನ್ನಡದ್ದು. ಕನ್ನಡಿಗರದ್ದು. ಇಲ್ಲಿ ಅದನ್ನು ಬಿಟ್ಟು ಹಿಂದಿ, ಉರ್ದು ಸೇರಿದಂತೆ ಬೇರೆ ಯಾವ ಭಾಷೆಯನ್ನು ಮೆರೆಸಬೇಕಿಲ್ಲ.
ಇದಕ್ಕೆ ಕನ್ನಡ ಪರರ ತೀವ್ರ ವಿರೋಧ ಶತಸಿದ್ಧ. ಈಗಾಗಲೇ ಪರಭಾಷಿಕರ ಹಾವಳಿ ಮಿತಿ ಮೀರಿ ನಮ್ಮ ಕನ್ನಡ ನಲುಗುತ್ತಿದೆ. ಇಂತಹಾ ಸ್ಥಿತಿಯಲ್ಲಿ ಹೇಳಿ ಕೇಳಿ ನವೆಂಬರ್ ತಿಂಗಳಲ್ಲಿ ಅದರಲ್ಲೂ ವಿಧಾನಸೌಧದ ಮೆಟ್ಟಿಲ ಮೇಲೆ ಉರ್ದು ಹಬ್ಬವಂತೆ. ನಿಮ್ಮ ಸ್ವಾರ್ಥ ಸಾಧನೆಗೆ ಕನ್ನಡಿಗರ ಸಹನೆಯನ್ನು ಕೆಣಕುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications
