UPSC Result: ಕರ್ನಾಟಕದ 25 ಮಂದಿ ಪಾಸ್: 644 ನೇ ರ‍್ಯಾಂಕ್ ಬಂದ PSI ಶಾಂತಪ್ಪನಿಗೆ ಗೃಹ ಸಚಿವರು ಕರೆ
ಬೆಂಗಳೂರು, ಏಪ್ರಿಲ್ 17: ಕೇಂದ್ರ ಲೋಕಸೇವಾ ಆಯೋಗ (UPSC) 2023 ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 25 ಮಂದಿ ರ‍್ಯಾಂಕ್ ಪಡೆದಿದ್ದಾರೆ. ಈ ಪೈಕಿ ಅನೇಕ ಅರ್ಭ್ಯರ್ಥಿಗಳು ಯಾವುದೇ ತರಬೇತಿ ಇಲ್ಲದೇ ಸ್ವಪ್ರಯತ್ನದಿಂದ ಸಾಧನೆ ಮಾಡಿದೆ. ಇದರಲ್ಲಿ ಬೆಂಗಳೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಾಂತಪ್ಪ ಕುರುಬರ್ ಎಂಬುವವರು ಇದ್ದಾರೆ. ಅವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ದೂರವಾಣಿ ಮೂಲಕ ಶ್ಲಾಘಿಸಿದ್ದಾರೆ.
ಕರ್ನಾಟಕ ರಾಜ್ಯದ ಈ 25 ಮಂದಿ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾಗುವ ಮೂಲಕ ಉನ್ನತ ಹುದ್ದೆಗೆ ಅಲಂಕರಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಬೆಂಗಳೂರು ಶ್ರೀರಾಂಪುರದ ಪಿಎಸ್‌ಐ ಶಾಂತಪ್ಪ ಕುರುಬರ್ (Shantappa Kurubar) ಸತತ ನಾಲ್ಕು ಭಾರಿ ಯತ್ನ ನಡೆಸಿದ್ದು, ನಾಲ್ಕನೇ ಭಾರಿಗೆ ಕನ್ನಡ ಭಾಷೆಯಲ್ಲಿಯೇ UPSC ಪರೀಕ್ಷೆ ಬರೆದು 644 ನೇ ರ್ಯಾಂಕ್ ಪಡೆದಿದ್ದಾರೆ.

ಡಾ.ಜಿ.ಪರಮೇಶ್ವರ ಶುಭಾಷಯ
ಇವರು ಬೆಂಗಳೂರಿನ ಶ್ರಿರಾಮ್ ಪುರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಯುಪಿಎಸ್‌ಸಿಯಲ್ಲಿ ಪಾಸಾದ ಸುದ್ದಿ ತಿಳಿದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಕರೆ ಮಾಡಿ ಶಾಂತಪ್ಪನಿಗೆ ಶುಭಾಷಯ ತಿಳಿಸಿದ್ದಾರೆ.
ಯಾವ ಕೋಚಿಂಗ್ ಸೆಂಟರ್ ನಲ್ಲಿ ಕೋಚಿಂಗ್ ಪಡೆಯದೇ ಕೈಲಿದ್ದ ಸರ್ಕಾರಿ ವೃತ್ತಿ ಮಾಡಿಕೊಂಡೆ ತಮ್ಮ ಪರಿಶ್ರಮದಿಂದಲೇ ನಿರಂತರ ವಿದ್ಯಾಭ್ಯಾಸ ಮಾಡಿಕೊಂಡು ಈ ಸಾಧನೆ ಮುಡಿಗೇರಿಸಿಕೊಂಡಿದ್ದಾರೆ. ಮೂಲತಃ ಬಳ್ಳಾರಿಯ ಜಿಲ್ಲೆ ಗೆಣಿಕೆಹಾಳ್ ಗ್ರಾಮದ ಇವರು ಕನ್ನಡ ಮಾಧ್ಯಮದಲ್ಲೇ ಓದಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದು ಉತ್ತೀರ್ಣರಾಗಿದ್ದಾರೆ. ಪೊಲೀಸ್ ಇಲಾಖೆಗೂ, ಕುಟುಂಬಕ್ಕೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಕನ್ನಡದಲ್ಲಿ ಪರೀಕ್ಷೆ ಬರೆಯುವುದು ಸುಲಭವಲ್ಲ
ಕನ್ನಡದಲ್ಲಿ ಯುಪಿಎಸ್‌ಇ ಪರೀಕ್ಷೆ ಬರೆಯುವುದು ಸುಲಭವಲ್ಲ. ಕಾರಣ ಕನ್ನಡದಲ್ಲಿ ಸಂಬಂಧಿಸಿದ ಪಠ್ಯ ಸಿಗುವುದಿಲ್ಲ. ಆದರೂ ನಿರಂತರ ಪ್ರಯತ್ನ ಮೂಲಕ ನಾನು ಕನ್ನಡದಲ್ಲಿಯೇ ಪರೀಕ್ಷೆ ಬರೆದು ಉತ್ತೀರ್ಣವಾಗಿದ್ದೇನೆ ಎಂದು ಅವರು ಮಾಹಿತಿ ನೀಡಿದರು.

ಪೊಲೀಸ್ ವೃತ್ತಿ ನಿರ್ವಹಿಸುತ್ತಲೇ ಸಾಮಾಜಿಕ ಅಭಿವೃದ್ಧಿ ಕಡೆಗೆ ಆದ್ಯತೆ ನೀಡುವಲ್ಲಿ ಯಶಸ್ವಿಯಾದವರು. ಬಡವರ ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರಬೇಕು ಎಂದು ಹತ್ತನೇ ತರಗತಿ ಮಕ್ಕಳಿಗೆ ಬಿಡುವಿದ್ದಾಗ ಟ್ಯೂಶನ್ ಹೇಳಿಕೊಟ್ಟಿದ್ದರು. ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯ ಜಂಕ್ಷನ್‌ನಲ್ಲಿ ಶೌಚಾಲಯಕ್ಕೆ ಅಭಿಯಾನ ನಡೆಸಿದ್ದರು. ಕೊನೆಗೆ ತಾವು ಒಂದು ಟಾಯ್ಲೆಟ್ ನಿರ್ಮಿಸುವು ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದರು.
ಕರ್ನಾಟಕದಿಂದ 25 ಮಂದಿ ಪರೀಕ್ಷೆ ಉತ್ತೀರ್ಣ
ಇವರ ಸೇರಿದಂತೆ ವಿಜಯಪುರದ ವಿಜೇತಾ ಹೊಸಮನಿ ಅವರು 100 ನೇ ರ‍್ಯಾಂಕ್ ಪಡೆದು ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಧಾರವಾಡದ ಸೌಭಾಗ್ಯ ಬೀಳಗಿಮಠ 101, ಆರ್ ಯಶಸ್ವಿನಿ 379ನೇ ರ‍್ಯಾಂಕ್ ಜಿಲ್ಲೆಯ ಕೃಪಾ ಜೈನ್ 440ನೇ ರ‍್ಯಾಂಕ್, ಲ್ಯಾಬ್ ಟೆಕ್ನಿಷಿಯನ್ ಪುತ್ರನಿಗೆ 481ನೇ ರ‍್ಯಾಂಕ್, ಚಾಮರಾಜನಗರ ಯುವಕ 671ನೇ ರ್ಯಾಂಕ್ ಪಡೆದಿದ್ದಾರೆ. ಹೀಗೆ ರಾಜ್ಯದಿಂದ ಒಟ್ಟು 25 ಮಂದಿ ಯುಪಿಎಸ್‌ಸಿಯಲ್ಲಿ ಪಾಸಾಗಿದ್ದಾರೆ.
UPSC ಸಾಧಕರಿಗೆ ಎಎಪಿ ಮೆಚ್ಚುಗೆ
ಕರ್ನಾಟಕದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಯಶಸ್ಸು ಸಾಧಿಸಿರುವುದು ಹೆಮ್ಮೆಯ ವಿಚಾರ. ಬಳ್ಳಾರಿಯ ಪಿಎಸ್‌ಐ ಶಾಂತಪ್ಪ ಕುರುಬರ್ ಅವರ ಸಾಧನೆ ಶ್ಲಾಘನಾರ್ಹ. ಎಲ್ಲ ಟಾಪರ್‌ಗಳಿಗೂ ಅಭಿನಂದನೆಗಳು ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.












Click it and Unblock the Notifications