ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ; ಅಪಾರ ಪ್ರಮಾಣದ ಬೆಳೆ ಹಾನಿ

|
Google Oneindia Kannada News

ಬೆಂಗಳೂರು, ನವೆಂಬರ್ 20: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನರ ಜೀವನ ಅಸ್ತವ್ಯಸ್ತದ ಜೊತೆಗೆ ಅಪಾರ ಪ್ರಮಾಣ ಬೆಳೆ ನಷ್ಟವಾಗಿದೆ.

ಜಿಟಿಜಿಟಿ ಮಳೆಯ ನಡುವೆ ವಾಹನ ಸವಾರರು ಪರದಾಡುತ್ತಿದ್ದಾರೆ. ಇನ್ನು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಕಂಗಾಲಾಗಿದ್ದಾರೆ. ಕಳೆದ 15 ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಒಮ್ಮೊಮ್ಮೆ ಜಿಟಿಜಿಟಿ ಮಳೆ, ಮತ್ತೊಮ್ಮೆ ಜೋರು ಮಳೆ ಸುರಿಯುತ್ತಿದ್ದು, ಮಳೆಯಿಂದ ಸಾಲುಸಾಲಾಗಿ ಅವಾಂತರಗಳು ಸೃಷ್ಟಿಯಾಗುತ್ತಿವೆ.

ಅಕಾಲಿಕ ವರ್ಷಧಾರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲೂ ಭಾರಿ ಅವಾಂತರವೇ ಸೃಷ್ಟಿಯಾಗಿದೆ. ದೇವನಹಳ್ಳಿ ತಾಲೂಕಿನ ಕೋಡಿಮಂಚೇನಹಳ್ಳಿ ಕೆರೆ ಕೋಡಿ ಬಿದ್ದು ಅಪಾರ ಹಾನಿಯಾಗಿದೆ. ನೂರಾರು ಎಕರೆ ಪ್ರದೇಶದಲ್ಲಿದ್ದ ತೋಟದ ಬೆಳೆ ಹಾನಿಯಾಗದ್ದು, ರೈತರು ಹೈರಾಣಾಗಿದ್ದಾರೆ. ಕಟಾವು ಹಂತಕ್ಕೆ ಬಂದಿದ್ದ ಸಾಕಷ್ಟು ಬೆಳೆಗಳು ಜಲಾವೃತವಾಗಿವೆ. ಇನ್ನು ಬೆಟ್ಟದ ಸಾಲುಗಳಿಂದ ನೀರು ಕೆರೆಗಳಿಗೆ ಹರಿದು ಬರುತ್ತಿದೆ.

Untimely Rain Causes Widespread Damage To Crops Across Karnataka

ಚಿಕ್ಕಬಳ್ಳಾಪುರ: ಬಿದ್ದ ಮನೆ ದುರಸ್ತಿಗೆ 5 ಲಕ್ಷ ರೂ. ಪರಿಹಾರ
ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರುಣನ ಪ್ರತಾಪ ಹೆಚ್ಚಳವಾಗಿದೆ. ಮಳೆ ಬರಲಿ ಎಂದು ಪರಿತಪ್ಪಿಸುತ್ತಿದ್ದ ಜಿಲ್ಲೆಯ ಜನತೆ ಇಂದು ಸಾಕಪ್ಪಾ ಸಾಕು ಎನ್ನುವಷ್ಟರ ಮಟ್ಟಿಗೆ ಮಳೆ ರೌದ್ರಾವತಾರ ತಾಳಿದೆ.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದ್ದು, 50 ವರ್ಷಗಳ ಇತಿಹಾಸದಲ್ಲಿ ಇಂತಹ ಮಳೆ ನೋಡಿಲ್ಲ. ಒಂದೆಡೆ ಸಂತಸವಾದರೆ, ಮತ್ತೊಂದೆಡೆ ಅನಾನುಕೂಲವಾಗಿ ಜನ ಪರಿತಪಿಸುವತಾಗಿದೆ ಎಂದು ಸಂತೋಷ ಮಿಶ್ರಿತ ವಿಷಾದ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಗೆ ಅಪಾರ ಬೆಳೆ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 436 ಮನೆಗಳು ನೆಲಸಮವಾಗಿದೆ. ಬಿದ್ದ ಮನೆ ದುರಸ್ತಿಗೆ 5 ಲಕ್ಷ ರೂ. ಪರಿಹಾರ ನೀಡುತ್ತೇವೆ, ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುತ್ತೇವೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಕಾಳಜಿ ಕೇಂದ್ರ ತೆರೆದಿದ್ದೇವೆ. ಇನ್ನೂ 2-3 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ. ನೀರು ಹರಿಯುವ ಕಡೆ ಹೋಗಬೇಡಿ ಎಂದು ಕಟ್ಟೆಚ್ಚರದ ಮನವಿ ಮಾಡಿಕೊಂಡ ಸಚಿವ ಸುಧಾಕರ್, ಜಿಲ್ಲೆಯಲ್ಲಿ ಈಗಾಗಲೇ 3 ಜನ ಕೊಚ್ಚಿ ಹೋಗಿದ್ದಾರೆ. ಸೇತುವೆಗಳ ಮೇಲೆ ಯಾರೂ ಹೋಗಬೇಡಿ ಎಂದು ವಿನಂತಿಸಿದರು.

ಜಿಲ್ಲಾಡಳಿತ ಮಳೆ ಹಾನಿ ನಿರ್ವಹಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ. 50 ವರ್ಷಗಳ ಇತಿಹಾಸದಲ್ಲಿ ಇಂತಹ ಮಳೆಯನ್ನೇ ನಾನು ನೋಡಿಲ್ಲ. ಒಂದೆಡೆ ಸಂತಸವಾದರೆ ಮತ್ತೊಂದೆಡೆ ಅನನುಕೂಲವಾಗಿದೆ. ಎಚ್ಚರಿಕೆಯ ಮಧ್ಯೆಯೂ ಕೆಲವರು ನೀರಿಗಿಳಿಯುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಜನರನ್ನು ಎಚ್ಚರಿಸಬೇಕು. ಮಳೆ ಆಪತ್ತನ್ನು ಎಲ್ಲರೂ ಒಗ್ಗಟ್ಟಗಾಗಿ ಎದುರಿಸೋಣ. ಮನೆ ಕಳೆದುಕೊಂಡವರು ಆತಂಕ ಪಡಬೇಕಾಗಿಲ್ಲ. ಜಿಲ್ಲಾಡಳಿತ ನಿಮ್ಮ ಜೊತೆ ಇರುತ್ತೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದರು.

Untimely Rain Causes Widespread Damage To Crops Across Karnataka

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ
ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಗಂಗಾವತಿ ತಾಲೂಕಿನ ಬಳಿಯ ನದಿ ಪಾತ್ರದಲ್ಲಿರುವ 64 ಕಂಬಗಳ ಹೊಂದಿರುವ ಶ್ರೀಕೃಷ್ಣದೇವರಾಯ ಮಂಟಪ ಜಲಾವೃತವಾಗಿದೆ.

ಜಲಾಶಯದಿಂದ ಈಗ 45 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಹೀಗಾಗಿ ಇಂದು (ನ.20) ಇನ್ನಷ್ಟು ಹೊರಹರಿವು ಹೆಚ್ಚಳವಾಗುವ ಸಾಧ್ಯತೆಯಿದೆ. ಇನ್ನು ಕೊಪ್ಪಳದಲ್ಲಿ ಮಳೆ ಆರ್ಭಟಕ್ಕೆ ಅಪಾರ ಭತ್ತದ ಬೆಳೆ ಹಾನಿಯಾಗಿದೆ. ಭತ್ತದ ಬೆಳೆ ಹಾನಿಯಾದರೂ ರೈತರು ಆತಂಕ ಪಡಬೇಕಾಗಿಲ್ಲ. ಬೆಳೆ ಹಾನಿ ಬಗ್ಗೆ ಕೃಷಿ ಸಚಿವರ ಗಮನಕ್ಕೆ ತರಲಾಗಿದೆ.

ಬೆಳೆಹಾನಿ ವರದಿ ಸಂಗ್ರಹಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಸಂಕಷ್ಟಕ್ಕೀಡಾದ ರೈತರ ಹಿತ ಕಾಯಲು ಸರ್ಕಾರ ಬದ್ಧ. ರೈತರಿಗೆ ಖಂಡಿತವಾಗಿ ಪರಿಹಾರ ಕೊಡಿಸುತ್ತೇವೆ ಅಂತ ಕಾರಟಗಿಯಲ್ಲಿ ಶಾಸಕ ಬಸವರಾಜ ದಡೇಸೂಗೂರು ಹೇಳಿದ್ದಾರೆ.

ಕೋಲಾರದಲ್ಲಿ ಶೇ.98ರಷ್ಟು ಕೆರೆಗಳು ತುಂಬಿವೆ
ವರುಣನ ಅರ್ಭಟಕ್ಕೆ ಕೋಲಾರ ಜಿಲ್ಲೆಯ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಕೋಲಾರ ನಗರ, ಬಂಗಾರಪೇಟೆ, ಶ್ರೀನಿವಾಸಪುರ ಪಟ್ಟಣ, ಗೌನಿಪಲ್ಲಿ, ಕೆಜಿಎಫ್ ನಗರದಲ್ಲಿ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ಇಬ್ಬರು ಮೃತಪಟ್ಟಿದ್ದು, 9 ಮನೆಗಳು ಬಿದ್ದಿದೆ. 306 ಮನೆಗಳು ಭಾಗಶಃ ಹಾನಿಯಾಗಿವೆ. ಬಿಜಿಎಸ್ ಶಾಲೆಯೂ ಮುಳುಗಡೆಯಾಗಿದೆ. ಇನ್ನು ಅಕಾಲಿಕ ಮಳೆಯಿಂದಾಗಿ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಜಿಲ್ಲೆಯ ಶೇ.98ರಷ್ಟು ಕೆರೆಗಳು ತುಂಬಿ ಕೋಡಿ ಹರಿದಿವೆ.

Untimely Rain Causes Widespread Damage To Crops Across Karnataka

ದಾವಣಗೆರೆಯಲ್ಲಿ ಭತ್ತ ನಾಶ
ದಾವಣಗೆರೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹರಿಹರ ತಾಲೂಕಿನಲ್ಲಿ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನೇನು ಎರಡು ದಿನಗಳಲ್ಲಿ ಕಟಾವು ಮಾಡಿ ಮಾರುಕಟ್ಟೆ ಹಾಕಬೇಕು ಅಂತಿದ್ದ ಅನ್ನದಾತರು ಕಂಗಾಲಾಗಿದ್ದಾರೆ. ಆದಾಪುರ, ಜಿಗಳಿ, ಮಲೇಬೆನ್ನೂರಿನಲ್ಲೂ ಸಾವಿರಾರು ಎಕರೆ ಭತ್ತ ಸಂಪೂರ್ಣ ನೆಲ ಕಚ್ಚಿದೆ.

ದಾವಣಗೆರೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಶುಕ್ರವಾರ ರಾತ್ರಿಯಿಂದ ಬಿಡದೆ ಬರುತ್ತಿರುವ ಮಳೆಯಿಂದಾಗಿ ಕೆರೆ ಕಟ್ಟೆಗಳು ಸಂಪೂರ್ಣ ಭರ್ತಿಯಾಗಿದೆ. ಚನ್ನಗಿರಿ ತಾಲೂಕಿನ ಗೋಪೇನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದೆ. ಮಾವಿನಹಳ್ಳಿ ಕೆರೆ ಭರ್ತಿಯಾಗಿ ಕೋಡಿಬಿದ್ದಿದೆ. ಜೋಳದಾಳ್ ಅಮ್ಮನಗುಡ್ಡದ ಕಲ್ಲು ಕಟ್ಟುವ ಚೌಡೇಶ್ವರಿ ದೇವಾಲಯ ಮುಳುಗಡೆಯಾಗಿದೆ. ಹರಿದ್ರಾವತಿ ಹಳ್ಳ ತುಂಬಿ ಹರಿದು ಚನ್ನಗಿರಿ ತಾಲ್ಲೂಕಿನ ಬುಳಸಾಗರ ಗ್ರಾಮದಲ್ಲಿರೋ ಸಿದ್ದರಾಮೇಶ್ವರ ರಂಗನಾಥಸ್ವಾಮಿ, ಆಂಜನೇಯ ಸ್ವಾಮಿ ದೇವಾಲಯಗಳಿಗೆ ನೀರು ನುಗ್ಗಿದೆ. ರೈಲ್ವೇ ಅಂಡರ್‌ಪಾಸ್ ಮುಳುಗಡೆಯಾಗಿದೆ.

ಕೊಡಗಿನ ಗದ್ದೆಗಳಲ್ಲಿ ನೀರು
ನಿರಂತರ ಮಳೆಯಿಂದ ಕೊಡಗಿನ ಹಲವೆಡೆ ಭತ್ತ, ಜೋಳದ ಬೆಳೆ ನಾಶವಾಗಿದೆ. ಗದ್ದೆಗಳಲ್ಲಿ ನೀರು ನಿಂತು ಭತ್ತದ ಬೆಳೆ ಕೊಳೆಯುತ್ತಿದೆ. ಇನ್ನು ಕುಶಾಲನಗರ ತಾಲ್ಲೂಕು ಒಂದರಲ್ಲೇ ಬರೋಬ್ಬರಿ 800 ಎಕರೆಯಷ್ಟು ಮೆಕ್ಕೆಜೋಳ ನಷ್ಟವಾಗಿದೆ. ಸತತ ಮಳೆಯಿಂದ ಮೆಕ್ಕೆಜೋಳ ಗಿಡದಲ್ಲೇ ಮೊಳಕೆ ಒಡೆಯುತ್ತಿದೆ. ಇದರಿಂದಾಗಿ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

Recommended Video

ರೈತರ ಕಾಯ್ದೆಗಳನ್ನು ಹಿಂಪಡೆದ ನರೇಂದ್ರ ಮೋದಿ | Oneindia Kannada

English summary
The torrential rains in many districts, including Bengaluru, have caused a huge loss of crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X