ಜೂನ್ 14ರ ಬಳಿಕ ಅನ್‌ಲಾಕ್; ತಜ್ಞರ ವರದಿ ಪ್ರಮುಖ ಅಂಶಗಳು
ಬೆಂಗಳೂರು, ಜೂನ್ 09; ಕರ್ನಾಟಕದಲ್ಲಿ ಅನ್‌ಲಾಕ್ ಬಗ್ಗೆ ಮಾತುಕತೆಗಳು ಆರಂಭವಾಗಿವೆ. ಜೂನ್ 30ರ ತನಕ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿದೆ.
ಜೂನ್ 14ರ ಬೆಳಗ್ಗೆ 6 ಗಂಟೆ ತನಕ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಬಳಿಕ ಹಂತ-ಹಂತವಾಗಿ ಅನ್‌ಲಾಕ್ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಅನ್‌ಲಾಕ್ ಕುರಿತು ತಾಂತ್ರಿಕ ಸಲಹಾ ಸಮಿತಿ ಸೋಮವಾರ ಸರ್ಕಾರಕ್ಕೆ ವರದಿ ನೀಡಿದೆ.
ಅಂಗಡಿ, ಮಾಲ್, ಹೋಟೆಲ್‌ಗಳನ್ನು ಮೊದಲು ನಾಲ್ಕು ಗಂಟೆಗಳ ಕಾಲ ಮಾತ್ರ ತರೆಯಲು ಅನುಮತಿ ನೀಡಬೇಕು ಎಂದು ಸಲಹೆ ನೀಡಿದೆ. ಧಾರ್ಮಿಕ ಕೇಂದ್ರಗಳು, ಈಜುಕೊಳ ಮುಂತಾದವುಗಳನ್ನು ಜೂನ್ 30ರ ತನಕ ಮುಚ್ಚಿರಲು ಸಲಹೆ ನೀಡಲಾಗಿದೆ.
ಜೂನ್ 14ರ ಬಳಿಕವೂ ಲಾಕ್‌ಡೌನ್ ವಿಸ್ತರಣೆ ಅಥವ ಅನ್‌ಲಾಕ್ ಮಾಡುವ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಎರಡು ದಿನದಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಲಾಕ್‌ಡೌನ್ ಜಾರಿ ಬಳಿಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಮಂಗಳವಾರ ರಾಜ್ಯದಲ್ಲಿ 9808 ಹೊಸ ಪ್ರಕರಣಗಳು ವರದಿಯಾಗಿವೆ.

ಜನರ ಸಂಚಾರ ನಿರ್ಬಂಧಿಸಬೇಕು
ಅನ್‌ಲಾಕ್ ಘೋಷಣೆ ಮಾಡಿದರೂ ಸಹ ಸೋಂಕು ಹೆಚ್ಚಿರುವ ಜಿಲ್ಲೆಗಳಿಂದ ಕಡಿಮೆ ಇರುವ ಜಿಲ್ಲೆಗಳಿಗೆ ಜನರ ಸಂಚಾರ ರದ್ದುಗೊಳಿಸಬೇಕು. ಇಡೀ ವರ್ಷ ಯಾವುದೇ ಚುನಾವಣೆಗಳನ್ನು ನಡೆಸಬಾರದು ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.

ಮಾರುಕಟ್ಟೆ 4 ಗಂಟೆ ಓಪನ್
ಅನ್‌ಲಾಕ್ ಘೋಷಣೆ ಮಾಡುತ್ತಿದ್ದಂತೆ ಮಾರುಕಟ್ಟೆಗಳನ್ನು ಸಹ ಮೊದಲು 4 ಗಂಟೆ ತೆರೆಯಬೇಕು. ಬಳಿಕ 10 ಗಂಟೆಗಳ ಕಾಲ ತೆರೆಯಲು ಅನುಮತಿ ನೀಡಬೇಕು. ಅನ್‌ಲಾಕ್ ಚಟುವಟಿಕೆಗಳನ್ನು ವಾರ, 15 ದಿನಗಳ ಅಂತರದಲ್ಲಿ ಆರಂಭಿಸಲು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎಲ್ಲಾ ಚಟುವಟಿಕೆ ಒಟ್ಟಿಗೆ ಆರಂಭಿಸುವುದು ಬೇಡ ಎಂದು ಸಲಹೆ ಕೊಡಲಾಗಿದೆ.

ಶೇ 50ರಷ್ಟು ಜನರು ಮಾತ್ರ ಸೇರಬೇಕು
ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ಸಂಪೂರ್ಣ ಚಟುವಟಿಕೆಗಳಿಗೆ ಅನುಮತಿ, ಶೇ 50ರಷ್ಟು ಚಟುವಟಿಕೆಗೆ ಅನುಮತಿ ಎಂದು ಪಟ್ಟಿಯನ್ನು ಮಾಡಲಾಗಿದೆ. ಪಬ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಮಾತ್ರ ಜನರು ಸೇರಲು ಅವಕಾಶ ನೀಡಬೇಕು. ಇದು ಮುಚ್ಚಿರುವ ಪ್ರದೇಶವಾದ್ದರಿಂದ ಈ ಕ್ರಮ ಅಗತ್ಯ ಎಂದು ಎಂದು ಸಲಹೆ ನೀಡಲಾಗಿದೆ.
Recommended Video

100 ರಿಂದ 200 ಜನರು ಮಾತ್ರ
2021ರ ಡಿಸೆಂಬರ್ ತನಕ ಮದುವೆ ಮತ್ತು ಇತರ ಸಮಾರಂಭಗಳಲ್ಲಿ 100 ರಿಂದ 200 ಜನರು ಸೇರಲು ಮಾತ್ರ ಅವಕಾಶ ನೀಡಬೇಕು ಎಂದು ಸಲಹೆಯನ್ನು ಕೊಡಲಾಗಿದೆ. ದೇವಾಲಯ, ಧಾರ್ಮಿಕ ಕಾರ್ಯಕ್ರಮಗಳಿಗೆ ಜೂನ್ ಅಂತ್ಯದ ತನಕ ಅವಕಾಶ ನೀಡಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಲಾಗಿದೆ.












Click it and Unblock the Notifications