ಸೌಹಾರ್ದ ವಾತಾವರಣ ನಿರ್ಮಿಸದೇ ಮಗಳನ್ನು ಸುಪರ್ದಿಗೆ ಕೇಳಲು ಅವಕಾಶವಿಲ್ಲ
ಬೆಂಗಳೂರು, ಮೇ 12; ಒಂಬತ್ತು ವರ್ಷ ಮಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸದ ತಂದೆಗೆ ಮಗಳನ್ನು ತನ್ನ ಸುಪರ್ದಿಗೆ ಕೇಳುವ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಮಗಳನ್ನು ತಂದೆ ಮತ್ತು ತಾಯಿಯೊಂದಿಗೆ ಸಮಾನವಾಗಿ ನೆಲೆಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ತಂದೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಪತಿಯ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಪೀಠ, 9 ವರ್ಷದ ಹೆಣ್ಣು ಮಗುವಿಗೆ ಸೌರ್ಹಾದಯುತ ವಾತಾವರಣ ನಿರ್ಮಸಲು ಸಾಧ್ಯವಾಗದ ತಂದೆ ಮಗುವನ್ನು ವಶಕ್ಕೆ ಕೇಳುವುದಕ್ಕೆ ಅರ್ಹರಿರುವುದಿಲ್ಲ. ಹಾಗಾಗಿ ಹೆಣ್ಣು ಮಗು ತಾಯಿಯೊಂದಿಗೆ ಇರಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ.

ಈ ಪ್ರಕರಣದಲ್ಲಿ ಕಳೆದ 5 ವರ್ಷಗಳಿಂದ ತಂದೆ-ತಾಯಿ ಜಗಳವಾಡುತ್ತಿರುವುದನ್ನು ಮಗು ಗಮನಿಸುತ್ತಿದೆ. ಫೋಷಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಬೌದ್ಧಿಕ ಶಕ್ತಿ ಮಕ್ಕಳಲ್ಲಿ ಇರುವುದಿಲ್ಲ. ಅಲ್ಲದೇ, ಮಗುವಿನ ಸಾಮಾಜಿಕ, ಭೌತಿಕ, ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೋಷಕರು ಸದಾಕಾಲ ಶ್ರಮಿಸಬೇಕು ಎಂದೂ ಸಹ ನ್ಯಾಯಾಲಯ ಹೇಳಿದೆ. ಅದೇ ಕಾರಣಕ್ಕೆ ಹೆಣ್ಣು ಮಗು ತನ್ನ ತಾಯಿಯೊಂದಿಗೆ ನೆಲೆಸಲು ಆಧ್ಯತೆ ನೀಡಬೇಕಾಗುತ್ತದೆ ಎಂದು ಏಕಸದಸ್ಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರತಿವಾದಿಗಳ ಪರ ವಕೀಲರು, ಮಗಳು ತಂದೆಯೊಂದಿಗೆ ಚನ್ನಾಗಿದೆ ಎಂಬುದನ್ನು ತೋರಿಸುವುದಕ್ಕಾಗಿ ತಂದೆಯೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಿರುವ ಫೋಟೋಗಳನ್ನು ತೆಗೆಯುತ್ತಿದ್ದಾರೆ. ಇದು ನಿಯಮ ಬಾಹಿರವಾಗಿದ್ದು, ಮಗುವನ್ನು ತಂದೆಯ ವಶಕ್ಕೆ ನೀಡಬಾರದು ಎಂದು ಕೋರಿದರು. ಅಲ್ಲದೇ, ಮಗುವನ್ನು ತನ್ನ ವಶಕ್ಕೆ ಪಡೆಯುವುದಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ಮತ್ತು ಮರು ಪರಿಶೀಲನಾ ಅರ್ಜಿ ವಜಾಗೊಂಡಿದೆ. ಈ ನಿಟ್ಟಿನಲ್ಲಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಅಂತರ್ ಧರ್ಮೀಯ ದಂಪತಿ 2005ರಲ್ಲಿ ವಿವಾಹವಾಗಿದ್ದು, 2014ರಲ್ಲಿ ಮಗು ಜನಿಸಿತ್ತು. ದಂಪತಿ ನಡುವಿನ ಉಂಟಾದ ಮನಃಸ್ಥಾಪದಿಂದ ಪತ್ನಿ ನಾಲ್ಕು ವರ್ಷದ ಮಗುವಿನೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಇದಾದ ಬಳಿಕ ಮಗುವನ್ನು ತನ್ನ ವಶಕ್ಕೆ ಪಡೆಯಲು ಪತಿ ನ್ಯಾಯಾಂಗ ಹೋರಾಟ ಆರಂಭಿಸಿ, ವಿಚ್ಚೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ತಾನು ಮಗುವಿಗೆ ಕಾನೂನು ಬದ್ಧ ಪೋಷಕರು ಎಂದು ಘೋಷಣೆ ಮಾಡಬೇಕು ಎಂದು ಕೋರಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು. ಇದಕ್ಕೆ ಪತ್ನಿ ವಿರೋಧ ವ್ಯಕ್ತ ಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಬೇಸಿಗೆ ರಜೆ ದಿನಗಳಲ್ಲಿ ಮಗಳು ತಂದೆಯೊಂದಿಗೆ ನೆಲೆಸಲು ಅವಕಾಶ ಮಾಡಿಕೊಟ್ಟಿತ್ತು. ಜತೆಗೆ ಪತ್ನಿ ಜೀವನಾಂಶ ನೀಡಲು ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಪತ್ನಿ (ಮಗುವಿನ ತಾಯಿ) ಮಗುವನ್ನು ತಂದೆಯಾದವರು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವುದಿಲ್ಲ. ಹೀಗಾಗಿ ಮಗುವನ್ನು ಪತಿಯ ವಶಕ್ಕೆ ನೀಡಬಾರದು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಿಚಾರಣೆ ಸಂದರ್ಭಕ್ಕೆ ಬೇಸಿಗೆ ರಜೆ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯಯನ್ನು ನ್ಯಾಯಾಲಯ ಇತ್ಯರ್ಥ ಪಡಿಸಿತ್ತು.
ಇದಾದ ಬಳಿಕ ಮಗಳನ್ನು ಸತಿ-ಪತಿಗೆ ಸಮಾನ ಅವಕಾಶ ನೀಡಬೇಕು ಎಂದು ಕೋರಿ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು, ಇದನ್ನು ಪರಿಗಣಿಸಿದ್ದ ನ್ಯಾಯಾಲಯ ವಾರದ ಮೂರು ದಿನಗಳಲ್ಲಿ ಕೌಟುಂಬಿಕ ನ್ಯಾಯಾಲಯದ ಮಕ್ಕಳ ಭೇಟಿ ಕೇಂದ್ರದಲ್ಲಿ ಮಗುವನ್ನು ಭೇಟಿ ಮಾಡುವುದಕ್ಕೆ ಪತಿಗೆ ಅವಕಾಶ ನೀಡಿತ್ತು. ಇದನ್ನು ಪ್ರಶ್ನಿ ಪತಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸಮಾನ ಅವಕಾಶ ನೀಡಬೇಕು ಎಂದು ಕೋರಿದ್ದರು.












Click it and Unblock the Notifications