ಪದ್ಮಶ್ರೀ ಒಲಿದ ವೆಂಕಪ್ಪ ಅಂಬಾಜಿ ಅವರಿಗೆ ಕೇಂದ್ರ ಸಚಿವ ಜೋಶಿ ಸನ್ಮಾನ
2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಬಾಗಲಕೋಟೆ ಜಿಲ್ಲೆಯ ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಟೇಕರ್ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದೆಹಲಿಯಲ್ಲಿ ಭೇಟಿಯಾಗಿ ಸನ್ಮಾನದ ಮೂಲಕ ಗೌರವಿಸಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ದೆಹಲಿ ನನ್ನ ನಿವಾಸದಲ್ಲಿ 2025ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ನಮ್ಮ ರಾಜ್ಯದ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ, ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಟೇಕರ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು ಎಂದು ಸಚಿವ ಜೋಶಿ ಹೇಳಿದ್ದಾರೆ.

ಗೊಂದಳಿ ಹಾಡಿನ ಮೂಲಕ ಸುದೀರ್ಘ ಕಲಾಸೇವೆ ಮಾಡಿಕೊಂಡಿರುವ ಇವರು 71 ವರ್ಷಗಳಿಂದ ಗೊಂದಳಿ ಪದಗಳನ್ನು ಹಾಡುತ್ತಿದ್ದು, ಜನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಅವರನ್ನು ಕೊಂಡಾಡಿದ್ದರು ಎಂದು ಶ್ಲಾಘಿಸಿದ್ದಾರೆ.
ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಶಾಲೆಗೆ ಹೋಗಿ ಓದು ಬರಹ ಕಲಿಯುವ ಅವಕಾಶ ಸಿಗದಿದ್ದರೂ ಇಂದು ಸಹಸ್ರಾರು ಹಾಡುಗಳನ್ನು ಜ್ಞಾಪಕ ಶಕ್ತಿಯಿಂದಲೇ, ಬಾಯಿಪಾಠದ ಮೂಲಕವೇ ಹಾಡಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಅವರಿಗೆ ಇಂದು ಆತ್ಮೀಯತೆಯಿಂದ ಅಭಿನಂದಿಸಿ ಪುಟ್ಟ ಗೌರವ ನಮನಗಳನ್ನು ಸಲ್ಲಿಸುವ ಸದಾವಕಾಶ ಒದಗಿ ಬಂದಿದ್ದು ನನಗೆ ಅತ್ಯಂತ ಸಂತೋಷ ತಂದಿದೆ ಎಂದು ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.
ವೆಂಕಪ್ಪ ಅಂಬಾಜಿ ಸುಗಟೇಕರ್ ಅವರು ಬಾಗಲಕೋಟೆಯ ನವನಗರ ನಿವಾಸಿ. ಪ್ರಧಾನಿ ಮೋದಿ ಅವರು 2014ರಲ್ಲಿ ನಡೆಸಿಕೊಟ್ಟ ಮನ್ ಕಿ ಬಾತ್ ರೇಡಿಯೊ ಸರಣಿಯ 110ನೇ ಕಾರ್ಯಕ್ರಮದಲ್ಲಿ ವೆಂಕಪ್ಪ ಅವರ ಗುಣಗಾನ ಮಾಡಿದ್ದರು. ಇವರ ಗೊಂದಳಿ ಗಾಯನವನ್ನು ಹೊಗಳಿದ್ದರು. ಇವರು ಒಂದು ರೂಪಾಯಿಯನ್ನೂ ಪಡೆಯದೆ ಸಾವಿರಾರು ಜನರಿಗೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿರುವ ಇವರ ಸೇವೆ ಶ್ಲಾಘನೀಯ ಎಂದು ಮೋದಿ ಕೊಂಡಾಡಿದ್ದರು.

ಕಂಚಿನ ಕಂಠದ ಮೂಲಕ ಗೋಂದಳಿ ಪದ ಹಾಡುವ ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಟೇಕರ್ ಅವರು ಕಳೆದ 71 ವರ್ಷದಿಂದ ಇದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಇವರ ಮುಡಿಗೇರಿವೆ. ಅಲ್ಲದೆ ಆಕಾಶವಾಣಿ, ದೂರದರ್ಶನ ಸೇರಿದಂತೆ ಸಾವಿರಾರು ಕಾರ್ಯಕ್ರಮಗಳು ಇವರಿಂದ ಮೂಡಿಬಂದಿವೆ. ಶಾಲೆಯಲ್ಲಿ ಅಕ್ಷರ ಕಲಿಯದ ಇವರು ತಮ್ಮ ವಂಶಪಾರಂಪರ್ಯವಾಗಿ ಬಂದ ಗೊಂದಲಿ ಪದಗಳ ಮೂಲಕವೇ ಇಂದು ಮನೆಮಾತಾಗಿದ್ದಾರೆ.
81ನೇ ವಯಸ್ಸಿನಲ್ಲೂ ವೆಂಕಪ್ಪ ಅವರು ತಮ್ಮ ಗಾಯನದ ಮೂಲಕ ಕೇಳುಗರನ್ನು ಮಗ್ನಗೊಳಿಸುತ್ತಾರೆ. ದಾಸರ ಪದ, ಸಂತ ಶಿಶುನಾಳರ ಪದ, ವಚನ ಸಾಹಿತ್ಯ ಸೇರಿದಂತೆ ಹಲವು ಪ್ರಕಾರದ ಹಾಡುಗಳನ್ನು ತಮ್ಮ ಗೊಂದಳಿ ಶೈಲಿಯಲ್ಲೇ ಹಾಡುತ್ತಾರೆ. ಸಾಮಾಜಿಕ ಸಮಸ್ಯೆಗಳನ್ನು ತಮ್ಮ ಹಾಡಿನ ಮೂಲಕವೇ ಅವರು ಜನರ ಮುಂದಿಡುವುದು ವಿಶೇಷ.
ಶಿಕ್ಷಣ ಕಲಿಯದ ಅವರಿಗೆ ಜ್ಞಾಪಕ ಶಕ್ತಿಯೇ ಆಧಾರ. ಸರಿಸುಮಾರು ಸಾವಿರಕ್ಕೂ ಅಧಿಕ ಹಾಡುಗಳನ್ನ ಹಾಡಿ ಬಾಯಿಪಾಠ ಮಾಡಿಕೊಂಡಿರುವ ಅವರು ಇಂದಿಗೂ ಸರಾಗವಾಗಿ ಹಾಡುತ್ತಾರೆ. ಈ ಕಲೆ ಅವರಿಗೆ ತಂದೆ ಮತ್ತು ತಾತನಿಂದ ಬಂದ ಬಳುವಳಿ ಎಂದರೆ ತಪ್ಪಾಗದು.












Click it and Unblock the Notifications