ಗೌರಿ ಹಬ್ಬದಂದೇ ನಿಖಿಲ್‌ಗೆ ಸಿಕ್ತು ಸ್ಪೆಷಲ್ ಗಿಫ್ಟ್; ಏನದು?
ಇಂದು ಎಲ್ಲೆಡೆ ಗೌರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜಕೀಯ ನಾಯಕರು ಕೂಡ ಈ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಹಬ್ಬದ ದಿನವೇ ತನ್ನ ತಂದೆ ಹಾಗೂ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪೆಷಲ್ ಗಿಫ್ಟ್‌ವೊಂದನ್ನು ನೀಡಿದ್ದಾರೆ.
ನಮಗೆಲ್ಲರಿಗೂ ಗೊತ್ತಿರುವ ಹಾಗೆ HMT ವಾಚ್‌ಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅಷ್ಟರಮಟ್ಟಿಗೆ ಕ್ರೇಜ್ ಹುಟ್ಟಿಸಿದ್ದವು HMT ವಾಚ್‌ಗಳು. ಎಚ್.ಡಿ.ಕುಮಾರಸ್ವಾಮಿ ಅವರು ಇದೇ ಎಚ್‌ಎಂಟಿ ವಾಚ್ ಅನ್ನು ತನ್ನ ಪುತ್ರ ನಿಖಿಲ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಈ ಹಬ್ಬದ ದಿನದಂದೇ ಅದನ್ನು ಖುದ್ದು ತಾವೇ ನಿಖಿಲ್ ಕೈಗೆ ತೊಡಿಸಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಿಖಿಲ್, ಎಚ್‌ಎಂಟಿ ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯನಾಡಿಯಾಗಿತ್ತು. ನಮ್ಮ ತಲೆಮಾರಿನ ಯುವಜನರಿಗೆ HMT ವಾಚ್ ಎಂದರೆ ಅದೊಂದು ದಂತಕಥೆ ಎಂದು ನೆನೆದಿದ್ದಾರೆ.
ನನ್ನ ಪೂಜ್ಯ ತಂದೆಯವರು ಹಾಗೂ ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಗೌರಿಹಬ್ಬದ ದಿನವಾದ ಇಂದು ಎಚ್‌ಎಂಟಿ ಕೈಗಡಿಯಾರ ಖರೀದಿಸಿ, ನನ್ನ ಕೈಗೆ ಕಟ್ಟಿದರು. ಈ ಸಂದರ್ಭದಲ್ಲಿ ಎಚ್‌ಎಂಟಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಕೋಹ್ಲಿ ಇನ್ನಿತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು ಎಂದು ಈ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಹಂಚಿಕೊಂಡಿದ್ದಾರೆ.
ಯುವ ಜನರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ ಎಚ್‌ಎಂಟಿ ಕೈಗಡಿಯಾರಗಳನ್ನೇ ಕಟ್ಟಬೇಕು ಎಂಬುದು ನನ್ನ ವಿನಂತಿ. ನಾನು ಎಚ್‌ಎಂಟಿ ಕೈಗಡಿಯಾರ ಕಟ್ಟಿದ್ದೇನೆ, ನೀವೂ ಕಟ್ಟಿ ಎಂದು ಮನವಿ ಮಾಡಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, #ನಮ್ಮHMT_ನಮ್ಮಹೆಮ್ಮೆ ಎಂದು ಕೊಂಡಾಡಿದ್ದಾರೆ.

ಎಚ್‌ಎಂಟಿ ಬ್ರ್ಯಾಂಡ್‌ನ ಇತಿಹಾಸ: ಅದೊಂದು ಕಾಲದಲ್ಲಿ 'ಎಚ್ಎಂಟಿ ವಾಚ್' ಹೆಸರು ಎಷ್ಟೊಂದು ಫೇಮಸ್ ಅಂದ್ರೆ, ಏನಿಲ್ಲ ಇರೋದ್ರಲ್ಲೆ ಸ್ವಲ್ಪ ಹೆಚ್ಚು ಬೆಲೆಯ ಎಚ್ಎಂಟಿ ವಾಚ್ ಕೈಗೆ ಕಟ್ಟಿ, ಹೆಗಲ ಮೇಲೆ ಟವಲ್ ಹಾಕಿಕೊಂಡು ಬಿಟ್ಟರೆ ಸಾಕಿತ್ತು. ಸುಖಾಸುಮ್ಮನೆ ಜನ ನಿಮ್ಮನ್ನೇ ಹೆಮ್ಮೆಯಿಂದಲೋ, ಹೊಟ್ಟೆಕಿಚ್ಚಿನಿಂದಲೋ ನೋಡುವಂತಾಗುತ್ತಿತ್ತು. ಹಾಗಿತ್ತು HMT ವೈಭವ.
ಅಷ್ಟೊಂದು ವೈಭವದಿಂದ ಮೆರೆಯುತ್ತಿದ್ದ 'ಎಚ್ಎಂಟಿ ವಾಚ್' ಕಾಲಗರ್ಭದಲ್ಲಿ ನಿಶ್ಯಬ್ಧಗೊಂಡಿತು. ಆದರೆ ಎಚ್ಎಂಟಿ ವಾಚ್ ತಯಾರಿಕಾ ಕಂಪನಿಯು ಈಗ ಪುನಶ್ಚೇತನದ ಹಾದಿಗೆ ಹೊರಳಿದೆ. ಅದೀಗ ತನ್ನ ಭೂತಕಾಲದ ಘಳಿಗೆಗಳನ್ನು ಮತ್ತೆ ಮೆಲುಕು ಹಾಕಲು ಸದ್ದಿಲ್ಲದೆ ಸಜ್ಜಾಗುತ್ತಿದೆ. ಅದಕ್ಕೆಂದೇ ಮೇಖ್ರಿ ವೃತ್ತದಲ್ಲಿರುವ 'ಎಚ್ಎಂಟಿ ಭವನ' ಇಂದಿಗೂ ತನ ಕಳೆದುಕೊಂಡಿಲ್ಲ.
1953ರಲ್ಲಿ ಸರಕಾರಿ ಸ್ವಾಮ್ಯದ ಕಂಪನಿಯಾಗಿ ಅಸ್ತಿತ್ವಕ್ಕೆ ಬಂದ ಹಿಂದೂಸ್ತಾನ್ ಮಶೀನ್ ಟೂಲ್ಸ್ (HMT) ಮೊನ್ನೆ ಮೊನ್ನೆಯ ತನಕ ಅಂದರೆ ದೇಶವು ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಳ್ಳುವವರೆಗೂ (1991) ವಿಜೃಂಭಿಸಿತ್ತು. 1962ರಲ್ಲಿ ಆರಂಭವಾದ 'ಎಚ್ಎಂಟಿ ವಾಚಸ್ ಲಿಮಿಟೆಡ್' ಸಂಸ್ಥೆ ಉದ್ಯಮ ವಲಯದಲ್ಲಿ ಉಚ್ಛ್ರಾಯ ಕಾಲ ತಲುಪಿತ್ತು. ಆದರೆ 1991ರಲ್ಲಿ 'ಕಾಲದ' ಹೊಡೆತಕ್ಕೆ ಸಿಕ್ಕಿ ನರಳಿತು. ಮತ್ತೆ ಈಗ ಆ ಸಂಸ್ಥೆ ಮೆರುಗು ಹೆಚ್ಚಿಸಿಕೊಂಡಿದೆ.












Click it and Unblock the Notifications