
ಕೊಡಚಾದ್ರಿ ರೋಪ್-ವೇ ಯೋಜನೆಗೆ ಅಸ್ತು, ಏನಿದು ಯೋಜನೆ?
ಬೆಂಗಳೂರು, ಅಕ್ಟೋಬರ್ 09; ಕೇಂದ್ರ ಸರ್ಕಾರ ಕೊಲ್ಲೂರಿನಿಂದ ಕೊಡಚಾದ್ರಿ ಬೆಟ್ಟಕ್ಕೆ ಸಾಗಲು ರೋಪ್-ವೇ ನಿರ್ಮಾಣ ಮಾಡಲು ಟೆಂಡರ್ ಕರೆಯಲು ತೀರ್ಮಾನಿಸಿದೆ. ಈ ಮೂಲಕ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಕ್ಕೆ ರೋಪ್-ವೇ ಸೌಲಭ್ಯ ಸಿಗಲಿದೆ.
ಮುಂದಿನ ವರ್ಷದ ಆರಂಭದಲ್ಲಿಯೇ ರೋಪ್-ವೇ ನಿರ್ಮಾಣ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಹಲವು ದಿನಗಳಿಂದ ಚರ್ಚೆಯ ಹಂತದಲ್ಲಿದ್ದ ಯೋಜನೆ ಕೊನೆಗೂ ಅನುಷ್ಠಾದನ ಹಂತವನ್ನು ತಲುಪಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕೊಡಚಾದ್ರಿ ಚಾರಣ ಮಾಡುವವರಿಗೆ ಸಿಹಿ ಸುದ್ದಿ
ಕೊಡಚಾದ್ರಿ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ. ಶಂಕರಾಚಾರ್ಯರು ತಪಸ್ಸು ಮಾಡಿದ ಪವಿತ್ರ ಕ್ಷೇತ್ರವಾದ ಕೊಡಚಾದ್ರಿಯಲ್ಲಿ ಸರ್ವಜ್ಞ ಪೀಠವೂ ಇದೆ. ಶ್ರೀ ಮೂಕಾಂಬಿಕೆ ಆರಾಧನೆ ಕ್ಷೇತ್ರವಾದ ಕೊಲ್ಲೂರು ಮತ್ತು ಕೊಡಚಾದ್ರಿ ನಡುವೆ ರೋಪ್-ವೇ ನಿರ್ಮಾಣದ ಬಗ್ಗೆ ಹಲವು ಹಂತದ ಚರ್ಚೆಗಳು ನಡೆದಿತ್ತು.
ಕೊಲ್ಲೂರು-ಕೊಡಚಾದ್ರಿ ನಡುವೆ ಕೇಬಲ್ ಕಾರ್ ಸಂಪರ್ಕ..!
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಪರ್ವತಮಾಲಾ ಯೋಜನೆಯಡಿ ಕೊಡಚಾದ್ರಿಗೆ ರೋಪ್-ವೇ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಕೊಡಚಾದ್ರಿ ಮಾತ್ರವಲ್ಲ ದೇಶದ 18 ಕಡೆಗಳಲ್ಲಿ ರೋಪ್-ವೇ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಟೆಂಡರ್ ಕರೆಯಲು ತೀರ್ಮಾನಿಸಿದೆ.
ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ

ಜೀಪ್ ಮೂಲಕ ತೆರಳಬೇಕು
ಕೊಡಚಾದ್ರಿ ಬೆಟ್ಟದ ಮೇಲೆ ತೆರೆಳಲು ಸಮರ್ಪಕವಾದ ರಸ್ತೆಗಳಿಲ್ಲ. ರಸ್ತೆಯನ್ನು ನಿರ್ಮಾಣ ಮಾಡಲು ಅರಣ್ಯ ಇಲಾಖೆಯ ನಿಯಮಗಳು ಅಡ್ಡಿಯಾಗಿವೆ. ಜೀಪ್ ಮೂಲಕ ಮಾತ್ರ ಬೆಟ್ಟದ ಮೇಲೆ ಸಾಗಬಹುದಾಗಿದೆ. ಆದರೆ ಈ ಜೀಪ್ ಬಾಡಿಗೆ ದುಬಾರಿ ಎಂಬುದು ಪ್ರವಾಸಿಗರ ಅಭಿಪ್ರಾಯವಾಗಿದೆ. ಕೊಲ್ಲೂರಿನಿಂದ ಕೊಡಚಾದ್ರಿ ಬೆಟ್ಟಕ್ಕೆ ರೋಪ್-ವೇ ನಿರ್ಮಾಣ ಮಾಡಿದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಅಲ್ಲದೇ ಕೊಲ್ಲೂರಿಗೆ ಭೇಟಿ ನೀಡುವ ಪ್ರವಾಸಿಗರು ಕೊಡಚಾದ್ರಿಗೆ ಸಹ ಭೇಟಿ ನೀಡಬಹುದಾಗಿದೆ ಎಂಬುದು ನಿರೀಕ್ಷೆಯಾಗಿದೆ. (ಚಿತ್ರಕೃಪೆ; ಶ್ರೀರಂಗ ಹೆಚ್. ಎನ್.)

ಪರಿಸರ ಸೂಕ್ಷ್ಮ ಪ್ರದೇಶವಾಗಿದೆ
ಪಶ್ಚಿಮ ಘಟ್ಟದ ಅಪಾರ ಜೀವ ವೈವಿದ್ಯ ಹೊಂದಿರುವ ಕೊಡಚಾದ್ರಿ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಈ ಪ್ರದೇಶ ಮೂಕಾಂಬಿಕ ಅಭಯಾರಣ್ಯಕ್ಕೂ ಸೇರುತ್ತದೆ. ಇಲ್ಲಿ ಯಾವುದೇ ಹೊಸ ಕಾಮಗಾರಿ ಕೈಗೊಳ್ಳುವ ಮೊದಲು ಕೇಂದ್ರ ಪರಿಸರ ಇಲಾಖೆ ಅನುಮತಿ ಬೇಕು. ಈಗ ಇಲಾಖೆ ರೋಪ್-ವೇ ನಿರ್ಮಾಣ ಕಾಮಗಾರಿಗೆ ಒಪ್ಪಿಗೆ ನೀಡಿರುವುದರಿಂದ ಯೋಜನೆ ಕಾರ್ಯಗತಗೊಳ್ಳುವುದು ಬಹುತೇಕ ಖಚಿತವಾಗಿದೆ. ಕೊಡಚಾದ್ರಿಗೆ ರಸ್ತೆ ನಿರ್ಮಾಣ, ಮೂಲ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆಯೂ ಒಪ್ಪಿಗೆ ನೀಡಿದರೆ ಪ್ರವಾಸೋದ್ಯಮಕ್ಕೆ ಮತ್ತಷ್ಟು ಸಹಾಯಕವಾಗಲಿದೆ.

15 ನಿಮಿಷದಲ್ಲಿ ಸಂಚಾರ ಮಾಡಬಹುದು
ಕೊಲ್ಲೂರು ದೇವಾಲಯಕ್ಕೆ ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಇವರಲ್ಲಿ ಕೊಡಚಾದ್ರಿಯ ಸರ್ವಜ್ಞ ಪೀಠಕ್ಕೆ ಹಲವಾರು ಭಕ್ತರು ಆಗಮಿಸುತ್ತಾರೆ. ಆದರೆ ಕೊಡಚಾದ್ರಿ-ಕೊಲ್ಲೂರು ನಡುವಿನ 40 ಕಿ. ಮೀ. ಸಂಚಾರ ನಡೆಸಲು ಯಾವುದೇ ಸರಿಯಾದ ರಸ್ತೆಗಳಿಲ್ಲ. ಸುಮಾರು ಒಂದೂವರೆಗಂಟೆ ಪ್ರಯಾಣ ಮಾಡಬೇಕಿದೆ. ಆದರೆ ರೋಪ್-ವೇ ನಿರ್ಮಾಣವಾದರೆ ಕೊಡಚಾದ್ರಿ-ಕೊಲ್ಲೂರು ನಡುವಿನ ಪ್ರಯಾಣದ ಅವಧಿ 7 ಕಿ. ಮೀ.ಗೆ ಇಳಿಕೆಯಾಗಲಿದ್ದು, 15 ನಿಮಿಷದಲ್ಲಿ ಸಾಗಬಹುದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ
ಕೊಡಚಾದ್ರಿ ಬೆಟ್ಟಕ್ಕೆ ರೋಪ್-ವೇ ನಿರ್ಮಾಣ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಈ ಕುರಿತ ಯೋಜನಾ ವರದಿಯೊಂದಿಗೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮತ್ತು ಶಾಸಕ ಸುಕುಮಾರ ಶೆಟ್ಟಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದರು. ಸುಮಾರು 6.68 ಕಿ. ಮೀ. ಉದ್ದದ ರೋಪ್-ವೇ ನಿರ್ಮಾಣವಾಗಲಿದೆ. ಯೋಜನೆಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು.
ಈಗ ಕೇಂದ್ರ ಸರ್ಕಾರ ಕೊಡಚಾದ್ರಿ, ಜಮ್ಮು ಮತ್ತು ಕಾಶ್ಮೀರ, ತ್ರಿಪುರ, ಅರುಣಾಚಲ ಪ್ರದೇಶ, ಮಣಿಪುರ, ತಮಿಳುನಾಡು ಸೇರಿದಂತೆ 18 ಕಡೆ ರೋಪ್-ವೇ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದೆ.

ಸಂಸದರ ಹೇಳಿಕೆ
ಕೊಲ್ಲೂರು-ಕೊಡಚಾದ್ರಿ ರೋಪ್-ವೇ ಯೋಜನೆ ಬಗ್ಗೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ, "ರೋಪ್-ವೇ ನಿರ್ಮಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರದಿಂದ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೀಗ ಕೇಂದ್ರ ಸರ್ಕಾರ 18 ಕಡೆ ರೋಪ್-ವೇ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದೆ. ಇದರಲ್ಲಿ ಕೊಡಚಾದ್ರಿಯನ್ನು ಸೇರ್ಪಡೆಗೊಳಿಸಿರುವುದು ಈ ಭಾಗದ ಜನರ ಬೇಡಿಕೆ ಈಡೇರಿದಂತೆ ಆಗಿದೆ" ಎಂದು ಹೇಳಿದ್ದಾರೆ.