Budget 2025: ಬೇಡಿಕೆಯಾಗಿಯೇ ಉಳಿದ ಹೋಟೆಲುಗಳ ಸಂಘದ ಮನವಿ, ರಾಜ್ಯಕ್ಕೆ ಅನ್ಯಾಯ: ಸಚಿವ
ಬೆಂಗಳೂರು, ಫೆಬ್ರವರಿ 01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಶನಿವಾರ ಫೆಬ್ರವರಿ 1ರಂದು ಬಹುನಿರೀಕ್ಷೆಯ ಬಜೆಟ್ ಮಂಡಿಸಿದ್ದಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಜನರ ಚಿತ್ತ ಕರ್ನಾಟಕ ಬಜೆಟ್ 2025 (Karnataka Budget 2025) ಮೇಲೆ ನೆಟ್ಟಿದೆ. ಮಾರ್ಚ್ ಎರಡನೇ ವಾರ (ಮಾ.14) ಸಿಎಂ ಸಿದ್ದರಾಮಯ್ಯ ಅವರು ಆಯವ್ಯಯ ಮಂಡಿಸಲಿದ್ದಾರೆ. ಕೇಂದ್ರಕ್ಕಾಗಿ ಈಗಾಗಲೇ 'ಬೆಂಗಳೂರು ಹೋಟೆಲುಗಳ ಸಂಘ'ವು ಮಹತ್ವದ ಬೇಡಿಕೆ ಇಟ್ಟು, ಪತ್ರ ಬರೆದಿತ್ತು. ಆದರೆ ಅವುಗಳು ಈಡೇರಿಲ್ಲ. ಯಾವುವು ಎಂಬ ವಿವರ ಇಲ್ಲಿದೆ.
ಬೆಂಗಳೂರು ಹೋಟೆಲುಗಳ ಸಂಘವು ರಾಜ್ಯ ಬಜೆಟ್ ಪೂರ್ವಭಾವಿಯಾಗಿ ಚರ್ಚಿಸಿ ಹೋಟೆಲ್ ಉದ್ಯಮದ ಪರವಾಗಿ ಕೇಂದ್ರ ಬಜೆಟ್ ನಲ್ಲಿ ಯಾವುದಕ್ಕೆಲ್ಲ ಪ್ರಾತಿನಿಧ್ಯ ನೀಡಬೇಕು ಎಂದು ತಿಳಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರದ ಮುಖೇನ ಮನವಿ ಮಾಡಲಾಗಿತ್ತು ಸಂಘದ ಅಧ್ಯಕ್ಷ ಪಿಸಿ. ರಾವ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಹೋಟೆಲ್‌ಗಳ ಸಂಘವು ರಾಷ್ಟ್ರೀಯ ಆರ್ಥಿಕ ಬೆಳವಣಿಗೆ, ಉದ್ಯೋಗ ಮತ್ತು ಪ್ರವಾಸೋದ್ಯಮಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುವ ನಿರ್ಣಾಯಕ ವಲಯವಾದ ಹೋಟೆಲ್ ಉದ್ಯಮದ ಪರವಾಗಿ ಪ್ರತಿನಿಧಿಸುತ್ತೇವೆ. ನಮ್ಮ ಉದ್ಯಮದ ಸುಸ್ಥಿರತೆ ಮತ್ತು ಬೆಳವಣಿಗೆಗೆ ಅತ್ಯಗತ್ಯ ಎಂದು ನಾವು ನಂಬುವ ಹಲವಾರು ಪ್ರಮುಖ ಶಿಫಾರಸುಗಳು ಮಾಡಿದ್ದೇವು.
* ಆದಾಯ ತೆರಿಗೆ: ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 36(1) (va) ಅಡಿಯಲ್ಲಿ ತಡವಾಗಿ ಠೇವಣಿ ಇಡುವುದರಿಂದ EPF ಮತ್ತು ESIC ಕೊಡುಗೆಯನ್ನು ನಿರಾಕರಿಸುವುದಕ್ಕೆ ತಿದ್ದುಪಡಿ ತರಬೇಕು.
* FSSAI: ಈ ಪರವಾನಗಿಯನ್ನು ಶಾಶ್ವತಗೊಳಿಸಬೇಕು (ಒಂದು ಬಾರಿ ಜೀವಿತಾವಧಿ).
* ಅಸ್ತಿತ್ವದಲ್ಲಿರುವ EPF ಸ್ಲ್ಯಾಬ್ ರೂ.15,000/- ಅನ್ನು ಉಳಿಸಿಕೊಳ್ಳಬೇಕು.
* ಸರಕು ಮತ್ತು ಸೇವಾ ತೆರಿಗೆ (GST) ವಿವಾದಗಳಿಗೆ ಕ್ಷಮಾದಾನ ಯೋಜನೆಯನ್ನು ತರಬೇಕು. GST ಯಲ್ಲಿ ನಿಯಮಗಳು ಮತ್ತು ನಿಯಮಗಳನ್ನು ಬಳಕೆದಾರ ಸ್ನೇಹಿಯನ್ನಾಗಿ ಮಾಡಬೇಕು.
* ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 10 ಗೆ ಇಳಿಸಬೇಕು ಇಲ್ಲದಿದ್ದರೆ ಅದನ್ನು ಸರಕು ಮತ್ತು ಸೇವಾ ತೆರಿಗೆ (GST) ಅಡಿಗೆತರಬೇಕು ಎಂಬ ಬೇಡಿಕೆ ಇಡಲಾಗಿತ್ತು. ಇವು ಅಷ್ಟೇ ಅಲ್ಲ ಬೆಂಗಳೂರು ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಯಾವ ಘೋಷಣೆ, ಸಮಸ್ಯೆಗೆ ಪರಿಹಾರಗಳು ಇಂದಿನ ಕೇಂದ್ರ ಬಜಟ್‌ನಲ್ಲಿ ಘೋಷಣೆ ಆಗಿಲ್ಲ.

ಕೇಂದ್ರ ಬಜೆಟ್: ಕರ್ನಾಟಕಕ್ಕೆ ಅನ್ಯಾಯ: ಸಚಿವ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2025-26ನೇ ಸಾಲಿನ ಬಜೆಟ್ ನಿರಾಶದಾಯಕವಾದ ಬಜೆಟ್ ಆಗಿದ್ದು, ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದರು.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಗ್ರಾಮೀಣ ಭಾಗದಲ್ಲಿ ಯಾರ ಬಳಿಯೂ ಹಣವಿಲ್ಲ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರು ಕಣ್ಣೀರು ಹಾಕುವಂತಾಗಿದೆ. ವಿಪರ್ಯಾಸವೆಂದರೆ ದೇಶದಲ್ಲಿ ಅಂದಾಜು ಶೇ.45ರಿಂದ 50ರಷ್ಟು ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ ಉದ್ಯೋಗ ಸೃಷ್ಟಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ನಿಜಕ್ಕೂ ನಮ್ಮ ದುರ್ದೈವ ಎಂದರು.
ಬಜೆಟ್ ನಿಂದ ಸಣ್ಣ ಕೈಗಾರಿಕೆಗಳಿಗೆ ಯಾವುದೇ ಅನುಕೂಲವಾಗಿಲ್ಲ. ರೈಲ್ವೆ, ಶಿಕ್ಷಣ, ಮೂಲಸೌಲಭ್ಯ ಯೋಜನೆಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ರೈತರ, ಮಹಿಳೆಯರ, ದಲಿತರ ವಿರೋಧಿ ಬಜೆಟ್ ಆಗಿದೆ. ಅಕ್ಟೋಬರ್ ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯಕ್ಕೆ ವಿಶೇಷವಾದ ಯೋಜನೆಗಳನ್ನು ಘೋಷಿಸುವ ಮೂಲಕ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವರು ಬಿಹಾರ ರಾಜ್ಯದ ಜಪಾ ಮಾಡಿದ್ದಾರೆ ಎಂದು ಟೀಕಿಸಿದರು.
ಕೇಂದ್ರದಿಂದ ನಾವು ಏನನ್ನು ನಿರೀಕ್ಷೆ ಮಾಡಿರಲಿಲ್ಲ. ಈ ಹಿಂದೆ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5330 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಇಲ್ಲಿ ತನಕ ನಯಾಪೈಸೆ ನೀಡಿಲ್ಲ. ನಮಗೆ ಕೊಡಬೇಕಾದ ನ್ಯಾಯಯುತವಾದ ತೆರಿಗೆ ಪಾಲಿನ ಹಣವನ್ನೇ ಕೇಂದ್ರ ನೀಡುತ್ತಿಲ್ಲ. ಇಂತಹವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ? ಒಟ್ಟಾರೆ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಪುನರುಚ್ಚರಿಸಿದರು.












Click it and Unblock the Notifications